Advertisement

ಯಾಂತ್ರೀಕೃತ ಕೃಷಿ ಉತ್ತೇಜಿಸಲು ಸರಕಾರದ ಪ್ರೋತ್ಸಾಹ

06:10 AM Jul 25, 2017 | |

ಉಡುಪಿ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದು, ಎಲ್ಲ ಕಡೆ ನಾಟಿ ಕಾರ್ಯ ನಡೆಯುತ್ತಿದೆ. ಈಗ ಎಲ್ಲ ಕಡೆ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು, ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಕೃಷಿಕರು ನವ- ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರವೇ ಪ್ರೋತ್ಸಾಹಧನ ನೀಡುತ್ತಿದೆ. ಈ ವರ್ಷದಿಂದ ಕೂರಿಗೆ ಬಿತ್ತನೆ (ನೇರ ಬಿತ್ತನೆ), ಯಾಂತ್ರೀಕೃತ ನಾಟಿ ಕೈಗೊಂಡರೆ ಪ್ರೋತ್ಸಾಹಧನ ಪಡೆಯಬಹುದು.

Advertisement

ನಾಟಿಕಾರ್ಯಕ್ಕೆ ಜನ ಸಿಗುತ್ತಿಲ್ಲ ಎನ್ನುವ ಕೊರಗು ರೈತರದ್ದಾಗಿತ್ತು. ಆದರೆ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದರಿಂದ ಹೆಚ್ಚಿನ ಜನರ ಅಗತ್ಯವಿಲ್ಲದೆ ನಡೆಯುತ್ತಿದ್ದು, ಕೃಷಿ ಚಟುವಟಿಕೆಗಳು ಕೂಡ ವೇಗವಾಗಿ ಮುಗಿಯುತ್ತದೆ. ಕೃಷಿಯಲ್ಲಿ ತಾಂತ್ರಿಕತೆ ಬಳಕೆಗೆ ಸರಕಾರ ಪ್ರೋತ್ಸಾಹಿಸುತ್ತಿದ್ದು, ಸಬ್ಸಿಡಿ ದರದಲ್ಲಿ ಯಂತ್ರಗಳ ಖರೀದಿಗೆ ಧನಸಹಾಯ, ಪ್ರೋತ್ಸಾಹಧನ ಹೀಗೆ ವಿಭಿನ್ನ ರೀತಿಯಲ್ಲಿ ಸಹಕಾರ ನೀಡುತ್ತಿದೆ. 

ಟ್ರ್ಯಾಕ್ಟರ್‌ ಅಥವಾ ಡ್ರಮ್‌ ಸೀಡರ್‌ ಮೂಲಕ ನಾಟಿ ಕಾರ್ಯ ಮಾಡಿದರೆ ಎಕರೆಗೆ 1,600 ರೂ., ಬಿತ್ತನೆ ಕಾರ್ಯವನ್ನು ಸಹ ಯಂತ್ರದ ಮೂಲಕ ಮಾಡಿದರೆ ಎಕರೆಗೆ 1,600 ರೂ. ಪ್ರೋತ್ಸಾಹಧನ ಪಡೆಯಬಹುದು. ಸ್ವಂತದಿದ್ದರೂ, ಬಾಡಿಗೆ ಸೇವಾ ಕೇಂದ್ರ, ಯಂತ್ರಧಾರಿ ಕೃಷಿ ಕೇಂದ್ರದಿಂದ ಯಂತ್ರಗಳಿಂದ ನಾಟಿ ಅಥವಾ ಬಿತ್ತನೆ ಕಾರ್ಯ ಮಾಡಿದರೆ ಪ್ರೋತ್ಸಾಹಧನ ಸಿಗಲಿದೆ. ಕೃಷಿ ಯಂತ್ರಧಾರಿ ಯೋಜನೆಯಡಿ ನಾಟಿ ಹಾಗೂ ಬಿತ್ತನೆ ಕಾರ್ಯಕ್ಕೆ ಗಂಟೆಗೆ 500 ರೂ. ಹಾಗೂ ಭೂಸಮೃದ್ಧಿ ಯೋಜನೆಯಡಿ 600 ರೂ. ನಿಗದಿ ಮಾಡಲಾಗಿದೆ. ಆದರೆ ಚಾಪೆ ನೇಜಿ ಇನ್ನಿತರ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ತಗುಲುವುದರಿಂದ ಹೆಚ್ಚಿನ ದರ ಪಡೆಯುತ್ತಾರೆ. 

ಉಡುಪಿ ಜಿಲ್ಲೆಯಲ್ಲಿ ಒಟ್ಟು 2,500 ಕ್ವಿಂಟಾಲ್‌ ಭತ್ತದ ಬೀಜದ ಅಗತ್ಯವಿದ್ದು, ಅದರಲ್ಲೂ ಎಂ. ಒ. 4 ಭತ್ತಕ್ಕೆ ಭಾರೀ ಬೇಡಿಕೆಯಿದೆ. ಆದರೆ ಕೇವಲ 1,655 ಕ್ವಿಂಟಾಲ್‌ ಬೀಜ ಪೂರೈಸಲಾಗಿದೆ. ಪರ್ಯಾಯವಾಗಿ ಎಂ. ಒ. 16, ಜ್ಯೋತಿ, ಚಂಪಕ ಹಾಗೂ ಹೊಸದಾಗಿ ಕೇರಳದಿಂದ ಎಂ. ಒ. 22ನ್ನು 10 ಕ್ವಿಂಟಾಲ್‌ ಹಾಗೂ ಎಂ. ಒ. 21 ನ್ನು 2 ಕ್ವಿಂಟಾಲ್‌ ಬೀಜವನ್ನು ತರಿಸಲಾಗಿದೆ. 

