Advertisement
ಗೃಹ ನೀರಿನ ದರ ಪರಿಷ್ಕರಣೆಯ ಕುರಿತು ಮೇ 31ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ ದರಗಳನ್ನು ವಿಧಿಸಲು ಷರತ್ತುಗಳನ್ವಯ ಸರಕಾರ ಅನುಮೋದನೆ ನೀಡಿದೆ. ಇದರಂತೆ ಪರಿಷ್ಕೃತ ನೀರಿನ ದರವು ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಅನ್ವಯವಾಗುತ್ತದೆ. ಈ ಪರಿಷ್ಕೃತ ನೀರಿನ ದರವು ಆ. 1ರಿಂದ 1 ವರ್ಷದ ಅವಧಿಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ. 1 ವರ್ಷದ ಅನಂತರ ಮಂಗಳೂರು ಪಾಲಿಕೆಯು ದರ ಪರಿಷ್ಕರಣೆ ಕುರಿತು ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
Related Articles
Advertisement
ದರ ಪರಿಷ್ಕರಣೆ ಸ್ವರೂಪ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆ ಕುಡಿಯುವ ನೀರಿನ ಪ್ರಮಾಣವನ್ನು ಗರಿಷ್ಠ 20 ಕಿ.ಲೀ.ಗೆ ಏರಿಸಿ, ದರವನ್ನು 5 ರೂ.ಗೆ ಇಳಿಕೆ ಮಾಡಲಾಗಿದೆ. 20 ಕಿ.ಲೀ.ನಿಂದ 25 ಕಿ.ಲೀ.ವರೆಗೆ ಕಿ.ಲೀ. ಗೆ 11 ರೂ., 25 ಕಿ.ಲೀ.ನಿಂದ ಅಧಿಕ ಬಳಕೆ ಮಾಡಿದರೆ 1 ಕಿ.ಲೀಗೆ 14 ರೂ.ಗಳಂತೆ ದರ ನಿಗದಿಯಾಗಲಿದೆ.
ಹೊಸದಾಗಿ ನಿಗದಿಪಡಿಸುವ ದರದಂತೆ 20 ಸಾವಿರ ಲೀ. ನೀರು ಬಳಕೆ ಮಾಡಿದರೆ ಈಗ 174 ರೂ. ಶುಲ್ಕವಿದ್ದರೆ, ಮುಂದೆ 100 ರೂ. ಆಗಲಿದೆ. ಪ್ರತೀ 70 ಸಾವಿರ ಲೀಟರಿಗೆ ಈಗ 814 ರೂ. ಇದ್ದರೆ ಮುಂದೆ 785 ರೂ. ಆಗಲಿದೆ. ಪ್ರತೀ 100 ಸಾವಿರ ಲೀ.ಗೆ ಈಗ 1,204 ರೂ. ಇದ್ದರೆ ಅದು 1,205 ರೂ. ಹಾಗೂ ಪ್ರತೀ 150 ಸಾವಿರ ಲೀ.ಗೆ 1,854 ರೂ. ಇರುವುದು 1,905 ರೂ. ಆಗಲಿದೆ.
ಕೊಟ್ಟ ಭರವಸೆಯಂತೆ ಕಾರ್ಯ: ಮಂಗಳೂರಿನ ಕುಡಿಯುವ ನೀರಿನ ದರವನ್ನು ಪರಿಷ್ಕರಿಸುವ ಬಗ್ಗೆ ಈ ಹಿಂದೆ ಜನರಿಗೆ ಆಶ್ವಾಸನೆ ನೀಡಲಾಗಿತ್ತು. ಆ ಮಾತಿನಂತೆ ಇದೀಗ ಕುಡಿಯುವ ನೀರಿನ ದರವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಇದರಿಂದ ನಗರದ ಸಾವಿರಾರು ಬಡ ಕುಟುಂಬಗಳಿಗೆ, ಕಡಿಮೆ ನೀರಿನ ಬಳಕೆ ಮಾಡುವ ಸಾವಿರಾರು ಮಂದಿಗೆ ಉಪಯೋಗವಾಗಲಿದೆ. ಆ. 1ರಿಂದ ಹೊಸ ನೀರಿನ ದರ ಜಾರಿಯಾಗಲಿದೆ. ಬಡವರ ಪರವಾಗಿ ಸರಕಾರ, ಮಂಗಳೂರು ಪಾಲಿಕೆ ನಿರಂತರವಾಗಿ ಕಾರ್ಯಯೋಜನೆಗಳನ್ನು ನಡೆಸಲಿದೆ. – ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ
ಮಿತ ನೀರಿನ ಬಳಕೆದಾರರಿಗೆ ಲಾಭ: ಮಂಗಳೂರು ಪಾಲಿಕೆಯ ಬಹು ಅಗತ್ಯದ ಪ್ರಸ್ತಾವನೆಗೆ ಸರಕಾರ ಇದೀಗ ಅನುಮೋದನೆ ನೀಡಿದೆ. ಕುಡಿಯುವ ನೀರಿನ ದರ ಕಡಿಮೆಯ ಬಗ್ಗೆ ಆದೇಶವಾಗಿದೆ. 20 ಸಾವಿರ ಲೀ.ವರೆಗೆ ಮಿತವಾಗಿ ನೀರು ಬಳಕೆ ಮಾಡುವವರಿಗೆ 174 ರೂ. ಬರುತ್ತಿದ್ದರೆ, ಹೊಸ ಪರಿಷ್ಕರಣೆಯ ಪ್ರಕಾರ ತಿಂಗಳಿಗೆ 100 ರೂ. ಬರಲಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್ ಪಾಲಿಕೆ