Advertisement

ಸರಕಾರಿ ಶಾಲೆಗಳ ಚಾಕ್‌ಪೀಸ್‌ಗೂ ತಟ್ಟಿದ ಅನುದಾನ ಬಿಸಿ!

11:47 PM Jan 17, 2023 | Team Udayavani |

ಬೆಳ್ತಂಗಡಿ: ಸರಕಾರದ ನೇರ ನಿರ್ಲಕ್ಷ್ಯ ಹಾಗೂ ಖಾಸಗೀಕರಣದ ಮೇಲಾಟದಿಂದ ಕೆಲವೇ ವರ್ಷಗಳಲ್ಲಿ ಸರಕಾರಿ ಶಾಲೆಗಳು ಸಂಪೂರ್ಣ ನಶಿಸುವ ಭೀತಿ ಎದುರಾಗಿದೆ.

Advertisement

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಶಾಲೆಗಳ ನಿರ್ವಹಣೆಗೆ ಅನುದಾನ ಸಾಲುತ್ತಿಲ್ಲ. ಕಟ್ಟಡದ ಅವ್ಯವಸ್ಥೆ, ಕಲಿಕೋಪಕರಣಗಳ ಕೊರತೆ ಮೇಲ್ನೋಟಕ್ಕೆ ಕಂಡರೆ ಇದೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳೆರಡರ ಸೀಮೆಸುಣ್ಣ(ಚಾಕ್‌ಪೀಸ್‌)ಕ್ಕೂ ಅನುದಾನ ಸಿಗದೆ ಶಿಕ್ಷಕರೇ ಬೇಡುವ ಪರಿಸ್ಥಿತಿ ಬಂದಿದೆ. ಆ ಮಟ್ಟಿಗೆ ಸರಕಾರವು ತನ್ನ ಶಾಲೆಗಳನ್ನು ಬಡವಾಗಿಸಿದೆ.

ಸರಕಾರಿ ಶಾಲೆಗಳಿಗೆ ವಿದ್ಯುತ್‌ ಬಿಲ್‌, ಸೀಮೆಸುಣ್ಣ, ಡಸ್ಟರ್‌, ಕಚೇರಿ ದಾಖಲೆ ಪುಸ್ತಕ, ಹಾಜರಾತಿ ಪುಸ್ತಕ, ಕಟ್ಟಡದ ಸಣ್ಣಪುಟ್ಟ ದುರಸ್ತಿ, ಕ್ರೀಡಾ ಸಾಮಗ್ರಿ, ದಿನಪತ್ರಿಕೆ, ವಾರಪತ್ರಿಕೆ, ಸ್ವತ್ಛತೆ ವೆಚ್ಚ, ಶೌಚಾಲಯ ಮತ್ತು ಕುಡಿವ ನೀರಿನ ನಿರ್ವಹಣೆ ಸಹಿತ ಇತರ ಸಲಕರಣೆ ಖರೀದಿಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಅನುದಾನ ನೀಡಲಾಗುತ್ತಿತ್ತು. ಆದರೆ 2022ರ ಮೇಯಿಂದ ಕೇವಲ ಶೌಚಾಲಯ ಮತ್ತು ಕುಡಿವ ನೀರಿನ ನಿರ್ವಹಣೆಗಾಗಿ 4,000 ರೂ. ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಶಾಲೆಯ ನಿರ್ವಹಣೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ.

ಎಸ್‌ಡಿಎಂಸಿಯಿಂದ ಸಂಗ್ರಹಕ್ಕೆ ವಿರೋಧ
ಹಿಂದೆ ಇದೇ ಸಮಸ್ಯೆಯಾದಾಗ ಎಸ್‌ಡಿಎಂಸಿಯಿಂದ ಹಣ ಸಂಗ್ರಹಿಸುವಂತೆ ಸರಕಾರ ಸೂಚಿಸಿದ್ದು, ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇನ್ನೂ ಎಚ್ಚೆತ್ತುಕೊಳ್ಳದ ಸರಕಾರ ಪ್ರಸಕ್ತ ಮಕ್ಕಳ ಶೌಚಾಲಯ ಸ್ವತ್ಛತೆಗೆ ಫಿನಾಯಿಲ್‌ ಬಳಕೆ ಮಾಡದ ಸ್ಥಿತಿ ಬಂದೊದಗಿದೆ.

Advertisement

ಕೊರೊನಾದ ಲಾಭ ಪಡೆಯದ ಸರಕಾರ
ಕೊರೊನಾ ಕಾಲಘಟ್ಟದಲ್ಲಿ ಬಹುತೇಕ ಪೋಷಕರು ಶುಲ್ಕ ಹೊರೆ ಸಹಿತ ಇತ್ಯಾದಿ ಕಾರಣದಿಂದ ಸರಕಾರಿ ಶಾಲೆಯತ್ತ ಮುಖ ಮಾಡಿದ್ದರು. ಆದರೆ ಸರಕಾರ ಇಂತಹ ಸಮಯವನ್ನು ಧನಾತ್ಮಕವಾಗಿ ಪರಿವರ್ತಿಸದೆ ನಿರ್ಲಕ್ಷ್ಯ ತೋರಿದೆ. ಮತ್ತೂಂದೆಡೆ ರಾಜ್ಯದ ಪ್ರಾಥಮಿಕ ಶಾಲೆಗಳು ಪ್ರಸಕ್ತ 60 ಸಾವಿದಷ್ಟು ಪ್ರಾಥಮಿಕ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ.

ಕಳೆದ ಜುಲೈಯಲ್ಲಿ ಒಂದನೇ ಕಂತು ಬಿಡುಗಡೆಯಾಗಿತ್ತು. ಬಳಿಕ ಆಗಿಲ್ಲ. ಬಿಸಿಯೂಟ ಜಂಟಿ ಖಾತೆಯಲ್ಲಿ ಕೆಲವು ಸರಕಾರ ಮಟ್ಟದ ತಾಂತ್ರಿಕ ಸಮಸ್ಯೆಯಿಂದ ಜಿಎಸ್‌ಟಿ ಬಿಲ್‌ ನೀಡದೆ ಅನುದಾನಗಳು ಬಾಕಿಯಾಗಿವೆ. ಈ ಕುರಿತು ಸಚಿವರಲ್ಲಿ ಮಾತುಕತೆ ನಡೆಸಲಾಗಿದೆ.
– ಶಂಭುಲಿಂಗನಗೌಡ ಪಾಟೀಲ, ಅಧ್ಯಕ್ಷರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ನಿರ್ವಹಣೆಗೆ ಪ್ರತ್ಯೇಕ ಮೊತ್ತ ನಿಗದಿ ಪಡಿಸಿ ಇನ್ನುಳಿದ 15 ದಿನದೊಳಗೆ ಅನುದಾನ ಬಿಡುಗಡೆಮಾಡಲಾಗುತ್ತದೆ.
– ಡಾ| ವಿಶಾಲ್‌ ಆರ್‌., ಆಯುಕ್ತರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next