Advertisement
ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದೂರದ ಊರಿನ ವಿದ್ಯಾರ್ಥಿನಿಯರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ ದಿ| ಕುದ್ಮುಲ್ ರಂಗರಾವ್ ಹೆಣ್ಣು ಮಕ್ಕಳ ವಸತಿ ನಿಲಯ ಮೂವತ್ತು ವರ್ಷಗಳ ಹಿಂದೆಯೇ ಸ್ಥಾಪನೆಗೊಂಡಿತ್ತು. ಆದರೆ ವರ್ಷಗಳ ಹಿಂದೆ ಈ ಕಟ್ಟಡ ವಾಸಯೋಗ್ಯವಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಇಲ್ಲಿಂದ ವಿದ್ಯಾರ್ಥಿನಿಯರನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಿ, ವಸತಿ ನಿಲಯದ ದುರಸ್ತಿಗೆ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ವರ್ಷಗಳೇ ಸಂದರೂ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಖಾಸಗಿ ಕಟ್ಟಡಕ್ಕೆ ದುಬಾರಿ ಬಾಡಿಗೆ ನೀಡುವಂತಾಗಿದೆ.
ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಕಟ್ಟಡದ ಒಳಗೆ ಇದ್ದ ಸಂದರ್ಭದಲ್ಲಿಯೇ ಕಟ್ಟಡದ ಸ್ಲ್ಯಾಬ್ ತುಂಡು ಬಿದ್ದ ಹಿನ್ನೆಲೆಯಲ್ಲಿ ಇಲಾಖೆ ಎಚ್ಚೆತ್ತುಕೊಂಡಿತ್ತು. ಜಿಲ್ಲಾ ಪಂಚಾಯತ್‌ನ ಎಂಜಿನಿಯರ್ ಗಳಿಂದ ವರದಿ ಕೇಳಿತ್ತು. ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಭಿಯಂತರರು 2017 ಜೂನ್‌ನಲ್ಲಿ ಕಟ್ಟಡ ಪರಿಶೀಲಿಸಿ, ವಸತಿ ನಿಲಯ ಕಟ್ಟಡದ ನೆಲ ಮಹಡಿಯ ಕಾಲಂಗಳ ಕಬ್ಬಿಣವು ಸಂಪೂರ್ಣ ತುಕ್ಕು ಹಿಡಿದಿದ್ದು, ಕೆಲವು ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಒಂದನೇ ಮಹಡಿಯ ಛಾವಣಿಯಲ್ಲಿ ಹಲವು ಕಡೆ ಬಿರುಕು ಕಾಣಿಸಿದೆ. ಎರಡನೇ ಮಹಡಿಯ ಕಾಂಕ್ರೀಟ್ ಬಿರುಕು ಬಿಟ್ಟಿದೆ. ಎಲ್ಲ ಮಹಡಿಗಳ ಛಾವಣಿಯ ಕಬ್ಬಿಣಗಳು ತುಕ್ಕು ಹಿಡಿದಿದೆ. ಆ ಹಿನ್ನೆಲೆಯಲ್ಲಿ ವಸತಿ ನಿಲಯದ ಕಟ್ಟಡ ವಾಸಕ್ಕೆ ಯೋಗ್ಯವಲ್ಲ ಹಾಗೂ ವಾಸವಿದ್ದಲ್ಲಿ ಅಪಾಯವಿದೆ. ಈ ಬಗ್ಗೆ ತಜ್ಞರಿಂದ ತಾಂತ್ರಿಕ ಅಭಿಪ್ರಾಯವನ್ನು ಕೂಡಲೇ ಪಡೆದುಕೊಳ್ಳಬೇಕು ಎಂದು ವರದಿ ನೀಡಿದ್ದರು. ಅಂದಾಜು ಪಟ್ಟಿ ಸಲ್ಲಿಕೆ
ಕೊಡಿಯಾಲಬೈಲ್‌ನ ಹೆಣ್ಣು ಮಕ್ಕಳ ವಸತಿ ನಿಲಯ ವಾಸಯೋಗ್ಯವಲ್ಲ ಎಂದು ಅರಿತ ಬಳಿಕ ವಿದ್ಯಾರ್ಥಿನಿಯರನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಿ, ಕಟ್ಟಡದ ದುರಸ್ತಿಗಾಗಿ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಶೀಘ್ರವೇ ಸರಕಾರ ಸ್ಪಂದಿಸುವ ನಿರೀಕ್ಷೆ ಇದೆ.
– ಯೋಗೀಶ್,
ಸಮಾಜ ಕಲ್ಯಾಣಾಧಿಕಾರಿ, ದ.ಕ.
Related Articles
ಸಮಾಜ ಕಲ್ಯಾಣ ಇಲಾಖೆಯು ಸ್ವಂತ ಕಟ್ಟಡ ಹೊಂದಿದ್ದರೂ ಸೂಕ್ತ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈಗ ಬಾಡಿಗೆ ಕಟ್ಟಡಕ್ಕೆ ಮೊರೆ ಹೋಗಿದೆ. ಇದ ರಿಂದ ಉರ್ವ ಮಾರಿಗುಡಿ ಬಳಿ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದ ಇಲಾಖೆ ವಿದ್ಯಾರ್ಥಿನಿಯರನ್ನು ಅಲ್ಲಿಗೆ ಸ್ಥಳಾಂತರಿಸಿದೆ. ಕಟ್ಟಡಕ್ಕೆ ತಿಂಗಳಿಗೆ ಒಂದು ಲಕ್ಷ ರೂ. ಬಾಡಿಗೆ ನೀಡಿ ಊಟದ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಮಾಡುತ್ತಿದೆ. ಸರಕಾರ ಈ ಬಗ್ಗೆ ಎಚ್ಚೆತ್ತು ಹೆಣ್ಣು ಮಕ್ಕಳ ವಸತಿ ನಿಲಯದ ಸ್ವಂತ ಕಟ್ಟಡವನ್ನು ದುರಸ್ತಿ ಮಾಡಬೇಕಾಗಿದೆ.
Advertisement
ಪ್ರಜ್ಞಾ ಶೆಟ್ಟಿ