Advertisement

Karnataka Govt.,; ಎಸ್‌ಬಿಐ, ಪಿಎನ್‌ಬಿ ಜತೆ ಸರಕಾರಿ ವ್ಯವಹಾರ ಬಂದ್‌!

01:31 AM Aug 14, 2024 | Team Udayavani |

ಬೆಂಗಳೂರು: ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸದಿರುವ ಹಿನ್ನೆಲೆ ಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹಾಗೂ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ)ಗಳಲ್ಲಿ ಇರಿಸಿರುವ ಎಲ್ಲ ಠೇವಣಿಗಳನ್ನು ವಾಪಸ್‌ ಪಡೆದುಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದ್ದು, ಭವಿಷ್ಯದಲ್ಲಿ ಈ ಎರಡು ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ ಇಡದಂತೆ ಹಣಕಾಸು ಇಲಾಖೆಯ ಮೂಲಕ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

Advertisement

ಇತ್ತೀಚೆಗೆ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಾಗೂ 2011 ಮತ್ತು 2013ರಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣ ಗಳನ್ನು ಉಲ್ಲೇಖೀಸಿ ಸಾರ್ವಜನಿಕ ಲೆಕ್ಕಪತ್ರ ಗಳ ಸಮಿತಿ (ಪಿಎಸಿ) ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಣಕಾಸು ಇಲಾಖೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಂದ ಅನು ಮೋದಿಸಲ್ಪಟ್ಟ ಈ ಆದೇಶವನ್ನು ಸೋಮವಾರ ಸಂಜೆ ಹಣಕಾಸು ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ| ಪಿ.ಸಿ. ಜಾಫ‌ರ್‌ ಹೊರಡಿಸಿದ್ದು, ಸೆ. 9ರೊಳಗಾಗಿ ಈ ಬ್ಯಾಂಕ್‌ಗಳಲ್ಲಿ ಇರಿಸಿರುವ ಎಲ್ಲ ನಿಶ್ಚಿತ ಠೇವಣಿ ಖಾತೆಗಳನ್ನು ಮುಕ್ತಾಯಗೊಳಿಸಿ ದೃಢೀಕರಣ ಹಾಗೂ ಖಾತೆಗಳ ವಿವರವನ್ನು ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಯಾರಿಗೆ ಅನ್ವಯ?
ರಾಜ್ಯ ಸರಕಾರದ ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿ.ವಿ.ಗಳು ಹಾಗೂ ಸರಕಾರದ ಇನ್ನಿತರ ಸಂಸ್ಥೆಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಹೀಗಾಗಿ ಇಲಾಖೆಗಳು ತತ್‌ಕ್ಷಣದಿಂದಲೇ ಎಸ್‌ಬಿಐ ಹಾಗೂ ಪಿಎನ್‌ಬಿಗಳಲ್ಲಿ ಇಟ್ಟಿರುವ ನಿಶ್ಚಿತ ಠೇವಣಿಗಳನ್ನು ಮುಕ್ತಾಯಗೊಳಿಸಬೇಕಾಗುತ್ತದೆ. ಠೇವಣಿ ವಿವರ, ಶಾಖೆಗಳ ಸಂಖ್ಯೆ, ಖಾತೆಗಳ ಸಂಖ್ಯೆ, ಠೇವಣಿ ಮಾಡಿದ ಒಟ್ಟು ಹಣ ಇತ್ಯಾದಿ ಮಾಹಿತಿ ಹೇಗಿರಬೇಕೆಂಬ ಬಗ್ಗೆ ಹಣಕಾಸು ಇಲಾಖೆಯಿಂದ ಪ್ರತ್ಯೇಕ ನಮೂನೆಯನ್ನೂ ಸಿದ್ಧಪಡಿಸಲಾಗಿದ್ದು, ಅದನ್ನು ಎಲ್ಲ ಇಲಾಖೆಗಳಿಗೆ ರವಾನೆ ಮಾಡಲಾಗುತ್ತದೆ.

ಹಳೆ ಪ್ರಕರಣಗಳನ್ನು ಆಧರಿಸಿ ಪಿಎಸಿ ನೀಡಿದ ಶಿಫಾರಸಿನ ಅನ್ವಯ ಹಣಕಾಸು ಇಲಾಖೆ ಈ ಸುತ್ತೋಲೆಯನ್ನು ಹೊರಡಿಸಿದೆ. ಬ್ಯಾಂಕ್‌ಗಳಲ್ಲಿ ಇಟ್ಟಿರುವ ಸರಕಾರಿ ಠೇವಣಿಗಳು ಎಷ್ಟು ಸುರಕ್ಷಿತ? ಸಾರ್ವಜನಿಕ ಹಣಕ್ಕೆ ಬಾಧ್ಯಸ್ಥರು ಯಾರು? ಸರಕಾರಿ ಹಣ ಬ್ಯಾಂಕ್‌ ಮೂಲಕ ಅಕ್ರಮ ಬಳಕೆಯಾಗುವುದು ಆಡಳಿತ ಯಂತ್ರದ ದುರ್ಬಳಕೆಯಲ್ಲವೇ ಎಂಬಿತ್ಯಾದಿ ಗಂಭೀರ ಪ್ರಶ್ನೆಗಳು ವರದಿ ಯಲ್ಲಿದೆ. ಇತ್ತೀಚೆಗೆ ನಡೆದ ವಾಲ್ಮೀಕಿಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸರಕಾರಕ್ಕೆ ಬಿಸಿ ತುಪ್ಪವಾಗಿರು ವಾಗ ಪಿಎಸಿ ಎತ್ತಿದ ಈ ಪ್ರಶ್ನೆಗಳು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿರುವ ಸರಕಾರ ಈ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಠೇವಣಿ ವ್ಯವಹಾರದಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿದೆ.

