ಯಾವ ಕೆಲಸ ಸಿಗುತ್ತೋ, ಯಾವಾಗ ಕೆಲಸ ಸಿಗುತ್ತೋ ಎಂಬ ಕನವರಿಕೆಯಲ್ಲಿದ್ದ ಕಾಲ ಅದು. ದಿನಕ್ಕೆರಡು ಸಲವಾದರೂ ಲೈಬ್ರರಿಗೆ ಹೋಗಿ, “ಎಂಪ್ಲಾಯ್‌ಮೆಂಟ್ ನ್ಯೂಸ್’ ಪತ್ರಿಕೆಯನ್ನು ತಡಕಾಡದಿದ್ದರೆ ಸಮಾಧಾನ ಆಗುತ್ತಿರಲಿಲ್ಲ. ಅದೇ ದಾರಿಯಲ್ಲೇ ಬರುವ ಪೋಸ್ಟ್‌ಮ್ಯಾನ್, ಯಾವತ್ತು ನನ್ನ ಕೈಗೆ ಉದ್ಯೋಗ ದೃಢೀಕರಣ ಪತ್ರ ನೀಡುತ್ತಾನೋ ಎಂದು ಕಂಡಿದ್ದ ಕನಸುಗಳಿಗೆ ಲೆಕ್ಕವೇ ಇಲ್ಲ.
ಕೊನೆಗೂ ಆ ದಿನವೊಂದು ಬಂತು. ಪೋಸ್ಟ್‌ಮ್ಯಾನ್ ನನ್ನ ಕೈಗೆ ಪತ್ರ ಕೈಗಿಟ್ಟಿದ್ದ. ನನಗೆ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಸೇವೆ ಸಲ್ಲಿಸುವ ಅವಕಾಶ ಬಂದೊದಗಿತ್ತು. ಇನ್ನು ಮೂರು ದಿನಗಳಲ್ಲಿ ಅಂಕಪಟ್ಟಿ ಪರಿಶೀಲನೆಗಾಗಿ ಬರಬೇಕೆಂದು ತಿಳಿಸಲಾಗಿತ್ತು. ಮೂಲ ಅಂಕಪಟ್ಟಿ ಕೊಟ್ಟರೆ ಅದನ್ನು ವಾಪಸು ಪಡೆಯಲು ಕೆಲ ಕಾಲವೇ ಆಗುತ್ತೆಂದು ಯಾರೋ ಹೇಳಿದ್ದರಿಂದ, ಎಲ್ಲ ಅಂಕಪಟ್ಟಿಗಳ ನಕಲು ಪ್ರತಿ ಪಡೆದುಕೊಡೆ. ಕೊಂಚ ಬಿಡುವಿದ್ದರಿಂದ, ನಾನು ತಪಸ್ಸಿನಂತೆ ಓದಲು ಕೂರುತ್ತಿದ್ದ ಲೈಬ್ರರಿಗೆ ಹೋದೆ. ಬ್ಯಾಗನ್ನು ಕಪಾಟಿನಲ್ಲಿರಿಸಿ, ಪತ್ರಿಕೆ ಓದುವುದರಲ್ಲಿ ಮಗ್ನನಾಗಿದ್ದೆ. ಒಂದೈದು ನಿಮಿಷದ ಬಳಿಕ ಹಿಂದೆ ನೋಡಿದರೆ, ನಾನು ಇಟ್ಟಿದ್ದ ಬ್ಯಾಗ್ ಆ ಜಾಗದಲ್ಲಿ ಕಾಣುತ್ತಿಲ್ಲ! ಎಲ್ಲಾ ಕಡೆ ಹುಡುಕಾಡಿ, ಎಲ್ಲರನ್ನೂ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಏನು ಮಾಡುವುದೆಂದು ತೋಚದೇ ಮನೆಗೆ ಹಿಂತಿರುಗಿದೆ.
ಈ ವಿಷಯ ಮನೆಯಲ್ಲಿ ಹೇಳಲು ಧ್ಯೆರ್ಯ ಸಾಕಾಗಲಿಲ್ಲ. ರಾತ್ರಿಯಿಡೀ ನಿ¨ªೆ ಬರದೇ ಒದ್ದಾಡಿದೆ. ಬ್ಯಾಗ್ ಕದ್ದ ಆ ಕಳ್ಳ ಕೈಗೆ ಸಿಕ್ಕರೆ, ಕೊಂದೇಬಿಡುವಷ್ಟು ಸಿಟ್ಟು ಬಂದಿತ್ತು. ಎರಡು ದಿನದ ಬಳಿಕ ಬಾಡಿದ ಮೊಗದೊಂದಿಗೆ ಮತ್ತೆ ಗ್ರಂಥಾಲಯಕ್ಕೆ ತೆರಳಿ, ಬ್ಯಾಗ್ ಇಟ್ಟ ಜಾಗದಲ್ಲಿ ಒಂದು ಕವರ್ ಇದ್ದುದ್ದನ್ನು ನೋಡಿದೆ.
ಅದನ್ನು ಒಡೆದು ನೋಡಿದಾಗ, “ಅಬ್ಟಾ’ ಎಂದು ನಿಟ್ಟುಸಿರುಬಿಟ್ಟೆ. ನಾನು ಇಟ್ಟಿದ್ದ ಎಲ್ಲ ಮೂಲ ಅಂಕಪಟ್ಟಿ, ನಕಲು ಪ್ರತಿಗಳು ಆ ಕವರ್‌ನಲ್ಲೇ ಇದ್ದವು! ಹೋದ ಜೀವ ಮತ್ತೆ ಬಂತು. ನನ್ನ ಬ್ಯಾಗ್ ಹೋದರೂ ಚಿಂತೆಯಿಲ್ಲ, ಎಲ್ಲ ಅಂಕಪಟ್ಟಿ ದೊರಕಿತಲ್ಲ ಎಂಬ ಸಮಾಧಾನ. ಆ ಕಳ್ಳನ ಮೇಲೆ ಇದ್ದ ಕೋಪ ಕರಗಿ, “ಪಾಪ ಯಾರೋ ಬಡ ವಿದ್ಯಾರ್ಥಿ ಬ್ಯಾಗ್ ಸಲುವಾಗಿ ಕಳ್ಳತನ ಮಾಡಿರಬಹುದು’ ಎಂದುಕೊಂಡು ಸುಮ್ಮನಾದೆ. ನನ್ನ ಬದುಕಿನಲ್ಲಿ ಮೂರು ನಿಮಿಷ ಮುಖ ತೋರಿಸದೆ, ಹೀಗೆ ತೆರೆಯ ಹಿಂದೆ ಬಂದು ಹೋದ ಆ ಅತಿಥಿ ಪಾತ್ರವನ್ನು ನಾನೆಂದೂ ಮರೆಯುವುದಿಲ್ಲ.
ರಂಗನಾಥ್ ಹಾರೋಗೊಪ್ಪ