ದೇವನಹಳ್ಳಿ: ಮಕ್ಕಳ ಹಕ್ಕುಗಳು ಹಾಗೂ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳುವ ಮಕ್ಕಳ ಗ್ರಾಮಸಭೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಪ್ರತಿವರ್ಷವೂ ಸಹ ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಲು ಸರ್ಕಾರ ಆದೇಶ ಹೊರಡಿಸಿಕೊಂಡು ಬಂದಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳು, ಶಾಲೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಗ್ರಾಮಸಭೆ ಮಹತ್ವ ತಿಳಿದುಕೊಳ್ಳಲು ಸರ್ಕಾರ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಿದೆ. ಈ ಹಿನ್ನೆಲೆ ಪ್ರತಿವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರತಿ ಗ್ರಾಪಂಮಟ್ಟದಲ್ಲಿ ಮಕ್ಕಳ ಗ್ರಾಮಸಭೆ ಆಯೋಜಿಸಿ ಮಕ್ಕಳ ಆತ್ಮಸ್ಥೈರ್ಯ ವೃದ್ಧಿಗೆ ಸಹಕಾರಿ ಆಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.
ಮಕ್ಕಳ ಭಾಗವಹಿಸುವಿಕೆಗೆ ಅವಕಾಶ: ರಾಜ್ಯ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆ, ಗ್ರಾಪಂಗಳಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ನಡೆಸಲು 2006ರಲ್ಲಿ ಪ್ರಮುಖ ನಿಲುವನ್ನು ತೆಗೆದುಕೊಂಡು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಭಾರತದ ಸಂವಿಧಾನದಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಮಾನ್ಯ ಮಾಡುವುದರಲ್ಲಿ ಮಹತ್ತರವಾದ ಹೆಜ್ಜೆಯನ್ನು ಇರಿಸಿದೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ: 2006ರಿಂದ ಪ್ರತಿವರ್ಷವೂ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ನಡೆಸಿಕೊಂಡು ಬರಲಾಗಿದೆ. ಪ್ರಸ್ತುತ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನ.14ರಿಂದ ಜ.24ರವೆಗೆ 10 ವಾರ ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ನಡೆಸಲು ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಪಂಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳನ್ನು ಕಡ್ಡಾಯವಾಗಿ ನಡೆಸಲು ಆದೇಶವಿದ್ದು, ಈ ಹಿಂದಿನ ಸಾಲಿನಲ್ಲಿ ಗ್ರಾಮಸಭೆ ನಡೆದಿರದ ಕಾರಣ ಈ ಬಾರಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಹಾಗೂ ಗ್ರಾಮ ಸಭೆಗಳು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆ ಇದೆ. ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಗ್ರಾಪಂಗಳು ಮತ್ತು ವಿಕಾಸ ಸಾಮಾಜಿಕ ಮತ್ತು ಶೈಕ್ಷಣಿಕಾಭಿವೃದ್ಧಿ ಸಂಸ್ಥೆಯು ಜಂಟಿಯಾಗಿ ಎಲ್ಲಾ ಗ್ರಾಪಂಗಳಲ್ಲಿ ಕಡ್ಡಾಯವಾಗಿ ನಡೆಸಲು ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಕಳೆದ 8 ವರ್ಷಗಳಿಂದ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಮಕ್ಕಳಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅನುಭವವನ್ನು ಹೊಂದಿವೆ.
ಜಿಲ್ಲಾದ್ಯಂತ ನ.14ರಿಂದ ಪ್ರತಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಮಾಡಲು ಆದೇಶ ಇರುತ್ತದೆ. ಗ್ರಾಪಂ ಹಂತದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ಅವರ ಸಮಸ್ಯೆಗೆ, ಶಾಲೆಗಳಲ್ಲಿ ದೌರ್ಜನ್ಯ ಹೀಗೆ ಹಲವಾರು ರೀತಿಯ ಸಮಸ್ಯೆಗೆ ದನಿಗೂಡಿಸಿ ಪರಿಹಾರ ಕೊಡಿಸುವ ಸರ್ಕಾರದ ಮಹತ್ವದ ಕಾರ್ಯಕ್ರಮ ಇದಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಗ್ರಾಮಸಭೆ ಮಾಡಲಾಗುತ್ತದೆ.
– ಎಚ್.ಡಿ. ವಸಂತ್‌ಕುಮಾರ್, ತಾಪಂ ಇಒ
ನವೆಂಬರ್ 14 ಮಕ್ಕಳ ದಿನಾಚರಣೆಯಿದ್ದು, ಅದಕ್ಕಾಗಿ ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ಮಕ್ಕಳ ಗ್ರಾಮಸಭೆ ಮಾಡಿ ಶಾಲೆಗಳಲ್ಲಿ ಕುಂದು-ಕೊರತೆಗಳ ಪಟ್ಟಿ ಮಾಡಿ ಮಕ್ಕಳಿಂದ ಮನವಿ ಸ್ವೀಕರಿಸಬೇಕು. ಶಾಲೆಗೆ ಮತ್ತು ಮಕ್ಕಳಿಗೆ ತೊಂದರೆಯಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಎಲ್ಲಾ ತಾಲೂಕಿನ ಗ್ರಾಪಂಗಳಿಗೆ ಮಕ್ಕಳ ಗ್ರಾಮಸಭೆ ಮಾಡಲು ಆದೇಶ ಹೊರಡಿಸಲಾಗಿದೆ.
-ಕೆ.ರೇವಣಪ್ಪ, ಜಿಪಂ ಸಿಇಒ
-ಎಸ್. ಮಹೇಶ್