ಅಳ್ನಾವರ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ದೀಪಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಧಾರಣೆಗೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದು, ಸರ್ಕಾರ ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ. ಸುವ್ಯಸ್ಥಿತ ಚಿಕಿತ್ಸಾ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳನ್ನು ಕಂಡು ಯೋಗಕ್ಷೇಮ ವಿಚಾರಿಸಿದರು.
ದಾಖಲೆಗಳನ್ನು ಪರಿಶೀಲಿಸಲು ಮುಂದಾದ ಜಿಲ್ಲಾಧಿಕಾರಿಗೆ ಸೂಕ್ತ ಮಾಹಿತಿ ನೀಡಬೇಕಾದ ಗುಮಾಸ್ತ ರಜೆ ಮೇಲೆ ಇರುವುದಾಗಿ ಹಾಜರಿದ್ದ ಸಿಬ್ಬಂದಿ ತಿಳಿಸಿದರು. ದಾಖಲೆಗಳನ್ನು ತೋರಿಸಲು ವಿಫಲರಾದ ಆಸ್ಪತ್ರೆ ಸಿಬ್ಬಂದಿಯನ್ನು ಡಿಸಿ ತರಾಟೆಗೆ ತೆಗೆದುಕೊಂಡರು.
ಸಿಬ್ಬಂದಿ ಹಾಜರಾತಿಗಾಗಿ ಬಯೋಮೆಟ್ರಿಕ್ ಅಳವಡಿಸಿದ್ದರೂ ಅದು ಚಾಲನೆ ಇಲ್ಲದಿರುವುದು, ಸರ್ಕಾರ ಒದಗಿಸಿದ ಅನುದಾನ ಬಳಕೆಯಾದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದಿರುವುದು, ರೋಗಿಗಳಿಗೆ ನೀರಿನ ಅನುಕೂಲ ಇಲ್ಲದಿರುವುದು, ಆಸ್ಪತ್ರೆ ಸುತ್ತಮುತ್ತ ಗಿಡಕಂಟಿ ಬೆಳೆದು ನಿಂತಿರುವುದು ಸೇರಿದಂತೆ ಅನೇಕ ಅವ್ಯವಸ್ಥೆಗಳು ಸಾರ್ವಜನಿಕರ ದೂರುಗಳಿಗೆ ಪೂರಕವೆನಿಸಿದ್ದವು. ಡಿಸಿ ಎದುರು ಅಳಲು: ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಆದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಜನತೆ ಹೆಚ್ಚಿನ ಚಿಕಿತ್ಸೆಗೆ ಧಾರವಾಡ-ಹುಬ್ಬಳ್ಳಿಗೆ ಹೋಗುವುದು ಅನಿವಾರ್ಯವಾಗುತ್ತಿದೆ. ಈಗ ಅಳ್ನಾವರ ತಾಲೂಕು ಕೇಂದ್ರವಾಗಿರುವುದರಿಂದ ಸುಧಾರಣೆ ಮಾಡುವ ಅವಶ್ಯವಿದೆ ಎಂದು ಸ್ಥಳೀಯ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು. ಆಸ್ಪತ್ರೆಯಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ಸೇವೆ ದೊರೆಯುವಂತಾಗಲು ಹೆಚ್ಚುವರಿ ವೈದ್ಯ-ಸಿಬ್ಬಂದಿ ನಿಯುಕ್ತಿಗೊಳಿಸುವುದು ಮತ್ತು ಒಬ್ಬ ಮಹಿಳಾ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಜನರು ಆಗ್ರಹಿಸಿದರು.
ಸಾರ್ವಜನಿಕರ ಬೇಡಿಕೆಯಂತೆ ಆಸ್ಪತ್ರೆಯನ್ನು ಸುಧಾರಣೆ ಮಾಡಲಾಗುವುದು. ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ದೀಪಾ ತಿಳಿಸಿದರು.
ಧಾರವಾಡ ಉಪವಿಭಾಗಾಧಿಕಾರಿ ಜುಬೇರ, ತಹಶೀಲ್ದಾರ್ ಪ್ರಕಾಶ ಕುದರಿ, ಅಳ್ನಾವರ ತಹಶೀಲ್ದಾರ್ ಪಾರ್ವತಿ, ಪಪಂ ಅಧ್ಯಕ್ಷೆ ಭಾಗ್ಯವತಿ ಕುರುಬರ, ಸದಸ್ಯರಾದ ಸುನಂದಾ ಕಲ್ಲು, ಮಂಜುಳಾ ಮೆದಾರ, ಉಸ್ಮಾನ್ ಬಾತಖಂಡೆ, ವಿನಾಯಕ ಕುರುಬರ, ಪರಶುರಾಮ ಬೇಕನೆಕರ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಶಿರಸ್ತೇದಾರ ಟಿ.ಬಿ. ಬಡಿಗೇರ, ಕಂದಾಯ ನಿರೀಕ್ಷಕ ಬಸವರಾಜ, ಹನುಮಂತ ಶಿಂದೆ, ಅನ್ವರ್‌ಖಾನ್ ಬಾಗೇವಾಡಿ ಮತ್ತಿತರರು ಇದ್ದರು.