Advertisement

ಒಂದು ಲಾಠಿ ಏಟಿಗೆ 1 ರೂ.ಪರಿಹಾರ ಕೊಟ್ಟ ಸರ್ಕಾರ!

12:35 PM Jun 08, 2017 | Team Udayavani |

ವಿಧಾನಸಭೆ: ಕಳಸಾ-ಬಂಡೂರಿ ಹೋರಾಟದ ವೇಳೆ ರೈತರ ಮೇಲೆ ನಡೆದ ಪೊಲೀಸ ದೌರ್ಜನ್ಯ ಪ್ರಕರಣ ಕುರಿತು ಐಪಿಎಸ್‌ ಅಧಿಕಾರಿ ಔರಾದ್‌ ಕರ್‌ ಸಮಿತಿಯ ವರದಿ ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ ಸರ್ಕಾರ ನೀಡಿದ ಪುಡಿಗಾಸು ಪರಿಹಾರ ಬುಧವಾರ ವಿಧಾನಸಭೆಯಲ್ಲಿ ಸ್ವಲ್ಪ ಹೊತ್ತು ಕೋಲಾಹಲಕ್ಕೆ ಕಾರಣವಾಯಿತು.

Advertisement

ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಆಡಳಿತ ಸದಸ್ಯ ಎ.ಎಸ್‌.ಪಾಟೀಲ್‌ ನಡಹಳ್ಳಿ, ನೀರಿಗಾಗಿ ಹೋರಾಟ ಮಾಡುತ್ತಿದ್ದ ಧಾರವಾಡ ಜಿಲ್ಲೆಯ ಯಮನೂರು, ಅರೆಕುರಹಟ್ಟಿ ಮತ್ತು ಅಳಗವಾಡಿ ಗ್ರಾಮದ ರೈತರು, ರೈತ ಮಹಿಳೆಯರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿ ರೈತ ಕುಲಕ್ಕೆ ಅವಮಾನ ಮಾಡಿದ್ದಾರೆ. ಪ್ರಕರಣದಲ್ಲಿ ತೀವ್ರ ಗಾಯಗೊಂಡ ಮೂವರು ಸಾವನ್ನಪ್ಪಿದ್ದು, ಅವರ ಪೈಕಿ ಒಬ್ಬ ರೈತನ ಕುಟುಂಬಕ್ಕೆ ಮಾತ್ರ 15 ಲಕ್ಷ ರೂ . ಪರಿಹಾರ ನೀಡಲಾಗಿದೆ. ಇನ್ನಿಬ್ಬರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಇದೀಗ ಗಾಯಗೊಂಡವರ ಕುಟುಂಬಕ್ಕೆ ಸರ್ಕಾರ ಪರಿಹಾರ ಪ್ರಕಟಿಸಿದ್ದು, ಕೆಲವರಿಗೆ 500 ರೂ., ಕೆಲವರಿಗೆ 300 ರೂ., ಕೆಲವರಿಗೆ 10 ಸಾವಿರ ರೂ. ಕೊಟ್ಟಿದೆ. ರೈತರಿಗೆ ಪ್ರತಿ ಲಾಠಿ ಏಟಿಗೆ ಒಂದು ರೂ. ಬೆಲೆ ಕಟ್ಟಿದೆ. ಕೂಡಲೇ ಸರ್ಕಾರ ಈ ಪರಿಹಾರದ ಆದೇಶವನ್ನು ಹಿಂದಕ್ಕೆ ಪಡೆದು ಎಲ್ಲರಿಗೂ ಕನಿಷ್ಠ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮಾತಿನ ಚಕಮಕಿ: ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಶೆಟ್ಟರ್‌, ಯಮನೂರು ಲಾಠಿಪ್ರಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೆ, ಸರ್ಕಾರ ದೌರ್ಜನ್ಯಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. 200, 300 ರೂ. ಪರಿಹಾರ ನೀಡಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೂಡಲೇ ಈ ಪರಿಹಾರ ಆದೇಶ ಹಿಂಪಡೆದು ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸದ ಸಚಿವ ವಿನಯ್‌ ಕುಲಕರ್ಣಿ, ಇದೆಲ್ಲದಕ್ಕೂ ಮೂಲ ಸಮಸ್ಯೆ ಕಳಸಾ-ಬಂಡೂರಿಯಾಗಿದ್ದು, ನೀವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಹೇಳಿದರು.

