Advertisement

ಸರಕಾರಿ ಜಾಗ ಗುಳುಂ: 2,467 ಎಕರೆ ತೆರವಿಗೆ ಜಿಲ್ಲಾಡಳಿತ ಸಿದ್ಧತೆ

11:27 PM Mar 22, 2021 | Team Udayavani |

ಮಹಾನಗರ: ಸರಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ದ.ಕ. ಜಿಲ್ಲಾಡಳಿತವು ಅಂತಹ ಒಟ್ಟು 782 ಪ್ರಕರಣಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿದೆ. ಈ ಪೈಕಿ 431 ಪ್ರಕರಣಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಬಾಕಿ ಉಳಿದ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Advertisement

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 782 ಪ್ರಕರಣದಿಂದ ಒಟ್ಟು 2,467.37 ಎಕರೆ ಜಮೀನು ಒತ್ತುವರಿಯಾಗಿತ್ತು. ಇದರಲ್ಲಿ 431 ಪ್ರಕರಣದ ಪೈಕಿ ಒಟ್ಟು 1415.82 ಎಕರೆ ತೆರವುಗೊಳಿಸಲಾಗಿದೆ. 351 ಪ್ರಕರಣಗಳು ಬಾಕಿ ಇರುವ ಕಾರಣದಿಂದ 1,051.55 ಎಕರೆ ಜಮೀನು ತೆರವು ಮಾಡಲು ಬಾಕಿಯಿದೆ.

ಒಟ್ಟು ಗುರುತಿಸಿರುವ ಒತ್ತುವರಿ ಪ್ರಕರಣದ ಪೈಕಿ ಮಂಗಳೂರು ತಾಲೂಕಿನ 163 ಪ್ರಕರಣದಲ್ಲಿ 521.89 ಎಕರೆ (ತೆರವು ಮಾಡಿದ್ದು 148 ಪ್ರಕರಣ 262 ಎಕರೆ), ಬಂಟ್ವಾಳ 87 ಪ್ರಕರಣದಲ್ಲಿ 139.21 ಎಕರೆ (ತೆರವು 29 ಪ್ರಕರಣ 42 ಎಕರೆ), ಮೂಡುಬಿದಿರೆ 18 ಪ್ರಕರಣದಲ್ಲಿ 34.54 ಎಕರೆ (ತೆರವು 7 ಪ್ರಕರಣದಲ್ಲಿ 4 ಎಕರೆ), ಮೂಲ್ಕಿ 22 ಪ್ರಕರಣದಲ್ಲಿ 13.13 ಎಕರೆ (ತೆರವು 4 ಪ್ರಕರಣದಲ್ಲಿ 3 ಎಕರೆ), ಕಡಬದಲ್ಲಿ 271 ಪ್ರಕರಣದಲ್ಲಿ 1177.78 ಎಕರೆ (ತೆರವು 132 ಪ್ರಕರಣದಲ್ಲಿ 888.44 ಎಕರೆ) ಒತ್ತುವರಿ ತೆರವಿಗೆ ಗುರುತಿಸಲಾಗಿತ್ತು. ಈ ಮಧ್ಯೆ ಸುಳ್ಯದಲ್ಲಿ ಗುರುತಿಸಲಾದ ಒಟ್ಟು 110 ಪ್ರಕರಣದಲ್ಲಿ 366.47 ಎಕರೆ ಭೂಮಿ ಕೂಡ ಇನ್ನೂ ತೆರವು ಮಾಡಿಲ್ಲ.

ಪುತ್ತೂರು-ಬೆಳ್ತಂಗಡಿ ಸಂಪೂರ್ಣ ತೆರವು
ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಈಗಾಗಲೇ ಗುರುತಿಸಿರುವ ಒಟ್ಟು ಪ್ರಕರಣಗಳ ಪೈಕಿ ಎಲ್ಲವನ್ನೂ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದರಂತೆ ಪುತ್ತೂರುವಿನಲ್ಲಿ ಒಟ್ಟು 34 ಪ್ರಕರಣದಲ್ಲಿ 101.18 ಎಕರೆ ಹಾಗೂ ಬೆಳ್ತಂಗಡಿಯಲ್ಲಿ ಒಟ್ಟು 77 ಪ್ರಕರಣದಲ್ಲಿ 113.17 ಎಕರೆ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ವಸತಿ ಸಹಿತ ವಿವಿಧ ಯೋಜನೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಜಮೀನಿನ ಕೊರತೆ ಇದೆ ಎಂಬ ಕೂಗು ಕೇಳಿಬರುತ್ತಲೇ ಇದೆ. ಆದರೂ ಜಿಲ್ಲೆಯಲ್ಲಿ ಸರಕಾರಿ ಜಮೀನು ಗುಳುಂ ಮಾಡಿರುವವರ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿತ್ತು. ಹೀಗಾಗಿ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಇದೀಗ ಒತ್ತುವರಿ ತೆರವಿಗೆ ಮುಂದಾಗಿದೆ.

Advertisement

ಕಾರ್ಯಪಡೆ ರಚನೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಲು ಕಾರ್ಯಪಡೆ ರಚಿಸಲಾಗಿದೆ. ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರೀಯಾಯೋಜನೆ ಸಿದ್ಧಪಡಿಸಿಕೊಂಡಿದ್ದು ಒತ್ತುವರಿ ಆಗಿರುವ ಸರಕಾರಿ ಜಮೀನುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ.

ತೆರವುಗೊಳಿಸಲು ಕ್ರಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಜಮೀನುಗಳಲ್ಲಿ ಮಾಡಿರುವ ಅಕ್ರಮ ಒತ್ತುವರಿಯನ್ನು ತೆರವು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈವರೆಗೆ 1415.82 ಎಕರೆಯನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ ಪ್ರಕರಣವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
-ಎಂ.ಜೆ. ರೂಪಾ,ಅಪರ ಜಿಲ್ಲಾಧಿಕಾರಿ, ದ.ಕ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next