Advertisement

ಸರ್ಕಾರದ ಮಾರ್ಗಸೂಚಿ ಪಾಲನೆ ಅಗತ್ಯ

09:49 AM Jul 05, 2020 | Suhan S |

ವಿಜಯಪುರ: ತೀವ್ರ ಶ್ವಾಸಕೋಶ ಸಂಬಂಧಿತ ರೋಗಿಗಳಿಗೆ ಆದ್ಯತೆ ಮೇಲೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದ್ದಾರೆ.

Advertisement

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಜೊತೆ ಖಾಸಗಿ ಆಸ್ಪತ್ರೆಗಳು ಸೂಕ್ತ ಸಹಕಾರ ನೀಡುತ್ತಿದ್ದು, ಅಭಿನಂದನಾರ್ಹ. ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳು ಆಸ್ಪತ್ರೆಗೆ ಬಂದರೆ ತುರ್ತಾಗಿ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಲು ಸೂಚಿಸಿದರು.

ರೋಗಿಗಳ ಸ್ವಾಬ್‌ ವೈದ್ಯಕೀಯ ಪರೀಕ್ಷೆ, ರೋಗಿಯ ಆರೋಗ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಸ್ಪರ ಸಮನ್ವಯತೆಯಿಂದ ಬಗೆಹರಿಸಿಕೊಳ್ಳಬೇಕು. ಸದ್ಯಕ್ಕೆ ಟ್ರೂನ್ಯಾಟ್‌ ಮೂಲಕ ಸ್ವಾಬ್‌ ವೈದ್ಯಕೀಯ ಪರೀಕ್ಷೆ ಆದಷ್ಟು ಶೀಘ್ರ ವರದಿ ನೀಡಲು ಪ್ರಯತ್ನಿಸಲಾಗುವುದು. ಶೀಘ್ರದಲ್ಲಿಯೇ ಆರ್‌ ಟಿಪಿಸಿಆರ್‌ ಮೂಲಕ ಸ್ವಾಬ್‌ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಜಾರಿಯಾಗಲಿದ್ದು, ಅಲ್ಲಿಯವರೆಗೆ ವ್ಯವಸ್ಥಿತ ರೀತಿಯಲ್ಲಿ ಕೋವಿಡ್‌ -19 ರೋಗಿಗಳ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.

ಮಹಾರಾಷ್ಟ್ರ ರೀತಿಯಲ್ಲಿ ಬೆಂಗಳೂರಿನಿಂದ ಆಗಮಿಸುವ ವ್ಯಕ್ತಿಗಳ ಕುರಿತು ಸೂಕ್ತ ನಿಗಾ ವಹಿಸಿ, ವೈದ್ಯಕೀಯ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಪ್ಲಾಸ್ಮಾ ಥೆರಪಿ ಅಳವಡಿಸುವ ಕುರಿತಂತೆ ಸರ್ಕಾರದ ಮಾರ್ಗಸೂಚಿ, ನಿರ್ದೇಶನಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ನೂತನ ನಿಯಮಾವಳಿ ಅನ್ವಯ ಖಾಸಗಿ ಆಸ್ಪತ್ರೆಗಳಿಗೆ ಆಗಮಿಸುತ್ತಿರುವ ತೀವ್ರ ಉಸಿರಾಟ ತೊಂದರೆ, ಕೋವಿಡ್‌-19 ಲಕ್ಷಣ ರೋಗಿಗಳ ಬಗ್ಗೆ ಸೂಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳುವಲ್ಲಿ ಸಮನ್ವಯ ಅಗತ್ಯ. ಹೋಂ ಐಸೋಲೇಷನ್‌, ಸ್ವಾಬ್‌ ಸಂಗ್ರಹ, ಕೋವಿಡ್‌ ರೋಗಿಗಳ ಚಿಕಿತ್ಸೆ ಆಗುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಗೋವಿಂದರೆಡ್ಡಿ, ಆರೋಗ್ಯ ಇಲಾಖೆಯ ಡಾ| ಮಹೇಂದ್ರ ಕಾಪ್ಸೆ, ಡಾ| ಮಲ್ಲನಗೌಡ ಬಿರಾದಾರ, ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿನಿಧಿ  ಡಾ| ಎಲ್‌.ಎಚ್‌. ಬಿದರಿ ಸೇರಿದಂತೆ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next