ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು, ಬೆಲ್ಲಾಳಬೊಮ್ಮಸಂದ್ರ ವೆಂಕಟಾಪುರ, ಯರ್ರನಾಗೇನಹಳ್ಳಿ, ಚೀಲಂನಹಳ್ಳಿ,ಚಿಂಚಾನಹಳ್ಳಿ, ಮಿದ್ದಿಲು, ಮಂತಾದ ಗ್ರಾಮಗಳಲ್ಲಿ ಉತ್ಪಾದಿಸುವ ಉಂಡೆಬೆಲ್ಲ ಎಂದರೆ ರಾಜ್ಯದಲ್ಲಿಯೇ ಪ್ರಖ್ಯಾತಿ.
ಧಾರ್ಮಿಕ ಕ್ಷೇತ್ರಗಳಿಗೆ ಬೆಲ್ಲ: ರಾಜ್ಯದ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಶೃಂಗೇರಿ, ಕೊಲ್ಲೂರು, ಮಂತ್ರಾಲಯ ಮುಂತಾದ ಕ್ಷೇತ್ರಗಳಿಗೆ ನೂರಾರು ವರ್ಷಗಳಿಂದ ಇಲ್ಲಿಯ ಬೆಲ್ಲವನ್ನೇ ಉಪಯೋಗಿಸುತ್ತಾರೆಂಬ ಪ್ರತೀತಿಯೂ ಇದೆ.
ಈ ಗ್ರಾಮಗಳ ಭೂಮಿಯಲ್ಲಿ ಬೆಳೆದ ಕಬ್ಬು, ಬೆಲ್ಲದ ಉತ್ಪಾದನೆ, ಆಲೆಮನೆ ಕಾರ್ಮಿಕರ ಕೈಚಳಕ, ಕೌಶಲ್ಯ, ಬೆಲ್ಲದ ಗುಣಮಟ್ಟ ಮತ್ತು ರುಚಿ ಇಂದಿಗೂ ಖ್ಯಾತಿಯನ್ನು ಉಳಿಸಿಕೊಂಡು ಬಂದಿದೆ ಎನ್ನುತ್ತಾರೆ ತಾಲೂಕು ವೆಂಕಟಾಪುರದ ಆಲೆಮನೆ ನಡೆಸುತ್ತಿರುವ ರೈತ ಆವುಲರೆಡ್ಡಿ. ಕಳೆದ 3 ದಶಕಗಳಿಂದ ಮಳೆಯಿಲ್ಲದೆ, ಕೊಳವೆ ಬಾವಿಗಳು ಬತ್ತಿದ್ದು, ನೀರಿಗೆ ತೀವ್ರ ಬರಗಾಲ ಉಂಟಾಗಿದ್ದರೂ ಇರುವ ಅಲ್ಪ ಕೊಳವೆಬಾವಿ ನೀರಿನಲ್ಲಿ ಹನಿ ನೀರಾವರಿ ಮೂಲಕ ಕಬ್ಬಿನ ಬೆಳೆ ಬೆಳೆದು ಸಾಂಪ್ರದಾಯಿಕ ಆಲೆಮನೆ ಪ್ರಾರಂಭಿಸಿ ಬೆಲ್ಲದ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ ಇಲ್ಲಿನ ರೈತರು.
ಪರಂಪರೆ ಉಳಿಯಲಿ: ನಮ್ಮ ಗ್ರಾಮ ಬೆಲ್ಲದ ಉತ್ಪಾದನೆಯಲ್ಲಿ ಪರಂಪರೆ ಉಳಿಸಿಕೊಂಡು ಹೋಗಲು ನಷ್ಟವಾಗಲೀ, ಲಾಭವಾಗಲೀ ಆಲೆಮನೆ ಮಾಡುತ್ತೇವೆ. ಹಲವಾರು ದಶಕಗಳ ಹಿಂದೆ ಕಬ್ಬು ಮತ್ತು ಬೆಲ್ಲದ ಉತ್ಪಾದನೆಯನ್ನು ರಾಜಾಬೆಳೆ ಎಂದು ಕರೆಯುತ್ತಿದ್ದರು. ಡಿ.ಪಾಳ್ಯ ಹೋಬಳಿ ಬೆಲ್ಲ ರಾಜ್ಯದಲ್ಲಿಯೇ ಪ್ರಖ್ಯಾತಿ ಹೊಂದಿರುವುದರಿಂದ ಆ ಹೆಸರನ್ನು ಉಳಿಸಬೇಕು ಎಂಬ ತುಡಿತವಿರುವುದರಿಂದ ಲಾಭನಷ್ಟದ ಲೆಕ್ಕಕ್ಕಿಂತ ಆಲೆಮನೆ ನಡೆಸುವುದು ನಮಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ಆವುಲರೆಡ್ಡಿ.
