Advertisement

6ನೇ ವೇತನ ಆಯೋಗ ವರದಿ ಜಾರಿ ಆಗ್ರಹಿಸಿ ಸರಕಾರಿ ನೌಕರರ ಪ್ರತಿಭಟನೆ

10:48 AM Oct 26, 2017 | |

ಸ್ಟೇಟ್‌ಬ್ಯಾಂಕ್‌: ರಾಜ್ಯವು 6ನೇ ವೇತನ ಆಯೋಗದ ವರದಿಯನ್ನು 2017 ನವೆಂಬರ್‌ ಅಂತ್ಯದೊಳಗೆ ಪಡೆದು ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಹಾಗೂ 2017 ಎಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ಶೇ. 30ರಷ್ಟು ಮಧ್ಯಾಂತರ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರಕಾರವು ತನ್ನ ನೌಕರರ ವೇತನಕ್ಕೆ ಬಜೆಟ್‌ನಲ್ಲಿ ಶೇ. 17.5ರಷ್ಟು ಮೊತ್ತವನ್ನು ಮಾತ್ರ ತೆಗೆದಿರಿಸಿದೆ. ನೆರೆಯ ಕೇರಳದಲ್ಲಿ ಸಂಪನ್ಮೂಲದ ಕೊರತೆ ಇದ್ದರೂ ಬಜೆಟ್‌ನ ಶೇ. 30ರಷ್ಟನ್ನು ಸರಕಾರಿ ನೌಕರರ ವೇತನಕ್ಕೆ ಮೀಸಲಿಡುತ್ತದೆ. ರಾಜ್ಯ ಸರಕಾರಕ್ಕೆ ತನ್ನ ನೌಕರರಿಗೆ ಪರಿಷ್ಕೃತ ವೇತನ ಪಾವತಿಸಲು 5,000 ಕೋಟಿ ರೂ. ಮಾತ್ರ ಹೆಚ್ಚುವರಿಯಾಗಿ ಬೇಕಾಗುತ್ತದೆ. ಒಂದೂವರೆ ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸುವ ರಾಜ್ಯ ಸರಕಾರಕ್ಕೆ ಇದೊಂದು ದೊಡ್ಡ ಹೊರೆ ಆಗಲಾರದು ಎಂದು ಹೇಳಿದರು.

ಡಿ ಗ್ರೂಪ್‌ ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್‌ ಕಿರೋಡಿಯನ್‌ ಮಾತನಾಡಿ, ತಮ್ಮ ಬೇಡಿಕೆ ಈಡೇರದಿದ್ದರೆ ಆತ್ಮಹತ್ಯೆಗೂ ಸಿದ್ಧ ಎಂದರು.ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೀಟಾ ಡೇಸಾ ಅವರು ಸ್ವಾಗತಿಸಿ, ಪ್ರಸ್ತಾವನೆಗೈದು ಮನವಿ ಪತ್ರವನ್ನು ವಾಚಿಸಿದರು.

ಖಜಾಂಚಿ ಗೋಪಾಲಕೃಷ್ಣ, ಉಪಾಧ್ಯಕ್ಷರಾದ ಪಿ.ಕೆ. ಕೃಷ್ಣ, ಎಂ.ಬಿ. ದೇವದಾಸ್‌, ಆ್ಯಗ್ನೆಲ್‌ ಪಿಂಟೊ, ರಾಜ್ಯ ಪರಿಷತ್‌ ಸದಸ್ಯ ಡಾಲ್ಫಿ ಸಿಕ್ವೇರಾ, ವಿಭಾಗೀಯ ಸಂಘಟನ ಕಾರ್ಯದರ್ಶಿ ಜಯಂತ್‌ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಿತು. 

ಸಂಧಾನಕ್ಕೂ ಸಿದ್ಧ, ಸಂಘರ್ಷಕ್ಕೂ ಸಿದ್ಧ
ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರಕಾರಿ ನೌಕರರು ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ನೆರೆಯ ಕೇರಳ, ತಮಿಳುನಾಡು ರಾಜ್ಯ ಸರಕಾರಿ ನೌಕರರ ವೇತನಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ವೇತನವು ಶೇ. 60ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಹಣದುಬ್ಬರದ ಪ್ರಮಾಣ ಶೇ. 4.6 ರಷ್ಟಿದ್ದು, ಸರಳ, ಸಾಮಾನ್ಯ ಬದುಕು ನಡೆಸುವುದು ಕಷ್ಟವಾಗಿದೆ. ಆದ್ದರಿಂದ 6ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು. ಈ ವಿಷಯದಲ್ಲಿ ನೌಕರರು ಸಂಧಾನಕ್ಕೂ ಸಿದ್ಧ, ಸಂಘರ್ಷಕ್ಕೂ ಸಿದ್ಧ.
ಪ್ರಕಾಶ್‌ ನಾಯಕ್‌, ಜಿಲ್ಲಾಧ್ಯಕ್ಷ
ರಾಜ್ಯ ಸರಕಾರಿ ನೌಕರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next