Advertisement

ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಬದ್ಧ: ರೈ

08:17 AM Oct 03, 2017 | |

ಬೆಂಗಳೂರು: “ಅರಣ್ಯಾಭಿವೃದ್ಧಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

Advertisement

63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕಬ್ಬನ್‌ ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗೆ ಹಮ್ಮಿಕೊಂಡಿದ್ದ ವಾಕಥಾನ್‌ ಉದ್ಘಾಟಿಸಿ ಮಾತನಾಡಿದ ಅವರು, “ಆನೆ, ಹುಲಿ, ಚಿರತೆ, ಸಿಂಗಲೀಕ, ಜಿಂಕೆ ಸೇರಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ಉಳಿಸಿಕೊಂಡು ಹೋಗಲು ಅರಣ್ಯ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ’ ಎಂದು ಹೇಳಿದರು.

“ಅರಣ್ಯದಂಚಿನ ಪ್ರದೇಶದಲ್ಲಿ ಆನೆ ಹಾವಳಿಗೆ ಕಡಿವಾಣ ಹಾಕಲು ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಜತೆಗೆ ಆನೆ ಹಾವಳಿಯಿಂದ ಆದ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತಿದೆ. ಕಾಡನ್ನು ಬೆಳೆಸಲು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಯಿಂದ
ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಮುಖ್ಯ. ಅರಣ್ಯ ಸಿಬ್ಬಂದಿಯೊಂದಿಗೆ ಜನರು ಅರಣ್ಯಾಭಿವೃದ್ಧಿ, ವನ್ಯಜೀವಿ ರಕ್ಷಣೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

2017ರ ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ, ನಟ ಪ್ರಕಾಶ್‌ ರೈ ಮಾತನಾಡಿ, ‘ ಈಗಾಗಲೇ “ಸೇವ್‌ ಟೈಗರ್‌’ ಅಭಿಯಾನದಲ್ಲಿ ಪಾಲ್ಗೊಂಡಿದ್ದೇನೆ. ಕಾಡಂಚಿನ ಜನರೊಂದಿಗೆ ಇದ್ದು ಬಂದಿದ್ದೇನೆ. ಅರಣ್ಯ ಸಂರಕ್ಷಣೆಯಿಂದ ವನ್ಯಜೀವಿಗಳನ್ನು ಕೂಡ ರಕ್ಷಿಸಲು ಸಾಧ್ಯ. ಪ್ರತಿಯೊಬ್ಬರೂ ಕಾಡನ್ನು ರಕ್ಷಿಸುವ ಜವಾಬ್ದಾರಿ ನಿಭಾಯಿಸಿದರೆ, ವನ್ಯಜೀವಿಗಳ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಯುವಜನತೆ ಕಾರ್ಯೋನ್ಮುಖವಾಗಿ ಅರಣ್ಯ  ಇಲಾಖೆಗೆ ಸಹಕರಿಸಬೇಕು’ ಎಂದು ಹೇಳಿದರು.

ನಟ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, “ವನ್ಯಜೀವಿಗಳನ್ನು ಸಂರಕ್ಷಿಸಬೇಕೆಂಬುದು ಯುವ ಜನರ ಬೇಡಿಕೆ. ಅದಕ್ಕೆ ಎಲ್ಲರೂ ಒಂದಾಗೋಣ. ಕಾಡು ಉಳಿಸಿ, ವನ್ಯ ಜೀವಿ ಸಂರಕ್ಷಿಸುವ ಮೂಲಕ ನಾಡನ್ನು ಶ್ರೀಮಂತವಾಗಿಸೋಣ’ ಎಂದರು. ಕಬ್ಬನ್‌ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗೆ ವನ್ಯಜೀವಿ ಸಂರಕ್ಷಣೆ ಕುರಿತು ವಿವಿಧ ಬಿತ್ತಿಫ‌ಲಕಗಳನ್ನು ಹಿಡಿದು “ನಮ್ಮನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ವಾಕಥಾನ್‌ ನಡೆಯಿತು. ಕಾರ್ಯಕ್ರಮದಲ್ಲಿ ಮೇಯರ್‌
ಸಂಪತ್‌ರಾಜ್‌, ಬಿಬಿಎಂಪಿ ಸದಸ್ಯ ಆರ್‌. ವಸಂತಕುಮಾರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್‌.ಸುಗಾರ್‌, ಎಸಿಎಫ್ ಆರ್‌. ಸುರೇಶ್‌ ಮತ್ತಿತರರು ಪಾಲ್ಗೊಂಡಿದ್ದರು. 

Advertisement

ಹುಲಿ ಹೆಜ್ಜೆ ಹಾಕಿದ ಅರಣ್ಯ ಸಚಿವ
“ನಮ್ಮನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದ ಹುಲಿವೇಷಧಾರಿಗಳು ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಅಗಮಿಸಿದ ಅರಣ್ಯ ಸಚಿವ ರಮಾನಾಥ್‌ ರೈ, ಹುಲಿ ವೇಷಧಾರಿಗಳೊಂದಿಗೆ ತಾವೂ ಹೆಜ್ಜೆ ಹಾಕಿದರು. ಅವರ ಹುಲಿಕುಣಿತ ಕಂಡ ನಟ ಪ್ರಕಾಶ್‌ರೈ ಸೇರಿ ಅಲ್ಲಿದ್ದವರು ಫ‌ುಲ್‌ಖುಷ್‌ ಆದರು. 

Advertisement

Udayavani is now on Telegram. Click here to join our channel and stay updated with the latest news.

Next