Advertisement

ಸಾವಿನ ಸಂಖ್ಯೆ ಮರೆಮಾಚಿದ ಸರ್ಕಾರ:ಬಸವರಾಜ ಶಿವಣ್ಣವನರ

06:55 PM Jul 20, 2021 | Team Udayavani |

ಬ್ಯಾಡಗಿ: ಕೋವಿಡ್‌ನಿಂದಾಗಿ ಮೃತ ಪಟ್ಟಿರುವವರ ಅಂಕಿ ಸಂಖ್ಯೆಗಳ ನಿಜಾಂಶವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಚ್ಚಿಡುವ ಮೂಲಕ ಬಿಜೆಪಿ ದೇಶದ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣವನರ ಆರೋಪಿಸಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ನಡೆದ ಬ್ಯಾಡಗಿ ಹಾಗೂ ಕಾಗಿನೆಲೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ, ಕೋವಿಡ್‌ ಸಹಾಯ ಹಸ್ತ ಹಾಗೂ ಕಾಂಗ್ರೆಸ್‌ ಪ್ರಜಾಪ್ರತಿನಿಧಿ  ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಕೇವಲ 34 ಸಾವಿರ ಜನರು ಸಾವನ್ನಪ್ಪಿದ್ದಾಗಿ ಸರಕಾರ ಹೇಳುತ್ತಿದೆ. ಆದರೆ, ಇದು ಶುದ್ಧ ಸುಳ್ಳು. ಕನಿಷ್ಟ 3 ಲಕ್ಷ ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ ನಿಜಾಂಶವನ್ನು ಮುಚ್ಚಿಡುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಗ್ರಾಮಕ್ಕೂ ತೆರಳಿ ಮಾಹಿತಿ ಸಂಗ್ರಹ ಮಾಡಿ, ರಾಜ್ಯದ ಜನತೆಯ ಮುಂದೆ ನಿಜವಾದ ಅಂಕಿ ಸಂಖ್ಯೆಗಳನ್ನಿಟ್ಟು ಬಿಜೆಪಿ ಬಣ್ಣ ಬಯಲು ಮಾಡಲಿದ್ದಾರೆ ಎಂದರು.

ಮಹಿಳೆಯರ ಬಲ ಬೇಕಿದೆ: ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ, ಗ್ರಾಮ ಮಟ್ಟದಲ್ಲಿ ಮಹಿಳೆಯರನ್ನು ಸೇರಿಸಿ ಪಕ್ಷ ಸಂಘಟನೆ ಮಾಡಲು ಅವಕಾಶ ಕಲ್ಪಿಸಿದಲ್ಲಿ ಪಕ್ಷಕ್ಕೆ ಬಲ ಬರಲಿದೆ. ಈಗಾಗಲೇ ಶೇ.50 ರಷ್ಟು ಮೀಸಲಾತಿಯಡಿ ಗ್ರಾಪಂಗಳಿಗೆ
ಆಯ್ಕೆಯಾಗಿರುವ ಮಹಿಳಾ ಸದಸ್ಯರು ಈ ಕಾರ್ಯಕ್ಕೆ ಮುಂದಾಗಬೇಕೆಂದರು.

ಯುವಕರಿಗೆ ಆದ್ಯತೆ: ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಮಾತನಾಡಿ, ಎಲ್ಲ ಜಾತಿ, ಸಮುದಾಯದ ಜನರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಿ, ಪಕ್ಷದಲ್ಲಿನ ಹಿರಿಯರು ಯುವಕರನ್ನು ಮುಖ್ಯ ವಾಹಿನಿಗೆ ತಂದಲ್ಲಿ ಕಾಂಗ್ರೆಸ್‌ಗೆ ಬಲ ಬರಲಿದೆ. ನಮ್ಮ ನಮ್ಮಲ್ಲಿಯೇ ಭಿನ್ನಾಭಿಪ್ರಾಯ ಬೇಡ. ಕಾಂಗ್ರೆಸ್‌ ಮುಕ್ತ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದರ ಬಗ್ಗೆ ಹಗಲುಗನಸು ಕಾಣುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ ಎಂದರು.

ಒಳಜಗಳಕ್ಕೆ ಪಕ್ಷ ಬಲಿ: ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಮುಖಂಡರಲ್ಲಿ ಒಡಕಿರುವ ಕಾರಣ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗಿದೆ. ಇಬ್ಬರು ಮುಖಂಡರ ಜಗಳದಲ್ಲಿ ಕಾರ್ಯಕರ್ತರು ಬಡವಾಗುತ್ತಿದ್ದಾರೆ. ಕೂಡಲೇ ಪಕ್ಷದ ಹೈಕಮಾಂಡ್‌ ಒಂದು ಹಂತದಲ್ಲಿ ಮಾತುಕತೆ ನಡೆಸುವ ಮೂಲಕ ಕಾಂಗ್ರೆಸ್‌ ಕಾರ್ಯರ್ತರಲ್ಲಿ ಒಗ್ಗಟ್ಟು ಮೂಡಿಸಬೇಕಾಗಿದೆ ಎಂದರು.

Advertisement

ಟಿಕೆಟ್‌ ತಂದವರಿಗೆ ಸಾಥ್‌: ದಾನಪ್ಪ ಚೂರಿ ಮಾತನಾಡಿ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದ್ದರೂ ಪಕ್ಷ ಪರಾಜಯ ಹೊಂದಿದೆ. ಮುಂದೆ ಹಾಗಾಗುವುದು ಬೇಡ. ಪಕ್ಷದಿಂದ ಯಾರೇ ಟಿಕೆಟ್‌ ತರಲಿ, ಅವರಿಗೆ ನಾನೂ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಮಾಜಿ ಅಧ್ಯಕ್ಷ ಬೀರಪ್ಪ ಬಣಕಾರ, ಮುಖಂಡರಾದ ಜಗದೀಶ ಪೂಜಾರ, ಮಹೇಶಗೌಡ ಪಾಟೀಲ, ಖಾದರಸಾಬ ದೊಡ್ಮನಿ, ಶಂಕರಗೌಡ ಪಾಟೀಲ, ಯೂನಸ್‌ ಅಹಮ್ಮದ ಸವಣೂರ, ರಮೇಶ ಸುತ್ತಕೋಟಿ. ರೇಖಾ ದೊಡ್ಮನಿ, ಡಿ.ಎಚ್‌.ಬುಡ್ಡನಗೌಡ, ಪ್ರಭುಗೌಡ ದೊಡ್ಮನಿ, ಮುನಾಫ್‌ ಎರೇಶೀಮಿ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next