30 ಸಾವಿರ ಹೆಕ್ಟೇರ್‌ ಬಿತ್ತನೆ ಪೂರ್ಣ
ಉಡುಪಿ – 14055 ಹೆಕ್ಟೇರ್‌, ಕುಂದಾಪುರ – 12,100 ಹೆಕ್ಟೇರ್‌ ಹಾಗೂ ಕಾರ್ಕಳ- 4600 ಹೆಕ್ಟೇರ್‌ ಬಿತ್ತನೆ ಕಾರ್ಯ ನಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 30,655 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ 44,000 ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್‌ ಎರಡನೇ ವಾರದವರೆಗೂ ಬಿತ್ತನೆ ಕಾರ್ಯ ನಡೆಯಲಿದೆ.

Advertisement

ಭತ್ತ ವಿಮೆ : ಜು. 31 ಕೊನೆ ದಿನ
ಕರ್ನಾಟಕ ರಾಜ್ಯ ಕೃಷಿ ಸುರಕ್ಷಾ ಪ್ರಧಾನಮಂತ್ರಿ ಫ‌ಸಲು ವಿಮೆ ಯೋಜನೆಯಡಿ ಪ್ರಾಕೃತಿಕ ವಿಕೋಪಗಳಿಂದ ಕೃಷಿಗೆ ಹಾನಿಯಾದರೆ ಹೆಕ್ಟೇರ್‌ಗೆ ಗರಿಷ್ಠ 54,000, ಎಕರೆಗೆ ಆದರೆ 21,600 ರೂ. ಭತ್ತ ವಿಮೆ ಸೌಲಭ್ಯ ಸಿಗಲಿದೆ. ಅದಕ್ಕಾಗಿ ಎಕರೆಗೆ 432 ರೂ., ಹೆಕ್ಟೇರ್‌ಗೆ 1080 ರೂ. ಪ್ರೀಮಿಯಂ ಕಟ್ಟಬೇಕು. ಎಲ್ಲ ಬ್ಯಾಂಕ್‌ಗಳು ಹಾಗೂ ಸಹಕಾರಿ ಕೋ- ಆಪರೇಟಿವ್‌ ಸೊಸೈಟಿಗಳಲ್ಲಿ ವಿಮೆ ಸೌಲಭ್ಯ ಸಿಗಲಿದೆ. ಕೂಡಲೇ ಪಹಣಿ ಪತ್ರ, ಗುರುತು ಪತ್ರ ಹಾಗೂ ಬಿತ್ತನೆ ಬೀಜಗಳ ಮಾಹಿತಿ ನೀಡಿ ವಿಮೆ ಮಾಡಿಸಿಕೊಳ್ಳಬೇಕು. ಜು. 31 ನೊಂದಾವಣಿಗೆ ಕೊನೆ ದಿನವಾಗಿರುತ್ತದೆ. ಕಳೆದ ವರ್ಷ ನೊಂದಾಯಿಸಿದ್ದರೆ ಅದನ್ನೇ ಮುಂದುವರಿಸಬಹುದು. ಹಾನಿ, ನಷ್ಟ ಸಂಭವಿಸಿದಾಗ ಮಾಹಿತಿ ನೀಡಿದಲ್ಲಿ, ಕಳೆದ ವರ್ಷದ ಇಳುವರಿಯಷ್ಟೇ ಹಣ ಸಿಗಲಿದೆ. 

ತಾಂತ್ರಿಕ ಉತ್ತೇಜನಕ್ಕೆ ಒತ್ತು
ಕೃಷಿ ಕ್ಷೇತ್ರದಲ್ಲೂ ತಾಂತ್ರಿಕತೆ ಬಳಕೆಗೆ ಕೃಷಿ ಇಲಾಖೆ ಉತ್ಸುಕವಾಗಿದ್ದು, ರೈತರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕೃಷಿಕರು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬಹುದು. 

 – ಚಂದ್ರಶೇಖರ್‌ ನಾಯಕ್‌, ಉಡುಪಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ

ಹೇಗೆ ಸಿಗಲಿದೆ ಸೌಲಭ್ಯ?
ಕೃಷಿ ಇಲಾಖೆಯಿಂದ ತಾಂತ್ರಿಕ ಉತ್ತೇಜಕ (ಟೆಕ್ನೋ ಪ್ರಮೋಟರ್) ರನ್ನು ನಿಯೋಜಿಸಲಾಗಿದ್ದು, ಅವರಿಗೆ ತರಬೇತಿ ನೀಡಲಾಗುವುದು. ರೈತರು ಹೆಸರು, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಹಾಗೂ ಆರ್‌ಟಿಸಿ ಪತ್ರವನ್ನು ನೀಡಿದರೆ ಸಾಕು. ಅದನ್ನು ಹೋಬಳಿವಾರು ತಾಂತ್ರಿಕ ಉತ್ತೇಜಕರು 3 ಸಲ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸಿದ ಬಳಿಕ ರೈತರ ಖಾತೆಗೆ ನೇರವಾಗಿ ಹಣ ಬೀಳಲಿದೆ. 

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next