Advertisement

ನಿಂತಿಲ್ಲ ವಿದ್ಯಾರ್ಥಿಗಳ ಪದವಿ ಶಿಕ್ಷಣದ ಅಲೆದಾಟ : ಕಡಬಕ್ಕೆ ಬೇಕು ಸರಕಾರಿ ಪದವಿ ಕಾಲೇಜು

11:36 AM Mar 01, 2022 | Team Udayavani |

ಕಡಬ: ಪ್ರಸ್ತುತ ಕಡಬವು ತಾಲೂಕು ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಶೈಕ್ಷಣಿಕ ವಾಗಿ ಯಾವುದೇ ಗಮನಾರ್ಹ ಬೆಳವಣಿಗೆ ಯಾಗಿಲ್ಲ ಎನ್ನುವುದು ಮಾತ್ರ ವಿಷಾದದ ಸಂಗತಿ. ಇಲ್ಲಿನ ಸರಕಾರಿ ಶೈಕ್ಷಣಿಕ ವ್ಯವಸ್ಥೆ ಪ.ಪೂ.ಕಾಲೇಜು ಮಟ್ಟದಿಂದ ಇನ್ನೂ ಮೇಲೇರಿಲ್ಲ.

Advertisement

ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ವೃತ್ತಿಪರ ತರಬೇತಿ ಕೋರ್ಸ್‌ಗಳ ಕಾಲೇಜು ಆರಂಭವಾಗಬೇಕು ಎನ್ನುವ ಜನರ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.

ಸಿಎಂ ಭರವಸೆಯೂ ಈಡೇರಿಲ್ಲ
ಕಡಬದಲ್ಲಿ ಸ. ಪದವಿ ಕಾಲೇಜು ಆರಂಭಿಸ ಬೇಕೆನ್ನುವ ಬೇಡಿಕೆ ಯನ್ನು 5 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮುಂದೆಯೂ ಇರಿಸಲಾಗಿತ್ತು. ಅಂದು ಪಶು ವೈದ್ಯಕೀಯ ಕಾಲೇಜು ಕಟ್ಟಡದ ಶಂಕುಸ್ಥಾಪನೆಗಾಗಿ ಕೊçಲಕ್ಕೆ ಆಗಮಿಸಿದ್ದ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಆ ಭರವಸೆ ನೀಡಿ ವರ್ಷಗಳು ಹಲವು ಕಳೆದರೂ ಭರವಸೆ ಈಡೇರಿಲ್ಲ. ಬಳಿಕ ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೂ ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳ್ಳುವ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ.

ಪರಿಸರದ ವಿವಿಧ ಪ.ಪೂ.ಕಾಲೇಜು ಗಳಿಂದ ವರ್ಷಂಪ್ರತಿ ವ್ಯಾಸಂಗ ಮುಗಿಸಿ ಹೊರಬರುವ ಸುಮಾರು 1200ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕಾಗಿ ಸರಕಾರಿ ಪದವಿ ಕಾಲೇಜು ಇರುವುದು ದೂರದ ಸುಬ್ರಹ್ಮಣ್ಯ ಅಥವಾ ಉಪ್ಪಿನಂಗಡಿಯಲ್ಲಿ.

ಕಡಬ ಸ. ಪದವಿ ಕಾಲೇಜು ಹೋರಾಟ ಸಮಿತಿ ಎನ್ನುವ ಸಂಘಟನೆಯ ಮೂಲಕ ವಿಜಯಕುಮಾರ್‌ ರೈ ಕರ್ಮಾಯಿ ಅವರ ಮುಂದಾಳುತ್ವದಲ್ಲಿ ಊರ ಪ್ರಮುಖರು ಕಾಲೇಜು ಮಂಜೂ ರಾತಿಗಾಗಿ ಸರಕಾರದ ಮಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ಫಲ ದೊರೆತಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧಿ ಕಾರಿಗಳು ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಡಬದಲ್ಲಿ ಸರಕಾರಿ ಪದವಿ ಕಾಲೇಜಿನ ಅಗತ್ಯದ ಕುರಿತು ಸರಕಾರಕ್ಕೆ ವರದಿ ನೀಡಿದ್ದಾರೆ. ಕಳೆದ ವರ್ಷ ಕ್ಷೇತ್ರದ ಶಾಸಕ, ಸಚಿವ ಎಸ್‌. ಅಂಗಾರ ಅವರ ನೇತೃತ್ವದಲ್ಲಿ ಕಡಬಕ್ಕೆ ಸ. ಪ.ಕಾಲೇಜು ಮಂಜೂರುಗೊಳಿಸುವ ನಿಟ್ಟಿನಲ್ಲಿ ವಿಶೇಷ ಸಭೆ ನಡೆದಿತ್ತು.

Advertisement

ಜಮೀನು ಕಾದಿರಿಸಲಾಗಿದೆ
ಕಡಬ ಸರಕಾರಿ ಪ್ರೌಢಶಾಲೆಯ 14.5 ಎಕ್ರೆ ಜಾಗದಲ್ಲಿ 5 ಎಕ್ರೆ ಜಾಗವನ್ನು ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಜಿಲ್ಲಾಧಿಕಾರಿಯವರು ಕಾದಿರಿಸಿ, ಈ ಬಗ್ಗೆ ಸಹಾಯಕ ಕಮಿಷನರ್‌ಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ 5 ಎಕ್ರೆ ಜಮೀನನ್ನು ಗಡಿ ಗುರುತು ಮಾಡಲಾಗಿದೆ. ಪದವಿ ಕಾಲೇಜಿನೊಂದಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಕೂಡ ಆರಂಭಿಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕ್ಕಾಗಿ ವೃತ್ತಿಪರ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿಯೂ ಜನಪ್ರತಿನಿಧಿಗಳು ಪ್ರಯತ್ನಿಸುವ ಅಗತ್ಯವಿದೆ.

ಒತ್ತಡ ಹೇರಲಾಗುವುದು
ಕಳೆದ ಕೆಲವು ವರ್ಷಗಳಿಂದ ಹೊಸದಾಗಿ ಯಾವುದೇ ಸರಕಾರಿ ಪದವಿ ಕಾಲೇಜುಗಳು ಮಂಜೂರುಗೊಂಡಿಲ್ಲ. ಆದರೂ ತಾಲೂಕು ಕೇಂದ್ರ ಎನ್ನುವ ನೆಲೆಯಲ್ಲಿ ಕಡಬಕ್ಕೆ ಆದ್ಯತೆಯ ನೆಲೆಯಲ್ಲಿ ಸರಕಾರಿ ಪದವಿ ಕಾಲೇಜು ಮಂಜೂರುಗೊಳಿಸುವಂತೆ ಈ ಹಿಂದೆಯೇ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು. ಅವರು ಪೂರಕವಾಗಿ ಸ್ಪಂದಿಸಿದ್ದರು. ಆದರೆ ಬಳಿಕ ಎದುರಾದ ಕೋವಿಡ್‌ ಕಾರಣದಿಂದಾಗಿ ಅದು ಫಲಕಾರಿಯಾಗಿಲ್ಲ. ಈಗ ಮತ್ತೂಮ್ಮೆ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಒತ್ತಡ ಹೇರಲಾಗುವುದು.
-ಎಸ್‌.ಅಂಗಾರ, ಸಚಿವರು

– ನಾಗರಾಜ್ ಎನ್. ಕೆ

Advertisement

Udayavani is now on Telegram. Click here to join our channel and stay updated with the latest news.

Next