Advertisement

ಸರಕಾರಿ ಆಸ್ಪತ್ರೆ ಹೊರಗುತ್ತಿಗೆ ಸಿಬಂದಿ ಮುಷ್ಕರ: ರೋಗಿಗಳ ಪರದಾಟ

11:42 AM Oct 26, 2018 | |

ಬೆಳ್ತಂಗಡಿ: ಕೆಲವು ವರ್ಷಗಳಿಂದ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಸಾಂಕೇತಿಕ ಮುಷ್ಕರ ನಡೆಸಿದ್ದು, ರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾದಿಯರು, ಲ್ಯಾಬ್‌ ಸಿಬಂದಿ, ಇತರ ಸಿಬಂದಿ ಸಹಿತ ಸುಮಾರು 10 ಮಂದಿ ಹೊರಗುತ್ತಿಗೆ ಸಿಬಂದಿಯಿದ್ದು, ಮುಷ್ಕರದಿಂದ ವೈದ್ಯಕೀಯ ಸೇವೆಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಂದ ಬಂದ ಬಡ ರೋಗಿಗಳು ಚಿಕಿತ್ಸೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ವೈದ್ಯರ ಕೊರತೆ
ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಿದ್ದು, ಇದ್ದ ವೈದ್ಯಾಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ. ತಾತ್ಕಾಲಿಕವಾಗಿ ಬೇರೆ ಸರಕಾರಿ ಆಸ್ಪತ್ರೆಯ ಕಣ್ಣಿನ ತಜ್ಞೆಯನ್ನು ನಿಯೋಜಿಸಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹೆರಿಗೆಗಾಗಿ, ಬಾಣಂತಿಯರ ಚಿಕಿತ್ಸೆಗೆ ಬರುವವರನ್ನು ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಗೆ ಕಳುಹಿಸುತ್ತಿದ್ದು, ಇದರಿಂದ ಬಡ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಗುರುವಾರವೂ ಸುಮಾರು 20 ಮಂದಿ ಮಹಿಳೆಯರು ಚಿಕಿತ್ಸೆಗಾಗಿ ಬಂದಿದ್ದು, ಇವರನ್ನು ಮಂಗಳೂರು ಆಸ್ಪತ್ರೆಗೆ ಹೋಗುವಂತೆ ಸೂಚಿಸುತ್ತಿದ್ದಾರೆ. ಆದರೆ ಆರ್ಥಿಕವಾಗಿ ಶಕ್ತರಿಲ್ಲದ ಕಾರಣ ರೋಗಿಗಳು ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದು, ದಿಕ್ಕು ತೋಚದಂತಾಗಿದ್ದಾರೆ.

ಪತ್ರಿಕಾಭವನಕ್ಕೆ ರೋಗಿಗಳು
ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮಂಗಳೂರಿಗೆ ಹೋಗಲು ಆರ್ಥಿಕ ವ್ಯವಸ್ಥೆ ಇಲ್ಲದ ರೋಗಿಯೊಬ್ಬರ ಸಂಬಂಧಿ ಬೆಳ್ತಂಗಡಿ ಪತ್ರಿಕಾಭವನಕ್ಕೆ ಬಂದು ಮಾಧ್ಯಮದವರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಶಾಸಕರಿಗೆ ಮನವಿ
ಆಸ್ಪತ್ರೆ ಸಿಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರಿಗೆ ಮನವಿ ನೀಡಿದ್ದು, ಆರೋಗ್ಯ ಸಚಿವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆಯಿತ್ತಿದ್ದಾರೆ.

Advertisement

ರೋಗಿಗಳ ಅಳಲು
ಪತ್ನಿಯ ವೈದ್ಯಕೀಯ ಪರೀಕ್ಷೆಗೆಂದು ಬೆಳ್ತಂಗಡಿ ಸಮುದಾಯ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ವೈದ್ಯರಿಲ್ಲದ ಕಾರಣ ಅಲ್ಲಿನ ಸಿಬಂದಿ ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಗೆ ತೆರಳು ವಂತೆ ಸೂಚಿಸಿದ್ದಾರೆ. ಬಡವರಾದ ನಾವು ಇಲ್ಲಿನ ಸರಕಾರಿ ಆಸ್ಪತ್ರೆಯನ್ನೇ ನಂಬಿ ಬಂದಿದ್ದು, ನಾವು ಮಂಗಳೂರಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಸುನೀಲ್‌ ಮಿರಾಂದ ಮಂಜೊಟ್ಟಿ ಅವರು ಮಾಧ್ಯಮದವರ ಜತೆ ತಮ್ಮ ನೋವನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next