Advertisement
ಇದರಿಂದಾಗಿ, ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಕಾಕ್ಷಿಂಗಳಿಗೆ “ಅಧಿಕಾರ ಭಾಗ್ಯ’ ಸಿಗುತ್ತಿಲ್ಲ. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದೇ ಇರುವುದರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಭಿವೃದ್ದಿ ಕಾಮಗಾರಿಗಳಿಗೆ “ಗ್ರಹಣ’ ಹಿಡಿದಂತಾಗಿದೆ.
Related Articles
Advertisement
ರಾಜ್ಯದ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳು ಸೇರಿ 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31ರಂದು ಮತದಾನ ನಡೆದು, ಸೆ.3ರಂದು ಫಲಿತಾಂಶ ಹೊರಬಿದ್ದಿತ್ತು. ಈಗ ತಿಂಗಳು ಕಳೆದಿದ್ದರೂ, ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆದಿಲ್ಲ.
ಪ್ರತಿಕ್ರಿಯೆಗೆ ನಕಾರ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇರುವುದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡಲು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಂದು ಸಿಗುತ್ತಾ ಮುಕ್ತಿ?ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಸೆ.6ರಂದು ಹೊರಡಿಸಿದ್ದ ಪರಿಷ್ಕೃತ ಅಧಿಸೂಚನೆ ವಾಪಸ್ ಪಡೆದು, ಈ ಹಿಂದೆ ಸೆ.3ರಂದು ಹೊರಡಿಸಿದ್ದ ಮೀಸಲು ಪಟ್ಟಿಯನ್ನೇ ಮುಂದುವರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದು, ಅದರಂತೆ ಸರ್ಕಾರದ ನಿಲುವು ಏನೆಂದು ತಿಳಿಸುತ್ತೇನೆ ಎಂದು ಹೈಕೋರ್ಟ್‌ಗೆ ಅಡ್ವೋಕೇಟ್ ಜನರಲ್ ಹೇಳಿದ್ದರು. ಅದರಂತೆ, ಅ.9 (ಮಂಗಳವಾರ) ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತನ್ನ ನಿಲುವು ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಈ ಮೂಲಕ ನೆನೆಗುದಿಗೆ ಬಿದ್ದಿರುವ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಮುಕ್ತಿ ಸಿಗುತ್ತಾ ಅನ್ನೋದು ಕಾದು ನೋಡಬೇಕಿದೆ. ಅಧಿಕಾರ ಚುಕ್ಕಾಣಿಯ ಲೆಕ್ಕಚಾರ
ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ 27, ಕಾಂಗ್ರೆಸ್ 31, ಜೆಡಿಎಸ್ 12 ಕಡೆ ನೇರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, 30 ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಪರಿಸ್ಥಿತಿಯಿದೆ. ಬೆಳಗಾವಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳು ಪಕ್ಷೇತರರ ಪಾಲಾಗಿವೆ. ಈ ಆಧಾರದಲ್ಲಿ 42 ಕಡೆ ಮೈತ್ರಿ ಸರ್ಕಾರ ಅಧಿಕಾರ ದಕ್ಕಲಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ 30 ಸ್ಥಳೀಯ ಸಂಸ್ಥೆಗಳ ಪೈಕಿ ಯಾರಿಗೆ ಎಷ್ಟು ದಕ್ಕಲಿದೆ ಎಂದು ಕಾದು ನೋಡಬೇಕಿದೆ. ಮೂರು ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಹೋಗಿದ್ದು, ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅದೇ ರೀತಿ 29 ನಗರಸಭೆಗಳ ಪೈಕಿ 9 ಕಡೆ ಬಿಜೆಪಿ, 5 ಕಡೆ ಕಾಂಗ್ರೆಸ್, 2 ಕಡೆ ಜೆಡಿಎಸ್ ನಿಚ್ಚಳ ಸಂಖ್ಯಾಬಲ ಹೊಂದಿದ್ದು, 12 ಕಡೆ ಅತಂತ್ರ ಸ್ಥಿತಿ ಇದೆ. 2 ಕಡೆ ಪಕ್ಷೇತರರು ಅಧಿಕಾರ ಹಿಡಿಯಲಿದ್ದಾರೆ. 53 ಪುರಸಭೆಗಳ ಪೈಕಿ 10ರಲ್ಲಿ ಬಿಜೆಪಿ, 19ರಲ್ಲಿ ಕಾಂಗ್ರೆಸ್, 8ರಲ್ಲಿ ಜೆಡಿಎಸ್ ನೇರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. 14 ಕಡೆ ಅತಂತ್ರ ಸ್ಥಿತಿ ಇದ್ದು, 2 ಕಡೆ ಪಕ್ಷೇತರರು ಆಡಳಿತ ನಡೆಸಲಿದ್ದಾರೆ. 20 ಪಟ್ಟಣ ಪಂಚಾಯಿತಿಗಳಲ್ಲಿ ತಲಾ 7ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಾಗಿದ್ದರೆ, 2 ಜೆಡಿಎಸ್ ಪಾಲಾಗಿವೆ. 3 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, 1 ಕಡೆ ಪಕ್ಷೇತರದ್ದೆ ಆಡಳಿತ. ಮೀಸಲು ಪಟ್ಟಿ ಅಂತಿಮಗೊಂಡ ಬಳಿಕ ಈ ಲೆಕ್ಕಚಾರದಲ್ಲಿ ಒಂದಿಷ್ಟು ವ್ಯತ್ಯಾಸಗಳು ಆಗುವುದನ್ನು ಅಲ್ಲಗಳೆಯಲಾಗದು. ಆಡಳಿತಾಧಿಕಾರಿಗಳ “ದರ್ಬಾರು’
ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲು ಪಟ್ಟಿ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳಬೇಕಾಗಿರುವುದರಿಂದ ಎಲ್ಲ 105 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಸದ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳದ್ದೇ “ದರ್ಬಾರು’ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. “ಎರಡನೇ ಅಧಿಸೂಚನೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಿದ್ದರೂ, ರಾಜ್ಯ ಸರ್ಕಾರ ಸೆ.6ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಿದೆ. ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶಪೂರ್ವಕವಾಗಿದೆ ಅನ್ನುವುದು ನಮ್ಮ ಆರೋಪ. ಆದ್ದರಿಂದ ಎರಡನೇ ಅಧಿಸೂಚನೆ ರದ್ದುಪಡಿಸಿ, ಮೊದಲ ಅಧಿಸೂಚನೆಯಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ. ಅದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ನ್ಯಾಯ ಸಿಗುವ ಭರವಸೆ ನಮಗಿದೆ’.
– ಎಂ.ಕೆ. ವಿಜಯಕುಮಾರ್, ಅರ್ಜಿದಾರರ ಪರ ವಕೀಲರು. – ರಫೀಕ್ ಅಹ್ಮದ್