Advertisement

ಲಿಷಾಗೆ ನೌಕರಿ ಕೊಟ್ಟ ಸರ್ಕಾರ 

12:17 PM Jun 23, 2017 | Team Udayavani |

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಕಾಲು ಕಳೆದುಕೊಂಡಿದ್ದ ಲಿಶಾ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೆ ಜಯ ದೊರೆತಿದೆ.

Advertisement

ಲಿಶಾ ಅವರಿಗೆ ರಾಜ್ಯಸರ್ಕಾರ  ಅನುಕಂಪದ ಆಧಾರದಲ್ಲಿ ಗ್ರೂಪ್‌ “ಸಿ’ ಹುದ್ದೆ ನೀಡಲು ನಿರ್ಧಾರ ಕೈಗೊಂಡಿದೆ. ಆ ಮೂಲಕ ನ್ಯಾಯಾಂಗ ನಿಂದನೆ ತೂಗುಕತ್ತಿಯಿಂದಲೂ ಸರ್ಕಾರ ಪಾರಾಗಿದೆ. 2013ರ ಏಪ್ರಿಲ್‌ 17ರಂದು ಬಿಜೆಪಿ ಕಚೇರಿ ಮುಂದೆ ಸಂಭವಿಸಿದ್ದ ಬಾಂಬ್‌ ಸ್ಫೋಟದಲ್ಲಿ ಮಹಾರಾಣಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡುತ್ತಿದ್ದ ಲಿಶಾ  ಶೇ.50ರಿಂದ 70 ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದರು.

ಅವರ ಎಡ ಗಾಲಿಗೆ ತೀವ್ರ ಗಾಯಗಳಾಗಿದ್ದವು. ಪರಿಣಾಮ ಲಿಶಾ ಅವರು ಈ ವರೆಗೆ ಎಂಟಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಅವರ ಚಿಕಿತ್ಸೆಗೆ 25 ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗಿತ್ತು. ಹೀಗಾಗಿ  ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿಗಳ ಜನತಾ ದರ್ಶನದ ಮೂಲ ಯತ್ನಿಸಿದರೂ ಫ‌ಲ ಸಿಕ್ಕಿರಲಿಲ್ಲ. 

ಕೊನೆಗೆ ವಿಶೇಷ ಪ್ರಕರಣದ ಅಡಿಯಲ್ಲಿ  ಸೂಕ್ತಪರಿಹಾರ ಹಾಗೂ ಉದ್ಯೋಗ ಕಲ್ಪಿಸುವಂತೆ 2014ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಲಿಶಾ ಮನವಿ ಆಲಿಸಿದ್ದ ನ್ಯಾಯಪೀಠ, 3 ತಿಂಗಳಲ್ಲಿ ಲಿಶಾಗೆ ಉದ್ಯೋಗ ಕಲ್ಪಿಸುವಂತೆ ರಾಜ್ಯ ಸರ್ಕಾರ ಹಾಗೂ 4 ತಿಂಗಳಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ 2016ರ ಅ.17ರಂದು ಆದೇಶಿಸಿತ್ತು.

ನ್ಯಾಯಾಲಯದ ಆದೇಶ ನೀಡಿ ಒಂಭತ್ತು ತಿಂಗಳು ಕಳೆದರೂ ಲಿಶಾಗೆ ಸರ್ಕಾರಿ ಉದ್ಯೋಗ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದರು. ಇದರಿಂದ ಬೇಸತ್ತ ಅವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಲಿಶಾ ಮನವಿ ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ಸರ್ಕಾರಿ ನೌಕರಿ ನೀಡುವ ವಿಚಾರವನ್ನು ಸಚಿವ ಸಂಪುಟದ ಮುಂದಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋಜನಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಹಾಗೂ ಕೇಂದ್ರಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಲಿಶಾ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

Advertisement

ಜೂನ್‌ 12ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಹಾಗೂ ನ್ಯಾಯಮೂರ್ತಿ  ಎನ್‌.ಕೆ.ಸುಧೀಂದ್ರ ರಾವ್‌ ಅವರಿದ್ದ ಪೀಠ, ಆದೇಶ ಪಾಲಿಸದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೆ, ರಾಜ್ಯ ಹಾಗೂ ಕೇಂದ್ರಕ್ಕೆ ನೋಟೀಸ್‌ ಜಾರಿಗೊಳಿಸಿತ್ತು. ಇದೀಗ ರಾಜ್ಯಸರ್ಕಾರ, ಲಿಶಾ ಅವರಿಗೆ ಉದ್ಯೋಗ ನೀಡುವ ಮೂಲಕ ಬೀಸೋ ದೊಣ್ಣೆಯಿಂದ ಪಾರಾಗಿದೆ.

ಈ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ಲೀಷಾಳ ಪರ ವಕಾಲತ್ತು ವಹಿಸಿದ್ದ ವಕೀಲ  ಸುನೀಲ್‌ಕುಮಾರ್‌  “ಉದಯವಾಣಿ’ ಜೊತೆ ಮಾತನಾಡಿ, ವಿಶೇಷ ಪ್ರಕರಣ ಎಂದು  ಪರಿಗಣಿಸಿ ಲಿಶಾ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಆದೇಶ ನೀಡಿದ ನ್ಯಾಯಪೀಠಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ನ್ಯಾಯಾಲಯದ ಆದೇಶದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಉದ್ಯೋಗ ನೀಡಿದ್ದು ಸಂತೋಷ ತಂದಿದೆ.

ಈಗಾಗಲೇ ಕೇಂದ್ರ ಹಾಗೂ ರಾಜ್ಯಸರ್ಕಾರದ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ವೇಳೆ ಉದ್ಯೋಗ ನೀಡಿರುವ ಸಂಬಂಧ ಸರ್ಕಾರ ಸಲ್ಲಿಸುವ ಅಫಿಡವಿಟ್‌ ನಂತರ, ರಾಜ್ಯಸರ್ಕಾರದ ವಿರುದ್ಧದ ಅರ್ಜಿ ಹಿಂತೆಗೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸರ್ಕಾರ ಎಂದೋ ಉದ್ಯೋಗ ಕೊಡಬೇಕಿತ್ತು. ನ್ಯಾಯಾಲಯದ ಆದೇಶಕ್ಕೆ ಮಣಿದು ಈಗ ಉದ್ಯೋಗ ನೀಡಿರುವುದು ಖುಷಿ ತಂದಿದೆ. ನ್ಯಾಯಾಲಯಕ್ಕೆ ಹಾಗೂ ನಮ್ಮ ವಕೀಲರಿಗೆ ಧನ್ಯವಾದ ತಿಳಿಸುತ್ತೇನೆ. 
– ಲಿಶಾ

Advertisement

Udayavani is now on Telegram. Click here to join our channel and stay updated with the latest news.

Next