ದಲ್ಲಾಳಿಗಳ ಪಾಲು: ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡರೆ ಕೃಷಿಯಲ್ಲಿ ಎಂದಿಗೂ ನಷ್ಟವಾಗುವುದಿಲ್ಲ, ಗುಣಮಟ್ಟದ ಬೆಲ್ಲ ಉತ್ಪಾದಿಸಿದರೆ ಲಾಭ ಸಿಕ್ಕೇ ಸಿಗುತ್ತದೆ ಎಂಬ ಆಶಯ ವ್ಯಕ್ತಪಡಿಸುವ ಆವುಲರೆಡ್ಡಿ, ಮಾರುಕಟ್ಟೆಯಲ್ಲಿ ಬೆಲ್ಲಕ್ಕೆ ಉತ್ತಮ ಬೆಲೆಯಿದ್ದರೂ ನಮ್ಮ ಬೆಲ್ಲಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ. ಬದಲಿಗೆ ದಲ್ಲಾಳಿಗಳ ಪಾಲಾಗುತ್ತಿದ್ದು, ಸರ್ಕಾರ ಬೆಲ್ಲಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಬೇಕು ಎನ್ನುತ್ತಾರೆ.
ರೈತರು ಬದುಕುವುದೇ ಕಷ್ಟಕರ: 60-70ರ ದಶಕದಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆ, ಬೆಳೆಯಾಗುತ್ತಿತ್ತು. ವೆಂಕಟಾಪುರ , ನಾಮಗೊಂಡ್ಲು, ಗೌರಿಬಿದನೂರು ಬೆಲ್ಲವೆಂದೇ ಹೆಸರು ಪಡೆದಿತ್ತು. ಮಾನವನ ಅತಿಯಾದ ಆಸೆಗೆ ಕಾಡುನಾಶವಾಗಿ ಬೀಳುವ ಅಲ್ಪ ಸ್ವಲ್ಪ ಮಳೆಯ ನೀರನ್ನು ಇಂಗಲು ಅವಕಾಶ ನೀಡದೆ ನದಿ ಪಾತ್ರಗಳಲ್ಲಿನ ಮರಳನ್ನು ಲೂಟಿ ಮಾಡಿರುವುದರಿಂದ ರೈತರು ಬದುಕುವುದೇ ಕಷ್ಟಕರವಾಗಿದೆ.
ಕಬ್ಬು ಬಹುವಾರ್ಷಿಕ ಬೆಳೆಯಾಗಿರುವುದರಿಂದ ಹಾಗೂ ಹೆಚ್ಚಿನ ನೀರನ್ನು ಬಳಸಬೇಕಾಗುವುದರಿಂದ ಈ ಬೆಳೆಗೆ ಕೃಷಿ ಇಲಾಖೆಯಿಂದ ಯಾವುದೇ ಉತ್ತೇಜನ ನೀಡುತ್ತಿಲ್ಲ , ಆದರೆ ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಉತ್ತಮ ಗುಣಮಟ್ಟದ ಬೆಲ್ಲವನ್ನು ಉತ್ಪಾದಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಬೆಂಬಲ ನೀಡಲು ಮನವಿ ಮಾಡಲಾಗುವುದು.
- ಮೋಹನ್, ಸಹಾಯಕ ಕೃಷಿ ನಿರ್ದೇಶಕರು, ಗೌರಿಬಿದನೂರು ತಾಲ್ಲೂಕು
ಕೌಶಲ್ಯವಿರುವ ಹಳಬರನ್ನು ಕರೆತಂದು ಬೆಲ್ಲ ಉತ್ಪಾದನೆ ಇಂದಿನ ದಿನಗಳಲ್ಲಿ ಹೆಚ್ಚು ನೀರು ಬೇಕಿರುವ ಕಬ್ಬಿನ ಬೆಳೆಯನ್ನು ತಾಲೂಕಿನಲ್ಲಿ ಯಾರೂ ಬೆಳೆಯುತ್ತಿಲ್ಲ. ಆದರೆ ನಮ್ಮ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು, ಬೆಲ್ಲಾಳಬೊಮ್ಮಸಂದ್ರ ವೆಂಕಟಾಪುರ, ಯರನಾಗೇನಹಳ್ಳಿ, ಚೀಲಂನಹಳ್ಳಿ, ಚಿಂಚಾನಹಳ್ಳಿ, ಮಿದ್ದಿಲುಗಳಲ್ಲಿ ಇಂದಿಗೂ ಕೆಲವರು ಆಲೆಮನೆ ಸಂಪ್ರದಾಯ ಉಳಿಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಆಲೆಮನೆ ನಡೆಸುತ್ತಿರುವ ತಾಲೂಕಿನ ವೆಂಕಟಾಪುರದ ರೈತ ಆವುಲರೆಡ್ಡಿ.
ಆಲೆಮನೆಯಲ್ಲಿ ಕೆಲಸ ಮಾಡುವ ಕುಶಲತೆ ಇರುವವರು ವಿರಳವಾಗಿದ್ದರೂ ಕೌಶಲ್ಯವಿರುವ ಹಳಬರನ್ನು ಕರೆತಂದು ಅವರಿಂದ ಬೆಲ್ಲದ ಉತ್ಪಾದನೆ ಕಲೆಯನ್ನು ನಾವು ಕಲಿಯುವುದರ ಜೊತೆಗೆ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.