Advertisement

ಬೆಲೆ ಏರಿಕೆ ನಿಯಂತ್ರಣದಲ್ಲಿ ಸರ್ಕಾರ ವಿಫಲ

02:58 PM Apr 11, 2022 | Team Udayavani |

ದಾವಣಗೆರೆ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಜನಜೀವನಕ್ಕೆ ತೊಂದರೆ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಭಾನುವಾರ ಯುವ ಕಾಂಗ್ರೆಸ್‌ನ ರಾಷ್ಟ್ರ, ರಾಜ್ಯ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ರಾಜ್ಯಾಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರನ್ನು ಭಾರೀ ಗಾತ್ರದ ಹೂವಿನ ಹಾರದೊಂದಿಗೆ ಸ್ವಾಗತಿಸಲಾಯಿತು. ಕೇಂದ್ರ ಸರ್ಕಾರದ ಪ್ರತಿಕೃತಿಗಳ ಮೆರವಣಿಗೆ ನಡೆಸಲಾಯಿತು. ಶ್ರೀರಾಮ ನವಮಿ ಅಂಗವಾಗಿ ಮಹಾನಗರ ಪಾಲಿಕೆ ಆವರಣದ ಹೊರ ಭಾಗದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮಹಾನಗರಪಾಲಿಕೆ ಆವರಣದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಹಾನಗರ ಪಾಲಿಕೆ ಮುಂಭಾಗದಿಂದ ಅರುಣ ಚಿತ್ರಮಂದಿರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಅಚ್ಛೇ ದಿನ್‌ ತರಲಾಗುವುದು ಎಂಬ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ದಿನ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಜೀವನವನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಅಚ್ಛೇ ದಿನ್‌ ಎಲ್ಲಿವೆ ಎಂದು ಹುಡುಕುವಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಶೇ. 40 ರಷ್ಟು ಕಮೀಷನ್‌ ಸರ್ಕಾರವಾದರೆ, ಕೇಂದ್ರ ಸರ್ಕಾರ 80 ಪೈಸೆ ಸರ್ಕಾರ ಆಗಿದೆ. ಪ್ರತಿ ದಿನ ಪೆಟ್ರೋಲ್‌ ದರವನ್ನು 80 ಪೈಸೆಯಂತೆ ಹೆಚ್ಚಳ ಮಾಡುತ್ತಿದೆ. ನಿರಂತರವಾಗಿ ಇಂಧನ ದರ ಏರಿಕೆ ಮಾಡುತ್ತಿರುವ ಸರ್ಕಾರದ ನೀತಿಯಿಂದ ಜನರು ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ.ಎಸ್‌. ಮಂಜುನಾಥ್‌ ಗಡಿಗುಡಾಳ್‌, ಸದಸ್ಯ ಎ. ನಾಗರಾಜ್‌, ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ನಿಖೀಲ್‌ ಕೊಂಡಜ್ಜಿ, ರಾಷ್ಟ್ರೀಯ ವಕ್ತಾರ ಎಚ್‌.ಜೆ. ಮೈನುದ್ದೀನ್‌, ಎಲ್‌.ಎಂ.ಎಚ್‌ ಸಾಗರ್‌, ರಂಜಿತ್‌, ತಿಪ್ಪೇಶ್‌, ಹರೀಶ್‌ ಬಸಾಪುರ, ಸಂತೋಷ್‌ ಇತರರು ಇದ್ದರು.

Advertisement

ನಾವು ಅಧಿಕಾರಕ್ಕೆ ಬಂದರೆ 35 ರೂಪಾಯಿಗೆ ಒಂದು ಲೀಟರ್‌ ಪೆಟ್ರೋಲ್‌ ದೊರೆಯುವಂತೆ ಮಾಡಲಾಗುವುದು, ಅಚ್ಛೇ ದಿನ್‌ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬಾರದೇ ಇರುವುದರಿಂದ ಅಚ್ಛೇ ದಿನ್‌ ಯಾವಾಗ ಬರುತ್ತದೋ ಎಂದು ದೇಶದ ಜನ ಕಾಯುವಂತಾಗಿದೆ. -ಸೈಯದ್‌ ಖಾಲಿದ್‌, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next