Advertisement

ಸರ್ಕಾರಿ ಕಾನೂನು ಕಾಲೇಜು ಮಂಜೂರು

11:35 AM Apr 26, 2022 | Team Udayavani |

ಹಾವೇರಿ: ಹಾವೇರಿಗೆ ನೂತನ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿದ್ದು, ಶೀಘ್ರವೇ ಕಾರ್ಯಾರಂಭಗೊಳಿಸಲಾಗುವುದು ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ ಹೇಳಿದರು.

Advertisement

ನಗರದಲ್ಲಿ ಸೋಮವಾರ ಹಾವೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಐಟಿಐ ಕಾಲೇಜಿಗೆ ನೂತನ ಕಟ್ಟಡ ಒದಗಿಸಲಾಗಿದೆ. ಹೆಚ್ಚಿನ ಕೋರ್ಸ್‌ಗಳ ಸೇರ್ಪಡೆ ಕುರಿತು ಕೈಗಾರಿಕಾ ಉಪನಿರ್ದೇಶಕರ ಜೊತೆಗೆ ಚರ್ಚಿಸಿದ್ದು, ಅಗತ್ಯ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪಾಲಿಟೆಕ್ನಿಕ್‌ ಕೋರ್ಸ್‌ಗಳ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂಜೂರಾತಿ ಹಂತದಲ್ಲಿದೆ. ಪ್ರಸ್ತುತ ಪೆಟ್ರೋಲ್‌, ಡೀಸೆಲ್‌ನಂತಹ ಇಂಧನ ಆಧಾರಿತ ವಾಹನಗಳ ಬದಲಿಗೆ ಎಲೆಕ್ಟ್ರಿಕಲ್‌ ವಾಹನಗಳ ಸಂಚಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸೋಲಾರ್‌ ಆಧಾರಿತ ವಾಹನಗಳ ಸಂಚಾರ ಆರಂಭವಾಗಲಿದೆ. ಟಾಟಾ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಎಲೆಕ್ಟ್ರಿಕಲ್‌ ಹಾಗೂ ಸೋಲಾರ್‌ ವಾಹನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ನಾವೆಲ್ಲರೂ ಇಂದು ಆಧುನಿಕ ಜಗತ್ತಿನೆಡೆಗೆ ಸಾಗುತ್ತಿದ್ದೇವೆ. ನಮ್ಮ ಹಳೆ ಶಿಕ್ಷಣ ಪದ್ಧತಿ, ತರಬೇತಿಗಳು ಆಧುನಿಕತೆಗೆ ಪರಿವರ್ತನೆಯಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದರು.

ಈ ಸಂಸ್ಥೆಯ ಎದುರಿನ ರಸ್ತೆಯ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು, ಕೆಲಸ ಆರಂಭವಾಗಿದೆ. ಈ ನೂತನ ಕಟ್ಟಡದಲ್ಲಿ ತರಗತಿಗಳು ಈಗಾಗಲೇ ಆರಂಭವಾಗಿವೆ. ಪೋಷಕರು ಮಕ್ಕಳ ಶಿಕ್ಷಣದ ಕುರಿತು ಅನೇಕ ಕನಸುಗಳನ್ನು ಕಂಡಿರುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳು ತರಬೇತಿಯನ್ನು ಮಧ್ಯದಲ್ಲೇ ಬಿಡದೇ ಓದನ್ನು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.

Advertisement

ನಗರಸಭೆ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ ಮಾತನಾಡಿ, ಈ ಮೊದಲು ಎಲೆಕ್ಟ್ರಿಕಲ್‌ ವಾಹನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಭಾರತವೇ ಎಲ್ಲಾ ರೀತಿಯ ವಾಹನಗಳನ್ನು ತಯಾರಿಸುತ್ತಿದೆ. ಹಾವೇರಿ ನಗರದಲ್ಲಿಯೇ ಕೈಗಾರಿಕಾ ತರಬೇತಿ ಸಂಸ್ಥೆ ಆರಂಭಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಈ ಮೊದಲು ಐಟಿಐ ಕಾಲೇಜುಗಳಲ್ಲಿ ಕೇವಲ 4 ರಿಂದ 5 ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿತ್ತು. ಆದರೆ ಈಗ ಸುಮಾರು 48 ರಿಂದ 50 ಕೋರ್ಸ್‌ಗಳ ಸೇರ್ಪಡೆಯಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಸೂಕ್ತ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಬೆಳಗಾವಿ ವಿಭಾಗದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ, ಹುಬ್ಬಳ್ಳಿ ವಿಭಾಗೀಯ ಕಚೇರಿ ಉಪನಿರ್ದೇಶಕ ಬಸವಪ್ರಭು ಹಿರೇಮಠ, ಹಾವೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಸುಭಾಸ ಗೌಡರ್‌, ಗುತ್ತಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಎ.ಎ.ಲಿಂಗಸೂರ, ನಗರಸಭೆ ಸದಸ್ಯರಾದ ಬಾಬಣ್ಣ ಮೋಮಿನಗಾರ, ಶ್ರೀಕಾಂತ ಪೂಜಾರ, ಈರಣ್ಣ ಪಟ್ಟಣಶೆಟ್ಟಿ, ಲಲಿತಾ ಗುಂಡೇನಹಳ್ಳಿ, ರೋಹಿಣಿ ಪಾಟೀಲ ಇತರರು ಇದ್ದರು.

ನಾವೆಲ್ಲರೂ ಇಂದು ಆಧುನಿಕ ಜಗತ್ತಿನೆಡೆಗೆ ಸಾಗುತ್ತಿದ್ದೇವೆ. ನಮ್ಮ ಹಳೆ ಶಿಕ್ಷಣ ಪದ್ಧತಿ, ತರಬೇತಿಗಳು ಆಧುನಿಕತೆಗೆ ಪರಿವರ್ತನೆಯಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪೋಷಕರು ಮಕ್ಕಳ ಶಿಕ್ಷಣದ ಕುರಿತು ಅನೇಕ ಕನಸುಗಳನ್ನು ಕಂಡಿರುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳು ತರಬೇತಿಯನ್ನು ಮಧ್ಯದಲ್ಲೇ ಬಿಡದೇ ಓದು ಪೂರ್ಣಗೊಳಿಸಬೇಕು. ನೆಹರು ಓಲೇಕಾರ, ಶಾಸಕರು ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next