ಉಡುಪಿ: ಉಳಿದೆಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಮತ್ತು ಉಡುಪಿ ಜಿಲ್ಲೆಯ ಜನರು ಸರಕಾರ ಆದೇಶಿಸಿದ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಹೆಚ್ಚು ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಕ್ಯಾಶ್‌ಲೆಸ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಕುಂಜಾಲು ಶಾಖಾ ಆವರಣದಲ್ಲಿ ಶನಿವಾರ ನಡೆದ ಉಡುಪಿ ಕೋ – ಆಪರೇಟಿವ್ ಟೌನ್ ಬ್ಯಾಂಕಿನ ಕುಂಜಾಲು ಶಾಖೆಯ ಎಟಿಎಂ ಉದ್ಘಾಟನೆ, ಗ್ರಾಹಕರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಸಮಾರಂಭವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಗ್ರಾಮೀಣ ಭಾಗದಲ್ಲಿ ಬ್ಯಾಂಕ್‌ಗಳನ್ನು ಸ್ಥಾಪಿಸುವುದರಿಂದ ಗ್ರಾಮೀಣ ಭಾಗ ಅಭಿವೃದ್ಧಿ ಹೊಂದುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೆ. ಕೃಷ್ಣರಾಜ ಸರಳಾಯ ಅವರು ಸ್ವಾಗತಿಸಿ, ಬ್ಯಾಂಕ್‌ನ ಎಟಿಎಂ ಸೌಲಭ್ಯಕ್ಕೆ 1 ವರ್ಷದ ವರೆಗೆ ಸರ್ವಿಸ್ ಟ್ಯಾಕ್ಸ್ ವಿಧಿಸುವುದಿಲ್ಲ ಎಂದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಎಟಿಎಂ ಯಂತ್ರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆರೂರು ಗ್ರಾ.ಪಂ. ಅಧ್ಯಕ್ಷ ರಾಜೀವ ಕುಲಾಲ್, ನೀಲಾವರ ಗ್ರಾ.ಪಂ. ಅಧ್ಯಕ್ಷೆ ಆಶಾ, ಆರ್‌ಬಿಐನ ಎಜಿಎಂ ವೈದ್ಯಲಿಂಗಮ್ ಶುಭ ಹಾರೈಸಿದರು. ಗ್ರಾಮೀಣ ಭಾಗದ ಸಾಧಕತ್ರಯರಾದ ನೀಲಾವರ ಮಂಜುನಾಥ ಶೆಟ್ಟಿಗಾರ್ (ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತ), ಕರೀಷ್ಮಾ ಎಸ್. ಸನಿಲ್ ಮತ್ತು ದೀಕ್ಷಿತಾ(ರಾಷ್ಟ್ರಮಟ್ಟದ ಕ್ರೀಡಾಪಟು) ಅವರನ್ನು ಪಲಿಮಾರು ಶ್ರೀಪಾದರು ಸಮ್ಮಾನಿಸಿ ದರು. ಬ್ಯಾಂಕಿನ ಉತ್ತಮ ಗ್ರಾಹಕರಾದ ಗುರುರಾಜ ಮಕ್ಕಿತ್ತಾಯ, ಎ.ಕೆ. ಅಮೀರ್‌ರನ್ನು ಅಭಿನಂದಿಸ ಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಪ್ರ. ವ್ಯವಸ್ಥಾಪಕ ಬಿ.ವಿ. ಸತ್ಯನಾರಾಯಣ ಪ್ರಸ್ತಾವನೆಗೈದರು. ಪೆರಂಪಳ್ಳಿ ವಾಸುದೇವ ಭಟ್ ನಿರೂಪಿಸಿ ದರು. ಪ್ರಭಾರ ಶಾಖಾ ವ್ಯವಸ್ಥಾಪಕ ಹರಿಪ್ರಸಾದ್ ಕೆ. ವಂದಿಸಿದರು.
ನಾನು ಇದುವರೆಗೆ ಎಟಿಎಂ ಬಳಸಿಲ್ಲ. ಇಂದು ಎಟಿಎಂನಿಂದ ಹಣವನ್ನು ಪಡೆಯುವುದು ಹೇಗೆ? ಎಂಬುವುದನ್ನು ನನಗೆ ಮೊತ್ತ ಮೊದಲಿಗೆ “ಉಡುಪಿ ಕೋ – ಆಪ್. ಟೌನ್ ಬ್ಯಾಂಕ್’ ಕಲಿಸಿ ಕೊಟ್ಟಿದೆ.
– ಪಲಿಮಾರುಶ್ರೀ