ಕೋವಿಡ್ ಹಾವಳಿ ಉದ್ಯೋಗ ಮಾರುಕಟ್ಟೆಯ ಮೇಲೆ ಮಾಡಿರುವ ಪ್ರಹಾರದ ತೀವ್ರತೆ ಅಷ್ಟಿಷ್ಟಲ್ಲ. ನೋಡನೋಡುತ್ತಿದ್ದಂತೆಯೇ ಕೆಲವೇ ತಿಂಗಳ ಅಂತರದಲ್ಲಿ ದೇಶದಲ್ಲಿನ ಸಾವಿರಾರು ಕಂಪೆನಿಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿ ಉದ್ಯೋಗ ಕಡಿತಕ್ಕೆ ಮುಂದಾದವು, ಈಗಷ್ಟೇ ನೆಲೆಕಂಡುಕೊಳ್ಳುತ್ತಿದ್ದ ಅನೇಕ ಸ್ಟಾರ್ಟ್‌ಅಪ್‌ಗಳು ಬಾಗಿಲುಹಾಕಿದವು. ಬೆರಳೆಣಿಕೆಯ ಬೃಹತ್ ಕಂಪೆನಿಗಳನ್ನು ಬಿಟ್ಟರೆ, ಬಹುತೇಕ ಕಡೆ ಹೊಸ ಉದ್ಯೋಗಗಳ ನೇಮಕಾತಿಗಳಾಗುತ್ತಿಲ್ಲ. ಈ ಅನಿರೀಕ್ಷಿತ ಬಿಕ್ಕಟ್ಟು ನೌಕರಸ್ಥರಿಗಷ್ಟೇ ಅಲ್ಲದೇ, ಓದು ಮುಗಿಸಿ ಉತ್ತಮ ನೌಕರಿ ಪಡೆಯಬೇಕೆಂದು ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳಿಗೂ ಬಹುದೊಡ್ಡ ಆತಂಕ ಎದುರಿಟ್ಟಿದೆ. ಬಹುಶಃ ಉದ್ಯೋಗದ ವಿಚಾರದಲ್ಲಿ ಈ ಪ್ರಮಾಣದ ಬೇಗುದಿ ಹಿಂದೆಂದೂ ಸೃಷ್ಟಿಯಾಗಿರಲಿಲ್ಲ ಎನಿಸುತ್ತದೆ.
ನೇಮಕಾತಿ ಪ್ರಕ್ರಿಯೆಗಳಿಗೆ ಕೋವಿಡ್ ಪೂರ್ವದಲ್ಲಿದ್ದಂಥ ವೇಗ ಬರುವುದಕ್ಕೆ ಇನ್ನೂ ಸಮಯ ಹಿಡಿಯಲಿದೆ ಎನ್ನುವುದು ಸತ್ಯ. ಆದರೂ ಸುದೈವವಶಾತ್, ಲಾಕ್‌ಡೌನ್ ತೆರವಿನ ನಂತರ ನಿಧಾನಕ್ಕಾಗಿಯಾದರೂ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳಲಾರಂಭಿಸಿದೆ. ಹಲವು ಕಂಪನಿಗಳು ಮತ್ತೆ ನೇಮಕಾತಿಯ ದ್ವಾರಗಳನ್ನು ತೆರೆಯಲು ಮುಂದಾಗುತ್ತಿವೆ. ಆದರೆ, ಎಲ್ಲಿ ಕೆಲಸ ಲಭ್ಯವಿದೆ ಎಂಬ ಮಾಹಿತಿ ಅರ್ಹರನ್ನು ಸಕಾಲದಲ್ಲಿ ತಲುಪುವುದು, ಮಾರ್ಗದರ್ಶನ ದೊರೆಯುವುದೂ ಬಹಳ ಮುಖ್ಯ.
ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಪಾಲಿಟೆಕ್ನಿಕ್ ವ್ಯಾಸಂಗ ಮಾಡಿ, ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಹಾಗೂ ಉದ್ಯೋಗಾವಕಾಶದ ಮಾಹಿತಿ ಕಲ್ಪಿಸುವುದಕ್ಕಾಗಿಯೇ ಉದ್ಯೋಗ ಮಾಹಿತಿ ವಿನಿಮಯ ಯೋಜನೆ ಸಿದ್ಧಪಡಿಸಿದೆ. ಇಂಥ ಕ್ಲಿಷ್ಟ ಸಮಯದಲ್ಲಿ ಸರಕಾರದ ಈ ನಡೆ ಅತ್ಯಂತ ಶ್ಲಾಘನೀಯವಾದದ್ದು. ಎಲ್ಲಾ ರಾಜ್ಯಗಳಿಗೂ ಮಾದರಿಯಾಗುವಂಥದ್ದು. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು 2017ರ ಅನಂತರ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಮತ್ತು ಉದ್ಯೋಗದ ಮಾಹಿತಿ ನೀಡಲು ವಿದ್ಯಾರ್ಥಿ ಮಾರ್ಗದರ್ಶಕರನ್ನು ನೇಮಕ ಮಾಡಲು ಸರಕಾರ ಮುಂದಾಗಿದೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿ ರಚನೆಯಾಗಿರುವ ಕಾರ್ಯಪಡೆಯು ಕಾರ್ಪೋರೇಟ್ ಸಂಸ್ಥೆಗಳಲ್ಲಿನ ವಿವಿಧ ಉದ್ಯೋಗಾವಕಾಶಗಳನ್ನು ಪಚ್ಚೆಹಚ್ಚಿ ವಿದ್ಯಾರ್ಥಿಗಳಿಗೆ ತಲಿಪಿಸುವಂಥ ಮಹತ್ವದ ಹೆಜ್ಜೆಯನ್ನೂ ಈ ಯೋಜನೆ ಒಳಗೊಂಡಿದೆ. ಈ ಯೋಜನೆಯಲ್ಲಿನ ಬಹುಮುಖ್ಯ ಅಂಶವೆಂದರೆ, ತೇರ್ಗಡೆಯಾಗಿ ಮೂರ್ನಾಲ್ಕು ವರ್ಷ ಕಳೆದರೂ ಕಾಲೇಜಿನಿಂದಲೇ ಉದ್ಯೋಗಾವಕಾಶದ ಮಾಹಿತಿ ಅಭ್ಯರ್ಥಿಗಳಿಗೆ ತಲುಪಲಿರುವುದು.
ಮುಂದಿನ ದಿನಗಳಲ್ಲಿ ಈ ಯೋಜನೆಯ ವ್ಯಾಪ್ತಿಯನ್ನು ಪಾಲಿಟೆಕ್ನಿಕ್ ಕಾಲೇಜ್‌ಗಳನ್ನೂ ದಾಟಿಸಿ ಅನ್ಯ ಕೋರ್ಸುಗಳಿಗೂ ವಿಸ್ತರಿಸಬೇಕಾದ ಅಗತ್ಯವಿದೆ. ಏಕೆಂದರೆ, ಕೋವಿಡ್‌ನ ಪರಿಣಾಮ ಕೇವಲ ತಂತ್ರಜ್ಞಾನ ವಲಯಕ್ಕಷ್ಟೇ ಪೆಟ್ಟು ಕೊಟ್ಟಿಲ್ಲ, ಎಲ್ಲಾ ವಲಯದ ಉದ್ಯೋಗಗಳ ಮೇಲೂ, ವಿದ್ಯಾರ್ಥಿ ವೃಂದದ ಮೇಲೂ ಅದು ಪರಿಣಾಮ ಬೀರಿದೆ. ಈ ಕಾರಣಕ್ಕಾಗಿಯೇ, ಕಾರ್ಪೋರೇಟ್-ಸರಕಾರಿ ಸಹಭಾಗಿತ್ವ ಮತ್ತಷ್ಟು ಹೆಚ್ಚಾಗುವಂತಾಗಲಿ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ, ಕಾರ್ಪೋರೇಟ್ ಕ್ಷೇತ್ರದೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಿ, ತಮ್ಮ ವಿದ್ಯಾರ್ಥಿಗಳಿಗೆ ಅಥವಾ ತೇರ್ಗಡೆಯಾದರೂ ಉದ್ಯೋಗ ಹುಡುಕುವಲ್ಲಿ ತೊಂದರೆ ಅನುಭವಿಸುತ್ತಿರುವ ಮಾಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂಥ ನಡೆಗೆ ಮುಂದಾಗಲಿ. ಉದ್ಯೋಗ ಮಾಹಿತಿ ವಿನಿಮಯ ಯೋಜನೆ, ಶಿಕ್ಷಣದ ಎಲ್ಲ ಕ್ಷೇತ್ರಕ್ಕೂ ವಿಸ್ತರಣೆಯಾಗುವಂತಾಗಲಿ.