Advertisement

ಮುಂದೇನು?
ಈ ವಿಷಯಕ್ಕೆ ಸಂಬಂಧಿಸಿ “ಉದಯವಾಣಿ” ಜತೆಗೆ ಮಾತನಾಡಿದಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಪಿಎಸಿ ಶಿಫಾರಸು ಆಧರಿಸಿ ಹಣ ಕಾಸು ಇಲಾಖೆ ಈ ನಿರ್ಧಾರ ತೆಗೆದು ಕೊಂಡಿದೆ. ಬ್ಯಾಂಕ್‌ಗಳಲ್ಲಿ ಇಟ್ಟ ಸರಕಾರಿ ಹಣ ದುರ್ಬಳಕೆಯಾಗುವುದನ್ನು ತಪ್ಪಿಸಲು ಇಂಥ ಕಠಿನ ನಿರ್ಧಾರ ಅನಿವಾರ್ಯವಾಗಿದೆ. ಇಲಾಖೆಗಳ ಹೆಚ್ಚುವರಿ ಹಣವನ್ನು ಈ ರೀತಿ ನಿಶ್ಚಿತ ಠೇವಣಿ ರೂಪದಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಮುಂದೆ ಈ ಸಂಬಂಧ ಟೆಂಡರ್‌ ಕರೆದು ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗುವುದು. ಪ್ರಕ್ರಿಯೆ ಈಗಷ್ಟೇ ಪ್ರಾರಂಭವಾಗಿರುವುದರಿಂದ ಮೊತ್ತ ಹಾಗೂ ಖಾತೆಗಳ ವಿವರ ಲಭ್ಯವಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸಾಕಷ್ಟು ಸುಧಾರಣಾ ಕ್ರಮ ಪ್ರಾರಂಭಿಸಿದೆ. ವಿವಿಧ ನಿಗಮಗಳ ಕಲ್ಯಾಣ ಯೋಜನೆಗಳಿಗೆ ಸಂಬಂಧಪಟ್ಟಂತೆ ಬ್ಯಾಂಕ್‌ನಲ್ಲಿ ಇಟ್ಟ ಹಣವನ್ನು ಈಗಾಗಲೇ ವಾಪಸ್‌ ಪಡೆಯಲಾಗುತ್ತಿದೆ. ಸುಮಾರು 2 ಸಾವಿರ ಕೋಟಿ ರೂ. ಹಣ ವಾಪಸ್‌ ಬರಲಿದೆ ಎಂದರು.

ಪ್ರಕರಣ ಯಾವುದು?
ಪ್ರಕರಣ1
2011ರಲ್ಲಿ ರಾಜಾಜಿನಗರದ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಶಾಖೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮ(ಕೆಐಎಡಿಬಿ)ವು 25 ಕೋಟಿ ರೂ.ಗಳನ್ನು ಚೆಕ್‌ ಮೂಲಕ ಎರಡು ಪ್ರತ್ಯೇಕ ನಿಶ್ಚಿತ ಠೇವಣಿ ಇಟ್ಟಿತ್ತು. ಅವಧಿ ಮುಕ್ತಾಯಗೊಂಡ ಅನಂತರ 13 ಕೋಟಿ ರೂ.ಗಳ ಒಂದು ಠೇವಣಿ ನಗದಾಯಿ ತು. ಆದರೆ 2ನೇ ಖಾತೆಯ 12 ಕೋಟಿ ರೂ. ಹಿಂದಿರುಗಿಸಲಾಗಿಲ್ಲ. ಇದು ಎಲ್ಲಿ ಹೋಯಿತು, ಹೇಗೆ ಅವ್ಯವಹಾರ ನಡೆಯಿತು ಎಂಬುದು ಈಗಲೂ ನಿಗೂಢ.

ಪ್ರಕರಣ 2
ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅವೆನ್ಯೂ ರಸ್ತೆ ಶಾಖೆ ಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ 2013ರಲ್ಲಿ ಇಟ್ಟಿದ್ದ 10 ಕೋಟಿ ರೂ. ನಿಶ್ಚಿತ ಠೇವಣಿ ಅವಧಿ ಮುಕ್ತಾಯ ಗೊಳ್ಳುವುದಕ್ಕೆ ಮುನ್ನವೇ ನಕಲಿ ದಾಖಲೆ ಆಧಾರದ ಮೇಲೆ ಖಾಸಗಿ ಕಂಪೆನಿಯ ಸಾಲಕ್ಕೆ ಹೊಂದಾಣಿಕೆ ಮಾಡಲಾಗಿದೆ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next