ಚಿತ್ರದುರ್ಗ: ಇದೇ ಮೊದಲ ಬಾರಿಗೆ ಅಸಂಘಟಿತ ವಲಯದ ವಿವಿಧ ವೃತ್ತಿ ಆಧಾರಿತ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸಿ ಪರಿಶೀಲಿಸಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಕಾರ್ಮಿಕ ಸಮ್ಮಾನ್ ಪ್ರಶಸ್ತಿಗಾಗಿ ಆಯ್ಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಕೇಂದ್ರೀಕರಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅಸಂಘಟಿತ ಕಾರ್ಮಿಕರ ದಿನ ಆಚರಣೆ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ನೀಡಲು ಉದ್ದೇಶಿಸಿದೆ. ಪ್ರತಿ ವರ್ಷ ಮಾರ್ಚ್ 1 ರಂದು ಅಸಂಘಟಿತ ಕಾರ್ಮಿಕ ದಿನ ಎಂದು ಆಚರಣೆ ಮಾಡಲು ತೀರ್ಮಾನಿಸಿದೆ. ಇದೇ ದಿನದಂದು ಘೋಷಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಸನ್ಮಾನ ಮಾಡಲಾಗುವುದು. ಅಸಂಘಟಿತ ಕಾರ್ಮಿಕ ವಲಯದ ಪೈಕಿ 13 ವಲಯಗಳಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದರು.
ಸಾರಿಗೆ ಕಾರ್ಮಿಕರು, ಹಮಾಲರು, ಟೆ„ಲರ್‌ಗಳು, ಚಿಂದಿ ಆಯುವವರು, ಕಟ್ಟಡ ಕಾರ್ಮಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಮೆಕ್ಯಾನಿಕ್‌ಗಳು, ಮನೆ ಕೆಲಸದವರು ಈ ವೃತ್ತಿ ವಲಯದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯಲ್ಲಿ ಎರಡು ವಿಭಾಗಗಳಿದ್ದು, ಶ್ರಮ ಸನ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿಗೆ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು. ಶ್ರಮ ಸನ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಒಬ್ಬರು ಕಾರ್ಮಿಕರಿಗೆ ಒಂದು ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ಒಳಗೊಂಡಿದೆ. ವಿಶೇಷ ಪುರಸ್ಕಾರ ಪ್ರಶಸ್ತಿಯನ್ನು ಪ್ರತಿ ವಲಯದ 10 ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ 1 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ ಎಂದು ವಿವರಿಸಿದರು.
ಪ್ರಶಸ್ತಿಗಾಗಿ ಕಾರ್ಮಿಕರನ್ನು ಆಯ್ಕೆ ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅದೇ ಕಚೇರಿಗೆ ಫೆ. 20 ರೊಳಗಾಗಿ ಸಲ್ಲಿಸಬೇಕು. ಕಾರ್ಮಿಕ ಇಲಾಖೆಯಿಂದ ಪೂರೈಸಿದ ಕ್ರಮ ಸಂಖ್ಯೆ ಹೊಂದಿರುವ ಅರ್ಜಿ ನಮೂನೆಯಲ್ಲಿ ಮಾತ್ರವೇ ಸಲ್ಲಿಸಬೇಕು. ಜೆರಾಕ್ಸ್ ಮಾಡಿದ ಅಥವಾ ಅರ್ಜಿ ನಮೂನೆಯ ಪ್ರತಿಯಲ್ಲಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಪಂ ಸಿಇಒ ಪಿ.ಎನ್. ರವೀಂದ್ರ, ಎಸ್ಪಿ ಡಾ| ಅರುಣ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಜಿಲ್ಲಾ ಪ್ರಭಾರಿ ಕಾರ್ಮಿಕ ಅಧಿಕಾರಿ ಎನ್.ಎಚ್. ರಮೇಶ್, ಕಾರ್ಮಿಕ ನಿರೀಕ್ಷಕ ಡಿ. ರಾಜಣ್ಣ ಇದ್ದರು.
ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು?
ಅರ್ಜಿ ಸಲ್ಲಿಸಲು ಮೇಲೆ ತಿಳಿಸಿದ 13 ವೃತ್ತಿಗಳಲ್ಲಿ ಯಾವುದೇ ವೃತ್ತಿಯ ಕಾರ್ಮಿಕರು ಅರ್ಜಿ ಸಲ್ಲಿಸಬಹುದು. ವಯಸ್ಸು ಕನಿಷ್ಠ 40 ವರ್ಷ ಆಗಿರಬೇಕು. ಆಯಾ ವೃತ್ತಿಯಲ್ಲಿ ಶ್ರಮ ಸನ್ಮಾನ್ ಪ್ರಶಸ್ತಿಗೆ ಕನಿಷ್ಠ 20 ವರ್ಷಗಳ ಸೇವೆ ಹಾಗೂ ವಿಶೇಷ ಪುರಸ್ಕಾರಕ್ಕೆ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಜಿಲ್ಲೆಯವರಾಗಿರಬೇಕು. ವಾಹನ ಚಾಲಕ ವೃತ್ತಿ ಕಾರ್ಮಿಕರು ಯಾವುದೇ ಅಪಘಾತ ಎಸಗಿರಬಾರದು. ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಇಎಸ್‌ಐ ಮತ್ತು ಪಿಎಫ್ ವ್ಯಾಪ್ತಿಗೆ ಒಳಪಟ್ಟಿರಬಾರದು. ಅರ್ಜಿ ಸಲ್ಲಿಸುವ ಲಕೋಟೆ ಮೇಲೆ ಯಾವ ವಲಯದ, ವೃತ್ತಿಯ ಕಾರ್ಮಿಕ ಪ್ರಶಸ್ತಿಗೆ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಯನ್ನು ಫೆ. 20 ರ ಒಳಗಾಗಿ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಮಿಕ ಆಯ್ಕೆ ಸಮಿತಿ ರಚನೆ: ಕಾರ್ಮಿಕ ಸಮ್ಮಾನ್ ಪ್ರಶಸ್ತಿ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರಿಪಕ್ಷೀಯ ನಿರ್ವಹಣ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಜಿಪಂ ಸಿಇಒ ಉಪಾಧ್ಯಕ್ಷರಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು, ಲೋಕೋಪಯೋಗಿ, ಕೆಆರ್‌ಐಡಿಎಲ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ನಿರ್ಮಿತಿ ಕೇಂದ್ರ, ಸಣ್ಣ ನೀರಾವರಿ ಇಲಾಖೆಗಳ ಅಕಾರಿಗಳು, ಜಿಲ್ಲಾ ಕೌಶಲ್ಯ ಅಕಾರಿಗಳು, ಅಸಂಘಟಿತ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಮಾಲೀಕ ಸಂಘಟನೆಗಳ ಪ್ರತಿನಿಧಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದರು.