ಹೊಸದಿಲ್ಲಿ: ಮಾನವ ಮತ್ತು ಪ್ರಾಣಿಗಳ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಿ, 27 ಕೀಟನಾಶಕಗಳನ್ನು ನಿಷೇಧ ಮಾಡಲು ಕೇಂದ್ರ ಸರಕಾರ ಚಿಂತಿಸಿದೆ.
ಅದಕ್ಕೂ ಮುನ್ನ ಆಯಾ ಕೀಟನಾಶಕ ತಯಾರಕ ಸಂಸ್ಥೆಗಳ ಆಕ್ಷೇಪಣೆಗಳಿಗೆ ಕಿವಿಗೊಡಲಿದೆ.
ಅತಿವಿಷಕಾರಿ ಎಂದೇ ಪರಿಗಣಿಸಲಾಗಿದ್ದ 66 ಕೀಟನಾಶಕಗಳ ಪೈಕಿ, 27ರ ಅಂತಿಮಪಟ್ಟಿಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. 66ರ ಪೈಕಿ 18 ಕೀಟನಾಶಕಗಳನ್ನು 2018ರಲ್ಲಿಯೇ ನಿಷೇಧಿಸಲಾಗಿದೆ.
‘ಪ್ರಸ್ತುತ ಈ ನಿಷೇಧ ಕ್ರಮದ ಬಗ್ಗೆ ಕರಡು ಗೆಜೆಟ್ ಅಧಿಸೂಚನೆ ಬಿಡುಗಡೆ ಮಾಡಿದ್ದೇವೆ. ಕಂಪೆನಿಗಳ ಆಕ್ಷೇಪಣೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇ 14ರಿಂದ 45 ದಿನಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ’ ಎಂದು ಕೃಷಿ ಸಚಿವಾಲಯ ಹೇಳಿದೆ.
ಮೊನೊಕ್ರೊಟೊಪೊಸ್, ಅಸೆಫೇಟ್, ಕಾರ್ಬೋಫ್ಯುರಾನ್, ಕಾರ್ಬೆಂಡಝಿಮ್ ಸೇರಿದಂತೆ ಈ 27 ಕೀಟನಾಶಕಗಳು ಜಲಮೂಲ ಹಾಗೂ ಭೂಮಿಯನ್ನು ಕಲುಷಿತಗೊಳಿಸುತ್ತವೆ. ಮಾನವ, ಪ್ರಾಣಿ, ಜೇನುಹುಳುಗಳ ಜೀವಕ್ಕೆ ಕುತ್ತು ತರುತ್ತವೆ ಎಂದು ಈ ಹಿಂದೆ ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿತ್ತು.