Advertisement
ಗೃಹ ಸಚಿವನಾದ ನಂತರ ಎಲ್ಲಾ ವಲಯಗಳಲ್ಲಿ ಸಭೆ ನಡೆಸಿ, ಇಲಾಖೆಯ ಪ್ರಗತಿ, ಸಮಸ್ಯೆ ಆಲಿಸುತ್ತಿದ್ದೇನೆ. ಈಗಾಗಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ ನಂತರ ದಾವಣಗೆರೆಯಲ್ಲಿ ಪ್ರಗತಿ ಪರಿಶೀಲಿಸಿದ್ದೇನೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಎಲ್ಲಾ ವಲಯದಲ್ಲೂ ಸಭೆ ನಡೆಸಿ, ಪರಿಶೀಲನೆ ನಡೆಸುವೆ. ಇಲಾಖಾ ಕಾರ್ಯವೈಖರಿ ಸುಧಾರಣೆ ಹಾಗೂ ಸಮಸ್ಯೆ ನಿವಾರಣೆ, ಸಿಬ್ಬಂದಿ ಬೇಡಿಕೆ ಈಡೇರಿಕೆ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಈ ಸಂದರ್ಭದಲ್ಲಿ ಸಲಹೆ-ಸೂಚನೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ದಾವಣಗೆರೆಯಲ್ಲಿ ಕಮೀಷನರೇಟ್ ಆರಂಭಿಸುವ ಬಗ್ಗೆ ಬೇಡಿಕೆ ಇದೆ. ಆ ಬಗ್ಗೆ ಇನ್ನೂ ಆಲೋಚಿಸಿಲ್ಲ. ಹೊಸ ಠಾಣೆಗಳನ್ನು ಸ್ಥಾಪಿಸಿದರೆ ಸಾಲದು, ಜತೆಗೆ ಸಿಬ್ಬಂದಿ ಒದಗಿಸಬೇಕು. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಅರಿತು ಕ್ರಮ ವಹಿಸುವೆ ಎಂದು ಅವರು ತಿಳಿಸಿದರು.
Related Articles
Advertisement
ಬೇಳೂರು ಹೇಳಿಕೆ ಖಂಡನೀಯ ದಾವಣಗೆರೆ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕಿದೆ. ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯ ಬಗ್ಗೆಯೂ ಆ ರೀತಿ ಮಾತನಾಡುವುದು ತಪ್ಪು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕುರಿತು ನೀಡಿದ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಬೇಳೂರು ಹಾಗೇನಾದರೂ ಹೇಳಿದ್ದಲ್ಲಿ ನಾನು ಖಂಡಿಸುವೆ. ತನಿಖೆ ನಡೆಸಿ, ಆ ಬಗ್ಗೆ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ನನ್ನ ಅಸ್ಮಿತೆ. ನಾನು ಗೃಹ ಸಚಿವನಾಗಿರುವುದರಿಂದ ಸದ್ಯ ಆ ಬಗ್ಗೆ ಏನೂ ಮಾತನಾಡುವುದಿಲ್ಲ. ಆ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಜಾಮದಾರ್, ಇತರರು ನೋಡಿಕೊಳ್ಳಲಿದ್ದಾರೆ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದನ್ನು ಕೇಂದ್ರ ತಿರಸ್ಕರಿಸಿದೆ. ನ್ಯಾಯಾಲಯದ ಮೆಟ್ಟಿಲೇರಲಿರುವ ಬಗ್ಗೆ ಅವರೇ ಮುಂದುವರಿಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪಾಟೀಲ್ ಉತ್ತರಿಸಿದರು. ಶಾಮನೂರು ಶಿವಶಂಕರಪ್ಪನವರು ಹಿರಿಯರು, ನನಗೆ ತಂದೆ ಸಮಾನ. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯವಿದೆ. ವಾದ-ವಿವಾದ ಏನೇ ಇದ್ದರೂ ಇನ್ನು ನ್ಯಾಯಾಲಯದಲ್ಲಿ ಬಗೆಹರಿಯಲಿದೆ ಎಂದು ಅವರು, ನಾನು ಬಸವಣ್ಣನವರನ್ನು ಬುದ್ಧ, ಕ್ರಿಸ್ತ, ಪೈಗಂಬರ್ ಸ್ಥಾನದಲ್ಲಿ ನೋಡ ಬಯಸುತ್ತೇನೆ. ಬಸವಣ್ಣ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂಬುದು ತಮ್ಮ ಆಶಯ. ಮುಂದೆ ಲೋಕಸಭಾ ಚುನಾವಣೆ ಬರಲಿರುವ ಕಾರಣ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.