Advertisement

ಹೊಸ ಬಳಕೆದಾರರ ರಕ್ಷಣಾ ಕಾಯಿದೆ ಶೀಘ್ರ ಜಾರಿ : ಪ್ರಧಾನಿ ಮೋದಿ

03:32 PM Oct 26, 2017 | udayavani editorial |

ಹೊಸದಿಲ್ಲಿ : ‘ಗ್ರಾಹಕರನ್ನು ಮೋಸದಿಂದ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕುವ ಮತ್ತು ಗ್ರಾಹಕರ ದೂರುಗಳನ್ನು ಕಾಲಬದ್ಧ ಮಿತಿಯೊಳಗೆ ಕಡಿಮೆ ಖರ್ಚಿನಲ್ಲಿ ಪರಿಹರಿಸುವುದನ್ನು ಖಾತರಿಪಡಿಸುವ ಹೊಸ ಬಳಕೆದಾರರ ರಕ್ಷಣಾ ಕಾನೂನನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಗುರುವಾರ ದಿಲ್ಲಿಯ ವಿಜ್ಞಾನ ಭವನದಲ್ಲಿ ಏರ್ಪಟ್ಟ ಅಂತಾರಾಷ್ಟ್ರೀಯ ಬಳಕೆದಾರರ ರಕ್ಷಣಾ ಸಮಾವೇಶದಲ್ಲಿ ಹೇಳಿದರು. 

Advertisement

‘ಸರಕಾರವು ಈಗಾಗಲೇ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ ಯಿಂದಾಗಿ ದೀರ್ಘ‌ಕಾಲದಲ್ಲಿ ಗ್ರಾಹಕರಿಗೆ ಲಾಭದಾಯಕವಾಗಿರುತ್ತದೆ. ಉತ್ಪಾದಕರ ನಡುವೆ ಸ್ಪರ್ಧೆ ತೀವ್ರಗೊಂಡು ಗ್ರಾಹಕ ವಸ್ತುಗಳು ಅಗ್ಗವಾಗಲಿವೆ’ ಎಂದು ಮೋದಿ ಹೇಳಿದರು. 

‘ದೇಶದಲ್ಲಿನ ವ್ಯಾಪಾರ ವಹಿವಾಟುಗಳ ಕ್ರಮವನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತು ದೇಶದ ಆವಶ್ಯಕತೆಗೆ ತಕ್ಕಂತೆ ನಾವು ಹೊಸ ಗ್ರಾಹಕ ರಕ್ಷಣಾ ಕಾನೂನು ಜಾರಿಗೆ ತರಲಿದ್ದೇವೆ. ಈ ಪ್ರಸ್ತಾವಿತ ಹೊಸ ಕಾನೂನು ಗ್ರಾಹಕರ ಸಶಕ್ತೀಕರಣಕ್ಕೆ ಒತ್ತು ನೀಡುತ್ತದೆ’ ಎಂದು ಮೋದಿ ಹೇಳಿದರು. 

‘ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿನ ಕ್ರಮಕ್ಕೆ ಈ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರಿಗೆ ತತ್‌ಕ್ಷಣದ ಪರಿಹಾರವನ್ನು ದೊರಕಿಸುವ ಸಲುವಾಗಿ ಕಾರ್ಯಕಾರೀ ಅಧಿಕಾರವಿರುವ ಕೇಂದ್ರೀಯ ಬಳಕೆದಾರರ ರಕ್ಷಣಾ ಪ್ರಾಧಿಕಾರವೊಂದನ್ನು ಸ್ಥಾಪಿಸಲಾಗುವುದು ಎಂದವರು ಹೇಳಿದರು. 

ಈಗ ಅಸ್ತಿತ್ವದಲ್ಲಿರುವ 1986 ಬಳಕೆದಾರರ ರಕ್ಷಣಾ ಕಾನೂನಿನ ಬದಲಿಗೆ ಹೊಸ ಕಾನೂನನ್ನು ಸರಕಾರ ತರಲಿದೆ. ಬಳಕೆದಾರರ ರಕ್ಷಣಗೆ ಸಂಬಂಧಿಸಿದ 2015ರ ವಿಶ್ವಸಂಸ್ಥೆಯ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ಈ ಹೊಸ ಕಾನೂನಿನಲ್ಲಿ ಅಂತರ್ಗತಗೊಳಿಸಲಾಗುವುದು ಎಂದು ಮೋದಿ ಹೇಳಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next