Advertisement

ಗೋಸ್ವರ್ಗಕ್ಕೆ ಬೆಂಬಲ ಅಗತ್ಯ: ಗೋಪಾಲ್‌

12:07 PM May 26, 2018 | Team Udayavani |

ಸಾಗರ: ಇದುವರೆಗೆ ನಾವು ಯಾರೂ ಸ್ವರ್ಗಕ್ಕೆ ಹೋಗಿಲ್ಲ, ನೋಡಿಲ್ಲ. ಆದರೆ ಪರಿಕಲ್ಪನೆಯ ಪ್ರಕಾರ ನಾವು ಬೇಕಾದುದನ್ನೆಲ್ಲ ಬಯಸಿದಾಗಲೆಲ್ಲ ಒದಗಿಸುವಂತಹ ವ್ಯವಸ್ಥೆಯನ್ನು ಸ್ವರ್ಗ ಎಂದುಕೊಳ್ಳಬೇಕು. ಉತ್ತರ ಕನ್ನಡದ ಸಿದ್ದಾಪುರದ ಸನಿಹದ ಭಾನ್ಕುಳಿ ಮಠದ ಉದ್ದೇಶಿತ ಗೋ ಸ್ವರ್ಗ ಅಕ್ಷರಶಃ ಸ್ವರ್ಗದ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ ಎಂದು ರಾಮಚಂದ್ರಾಪುರ ಮಠದ ಗುರಿಕಾರ ಗೋಪಾಲ್‌ ಕೆ.ಆರ್‌.ತಿಳಿಸಿದರು.

Advertisement

ಭಾರತೀಯ ಗೋ ಪರಿವಾರದ ಸಾಗರ ಶಾಖೆ ಶುಕ್ರವಾರ ನಗರದ ರಾಘವೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ಗೋ ಸ್ವರ್ಗ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಭಾಷಣ ಮಾಡಿದ ಅವರು, ಭಾರತೀಯವಾದ 32 ಗೋ ತಳಿಗಳ ಸಾವಿರಾರು ಗೋವುಗಳನ್ನು ಅವುಗಳ ಅಗತ್ಯ, ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಿಲ್ಲದೆ ಒಂದು ಲಕ್ಷ ಚದರಡಿಯ ಪ್ರದೇಶದಲ್ಲಿ ವಸತಿ ಒದಗಿಸುವ ಯೋಜನೆಯನ್ನು ಕಣ್ಣಾರೆ ನೋಡಿದಾಗ ಮಾತ್ರ ಅದು ಮನನವಾಗುತ್ತದೆ. ಇಂತಹ ಬೃಹತ್‌ ಯೋಜನೆ ಪರಂಪರೆಯ ಅಡಿಯಲ್ಲಿ ರಚಿತವಾಗಿದೆ. ಅದಕ್ಕೆ ವೈಜ್ಞಾನಿಕ ತಳಹದಿಯೂ ಒಳಪಟ್ಟಿದೆ ಎಂದರು. 

ಗೋ ಸ್ವರ್ಗದ ಬೆಂಬಲಕ್ಕೆ ಪ್ರತಿಯೊಬ್ಬರೂ ನಿಲ್ಲಬೇಕಾದ ಅಗತ್ಯವಿದೆ. ಗೋಪಾಲಕರಾಗಿ ಸೇವೆ ಸಲ್ಲಿಸಲು ಸಾವಿರ ಸಂಖ್ಯೆಯ ಜನ ಬೇಕಾಗಿದ್ದಾರೆ. ಸಾಕುವಲ್ಲಿ ವಿಫಲರಾಗುವ ಜನ ಗೋವುಗಳನ್ನು ಒಪ್ಪಿಸಬಹುದು. ಸಾಕುವ ಆಕಾಂಕ್ಷೆಯ ಆಸಕ್ತರು ಗೋವುಗಳನ್ನು ಪಡೆಯಬಹುದು. ಒಪ್ಪಿಸುವಲ್ಲಿ ಹೋರಿ, ದನಗಳೆಂಬ ಬೇಧವಿಲ್ಲ. ಜನರ ದೇಣಿಗೆಯ ಹೊರತಾಗಿ ಗೋಮೂತ್ರ, ಗೋಮಯಗಳಿಂದ ಔಷಧೀಯ ಮೌಲ್ಯಗಳನ್ನು ಬಳಸಿ ಧನ ಬೆಂಬಲ ಪಡೆಯುವ ಚಿಂತನೆಯಿದೆ ಎಂದರು.