ಇದರಿಂದ ಕೆರಳಿದ ಶೆಟ್ಟರ್‌, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ದೌರ್ಜನ್ಯಕ್ಕೆ ಒಳಗಾಗದ ರೈತರಿಗೆ ಇನ್ನೂರು, ಮುನ್ನೂರು ರೂ. ಪರಿಹಾರ ನೀಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು. ಎಲ್ಲದರಲ್ಲೂ ರಾಜಕೀಯ ತರಬೇಡಿ. ಸುಮ್ಮನೆ ಕೂಳಿತುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.

ಮಧ್ಯಪ್ರವೇಶಿಸಿದ ಸಚಿವ ಆರ್‌.ವಿ.ದೇಶಪಾಂಡೆ, ಈ ಬಗ್ಗೆ ಗುರುವಾರ ಉತ್ತರ ಕೊಡಿಸುವುದಾಗಿ ಹೇಳಿದರು. ಈ ಭರವಸೆಗೆ ತೃಪ್ತರಾಗದ ಎ.ಎಸ್‌ .ಪಾಟೀಲ್‌ ನಡಹಳ್ಳಿ, ಕಡಿಮೆ ಪರಿಹಾರದ ಆದೇಶ ರದ್ದುಗೊಳಿಸುವವರೆಗೂ ನಾನು ಬಿಡುವುದಿಲ್ಲ. ಸಭಾಧ್ಯಕ್ಷರ ಪೀಠದ ಎದುರು ಧರಣಿ ಮಾಡುತ್ತೇನೆ ಎಂದು ಹೇಳಿದಾಗ, ನಿರಂಕುಶ ಪ್ರಭುವಿನಂತೆ ಮಾತನಾಡಬೇಡಿ. ಸದನಕ್ಕೆ ಗೌರವ ಕೊಡಿ ಎಂದು ಸಚಿವ ರಮೇಶ್‌ಕುಮಾರ್‌ ಸೂಚಿಸಿದರು.

Advertisement

ತಿರುಗೇಟು ನೀಡಿದ ಪಾಟೀಲ್‌, ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ನೀವು ಸಭಾತ್ಯಾಗ ಮಾಡಿದ್ದು ಮರೆತುಹೋಯಿತೇ? ಎಂದರು. ಕೊನೆಗೆ ಗುರುವಾರ ಸರ್ಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ಕೊಟ್ಟ ಮೇಲೆ ಚರ್ಚೆ ಅಂತ್ಯ ಕಂಡಿತು.

ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ, ಕೊನೆ ಪಕ್ಷ ನಾಚಿಕೆ ಇದ್ದರೆ ಯಮನೂರು ಲಾಠಿಚಾರ್ಜ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್‌ಕರ್‌ ಮತ್ತು ಕಮಲ್‌ ಪಂತ್‌ ಅವರ ತನಿಖಾ ವರದಿಯನ್ನು ಸದನಕ್ಕೆ ಮಂಡಿಸಬೇಕು. ಅಮಾಯಕರ ಮೇಲೆ ದೌರ್ಜನ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದನ್ನು ಬಿಟ್ಟು ಹುಳುಕು ಮುಚ್ಚಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ರೈತರ ವಿಚಾರದಲ್ಲಿ ಸಂವೇದನೆಯೇ ಇಲ್ಲವಾಗಿದೆ.
-ಜಗದೀಶ್‌ ಶೆಟ್ಟರ್‌, ಪ್ರತಿಪಕ್ಷ ನಾಯಕ

ಒಂದು ಲಾಠಿ ಏಟಿಗೆ ಒಂದು ರೂಪಾಯಿ ಲೆಕ್ಕ ಹಾಕಿ ಸರ್ಕಾರ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಕಳಸಾ-ಬಂಡೂರಿ ಹೊರಾಟಗಾರರಿಗೆ ಪರಿಹಾರ ನೀಡಿದೆ. 10 ಹೊಡೆತ ತಿಂದ ಗರ್ಭಿಣಿ ಸ್ತ್ರೀಗೆ 10 ರೂಪಾಯಿ ಪರಿಹಾರ ನೀಡಿದೆ. ಸರ್ಕಾರಕ್ಕೆ ನಾಚಿಕೆ ಎಂಬುದೇ ಇಲ್ಲ. 
– ಎ.ಎಸ್‌.ಪಾಟೀಲ್‌ ನಡಹಳ್ಳಿ, ಕಾಂಗ್ರೆಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next