ರಾಮನಗರ: ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಕೋವಿಡ್ 19 ಸೋಂಕು ಉಲ್ಬಣಿಸುತ್ತಿದೆ. 3 ಸಾವಿರ ಮಂದಿ ಸರ್ಕಾರದ ಹೊಣೆಗೇಡಿತನಕ್ಕೆ ಬಲಿಯಾಗಿದ್ದಾರೆ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು. ಕೊರೊನಾ ಅಳಿಸಿ, ಜನರ ಪ್ರಾಣ ಉಳಿಸಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೋವಿಡ್-19 ಸೋಂಕು ಹರಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿರ್ವಹಣೆ ವಿಚಾರದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಒಬ್ಬರಿಂದ ತನಿಖೆಯಾಗಬೇಕು. ಇನ್ನು 15 ದಿನಗಳಲ್ಲಿ ತನಿಖೆ ಆರಂಭವಾಗದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
5 ಲಕ್ಷ ಪರಿಹಾರಕ್ಕೆ ಒತ್ತಾಯ ಕೋವಿಡ್ ಸೋಂಕಿನಿಂದ ಆಗುತ್ತಿರುವ ಸಾವುಗಳು ಸಂಪೂರ್ಣ ಸರ್ಕಾರದ ನಿರ್ಲಕ್ಷದಿಂದಲೇ, ಹೀಗಾಗಿ ಸರ್ಕಾರ ಪ್ರತಿಯೊಂದು ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಮಂತ್ರಿ ಮಂಡಲದಲ್ಲಿರುವ ಎಲ್ಲಾ ಸದಸ್ಯರು ಆರೋಗ್ಯ ಸಚಿವರಾಗಿಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ನಿ ಅಗಲಿಕೆ ನೋವಿನಲ್ಲೂ ಜನಪರ ಕಾಳಜಿ: ಕಳೆದ 50 ವರ್ಷಗಳಿಂದಲೂ ನಾಡಪರ, ಕನ್ನಡಪರ ಹೋರಾಟ, ಪ್ರತಿಭಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ವಾಟಾಳ್ ನಾಗರಾಜ್ ಅವರ ಧರ್ಮ ಪತ್ನಿ ಇತ್ತೀಚೆಗೆ ಮೃತಪಟ್ಟಿದ್ದರು. ಈ ನೋವಿನಲ್ಲೂ ಅವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲು ರಾಮನಗರದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಜನಪರ ಕಾಳಜಿ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಪ್ರಮುಖರಾದ ಸಿ.ಎಸ್. ಜಯಕುಮಾರ್, ಗಾಯತ್ರಿಬಾಯಿ ಹಾಜರಿದ್ದರು.