Advertisement

ಶ್ರೀಗಂಧ ಮರ ಕಳವು ಹೆಚ್ಚಿರುವುದು ಸರ್ಕಾರಕ್ಕೆಗೊತ್ತಿದೆ!

12:27 PM Jun 08, 2017 | Team Udayavani |

ವಿಧಾನ ಪರಿಷತ್ತು: ಶಿರಸಿ ಅರಣ್ಯ ವಲಯದಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ!
ಈ ಉತ್ತರ ನೀಡಿದವರು ಸ್ವತಃ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ. ಕಾಂಗ್ರೆಸ್‌ನ ಎಸ್‌.ಎಲ್‌. ಘೋಕ್ಲೃಕರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಶಿರಸಿ ಅರಣ್ಯ ವಲಯದ ಹೊನ್ನೆಗದ್ದೆ, ನೀರನ್ನಳ್ಳಿ, ಶೀಗೇಹಳ್ಳಿ ಇಟಗುಳಿ ಭಾಗಗಳಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿರುವುದು ಗಮನಕ್ಕೆ ಬಂದಿದೆ.

Advertisement

ಶೀಗೇಹಳ್ಳಿ ಇಟಗುಳಿ ಭಾಗದಲ್ಲಿ 2014-15ರಲ್ಲಿ ಎರಡು ಹಾಗೂ 2016-17ರಲ್ಲಿ ಒಂದು ಶ್ರೀಗಂಧದ ಮರ ಕಳವಾಗಿದೆ.
ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗ ಳೊಂದಿಗೂ ಚರ್ಚಿಸಲಾಗುವುದು ಎಂದು ಹೇಳಿದರು.

ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಘೋಕ್ಲೃಕರ್‌, “ಶ್ರೀಗಂಧ ಕಳ್ಳತನ ಹೆಚ್ಚುತ್ತಿದ್ದು, ಕಳ್ಳರನ್ನು ಬಂಧಿಸುತ್ತಿಲ್ಲ. ಹಳಿಯಾಳದಲ್ಲಿ ಡಿಎಫ್ಒ ನಿವಾಸದ ಆವರಣದಲ್ಲಿ ಶ್ರೀಗಂಧ ಮರ ಕದ್ದವರನ್ನೇ ಇದುವರೆಗೆ ಪತ್ತೆ ಹಚ್ಚಿಲ್ಲ. ಮರ ಕಳವು ನಿಯಂತ್ರಿಸದ ಅರಣ್ಯ ಅಧಿಕಾರಿಗಳು ಗಿಡ ನೆಡುವುದು, ಕಂದಕ ನಿರ್ಮಿಸುವಂತಹ ಸಿವಿಲ್‌ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದು ಇತರೆ ಜವಾಬ್ದಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. 

ಪ್ರತಿ ವರ್ಷ ನೆಟ್ಟ ಗಿಡ ಎಲ್ಲಿ ಹೋಗುತ್ತವೆ…?
ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡಲಾಗುತ್ತಿದ್ದರೂ ಅವು ಇರುವಂತೆ ಕಾಣುತ್ತಿಲ್ಲ. ಪ್ರತಿ ವರ್ಷ ನೆಟ್ಟ ಜಾಗದಲ್ಲೇ
ಸಸಿಗಳನ್ನು ನೆಡುತ್ತಿದ್ದಾರೆ. ನೆಟ್ಟ ಬಳಿಕ ಒಮ್ಮೆಯೂ ಅತ್ತ ತಿರುಗಿ ನೋಡುವುದಿಲ್ಲ. ಒಂದು ದಿನವೂ ನೀರು, ಗೊಬ್ಬರ ಹಾಕಿ ಪೋಷಿಸುವುದಿಲ್ಲ ಎಂದು ಘೋಕ್ಲೃಕರ್‌ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿಯ ಕೆ.ಬಿ.ಶಾಣಪ್ಪ ಕೂಡ ಬೆಂಬಲ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, “ಜನಸಂಖ್ಯೆ ಹೆಚ್ಚಾದಂತೆ ಮರಗಳ ಅವಲಂಬನೆ ಹೆಚ್ಚಾಗುವುದರಿಂದ
ಸಸಿ ನೆಡುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ. ನೀರು ಹಾಕುವುದಿಲ್ಲ, ನಿರ್ವಹಣೆ ಮಾಡುವುದಿಲ್ಲ ಎಂದು
ಸಾರಾಸಗಟಾಗಿ ಆರೋಪಿಸುವುದು ಸರಿಯಲ್ಲ. ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ಪರಿಶೀಲಿಸಲಾಗುವುದು’
ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next