Advertisement

Government ಜಾಗ ಒತ್ತುವರಿ: ಹೈಕೋರ್ಟ್‌ ನೋಟಿಸ್‌

10:37 PM Sep 11, 2024 | Team Udayavani |

ಬೆಂಗಳೂರು: ಬೆಳ್ತಂಗಡಿ ತಾಲೂಕು ಕಾಣಿಯೂರು ಗ್ರಾಮದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ವಿಚಾರವಾಗಿ ತೆಂಕಕಾರಂದೂರು ಗ್ರಾಮದ ನಿವಾಸಿ ಅಶೋಕ್‌ ಆಚಾರ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಬೆಳ್ತಂಗಡಿ ತಹಶೀಲ್ದಾರ್‌ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿತು.

ಕಾಣಿಯೂರು ಗ್ರಾಮದ ಸರ್ವೇ ನಂಬರ್‌ 27/1 ಎಯಲ್ಲಿ 11 ಎಕರೆ 90 ಸೆಂಟ್ಸ್‌ ಸರಕಾರಿ ಜಮೀನು ಇದೆ. ಇದಕ್ಕೆ ಹೊಂದಿಕೊಂಡ ಸರ್ವೇ ನಂಬರ್‌ 265/1ಎ1ರಲ್ಲಿ 1 ಎಕರೆ 83 ಸೆಂಟ್ಸ್‌ ಜಾಗದಲ್ಲಿ ಸರಕಾರಿ ಆಟದ ಮೈದಾನವಿದೆ. ಈ ಪೈಕಿ ಸರ್ವೇ ನಂಬರ್‌ 27/1ಎಯಲ್ಲಿರುವ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

ಒತ್ತುವರಿಯಾಗಿರುವ ಜಾಗವನ್ನು ವಾಪಸ್‌ ಪಡೆಯಬೇಕು. ಅಲ್ಲದೇ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವಂತೆ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next