ಮಠದ ಮಹಾಮಂಡಲದ ತಾಲೂಕು ಅಧ್ಯಕ್ಷ ಎಂ.ಜಿ. ರಾಮಚಂದ್ರ ಮಾತನಾಡಿ, ಸಾಮಾನ್ಯ ಜನ ಕೂಡ ಗೋ ಸ್ವರ್ಗದ ಸಾಕಾರದಲ್ಲಿ ಹೆಗಲು ಕೊಡಬಹುದು. ಸಾವಿರದ ಸುರಭಿ, ಗೋ ಮಹಾಮಂಗಲ ಆರತಿ ಮೊದಲಾದ ವಿಶಿಷ್ಟ
ಸೇವಾ ವ್ಯವಸ್ಥೆಗಳನ್ನು ಮಾಡಲಾಗಿದೆ. 27ರಂದು ನಡೆಯುವ ಗೋ ಸ್ವರ್ಗ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರಾಗಿ ದುಡಿಯುವ ಜನ ಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಅನಿವಾರ್ಯ
ಕಾರಣಗಳಿಂದ ಪಾಲ್ಗೊಳ್ಳುತ್ತಿಲ್ಲ. ಆದರೆ ನಾಗಪುರದ ಹಿರಿಯ ಸಂಘ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಕೀಲ ಪ್ರವೀಣ್‌ಕುಮಾರ್‌ ಮಾತನಾಡಿ, ಭಾನ್ಕುಳಿ ಮಠಕ್ಕೆ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ತಾಳಗುಪ್ಪ ಪ್ರಕರಣದಲ್ಲಿ ವಾಹನದಲ್ಲಿಯೇ ಗೋವೊಂದು ಸಾವನ್ನಪ್ಪಿದ್ದು
ಗಮನಿಸಿದ ಗೋ ಪ್ರೇಮಿಗಳು ಆಕ್ರೋಶಿತರಾಗಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದು ಸರಿಯಿಲ್ಲದಿರಬಹುದು. ಆದರೆ ಈ ಪ್ರಕರಣದಲ್ಲಿ ಗೋ ಭಕ್ತರಾದ ಏಳೆಂಟು ಜನರ ಮೇಲೆ ಪ್ರಕರಣ ದಾಖಲಾಗಿ ಜೈಲು ಸೇರುವ ಸಂದರ್ಭ
ಬಂದಾಗ ನಾವು ಕನಿಷ್ಟ ಜಾಮೀನು ಕೊಡಲೂ ಮುಂದಾಗದಿರುವುದು ಒಳ್ಳೆಯ ಸಂದೇಶವನ್ನು ರವಾನಿಸುವುದಿಲ್ಲ. ಭಾನ್ಕುಳಿ ಮಠದ ಗೋ ಸ್ವರ್ಗದಂತೆಯೇ ತಾಲೂಕಿನಲ್ಲಿರುವ ಪುಣ್ಯಕೋಟಿ ಕೊಟ್ಟಿಗೆ, ತಾಳಗುಪ್ಪದ ಪುರುಷೋತ್ತಮರ ಗೋಶಾಲೆಗಳ ಚಟುವಟಿಕೆಗಳನ್ನು ಕೂಡ ನಾವು ಬೆಂಬಲಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸಂವಾದದಲ್ಲಿ ತಾಪಂ ಸದಸ್ಯರಾದ ದೇವೇಂದ್ರಪ್ಪ, ರಘುಪತಿ ಭಟ್‌, ಲಕ್ಷ್ಮೀನಾರಾಯಣ ಮುಂಡಿಗೇಸರ, ರವೀಶ್‌ಕುಮಾರ್‌, ಶ್ರೀಧರ, ನಗರ ಸಂಚಾಲಕ ಗಣೇಶ್‌ಪ್ರಸಾದ್‌, ಸುದರ್ಶನ ಮತ್ತಿತರರು ಇದ್ದರು. ಗೋ ಪರಿವಾರದ ತಾಲೂಕು ಅಧ್ಯಕ್ಷ ಚೇತನರಾಜ್‌ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಟಿ.ಡಿ. ಮೇಘರಾಜ್‌, ಅ.ಪು.ನಾರಾಯಣಪ್ಪ, ಕಲ್ಪನಾ ತಲವಾಟ ಇದ್ದರು. ವ.ಶಂ. ರಾಮಚಂದ್ರಭಟ್‌ ಸ್ವಾಗತಿಸಿದರು. ಸುಬ್ರಮಣ್ಯ ನೀಚಡಿ ವಂದಿಸಿದರು. ಅಕ್ಷತಾ ಪ್ರಸನ್ನ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next