Advertisement

ಗುಜ್ಜಾಡಿ: ಕಸ ವಿಲೇವಾರಿಯೇ ಬಹುದೊಡ್ಡ ಸವಾಲು

12:30 AM Mar 02, 2019 | |

ವಿಶೇಷ ವರದಿ- ಗಂಗೊಳ್ಳಿ: ಗುಜ್ಜಾಡಿ ಗ್ರಾಮದಲ್ಲಿ ಈಗ ಕಸ ವಿಲೇವಾರಿಯೇ ಈಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಗ್ರಾಮಸ್ಥರು ಮಾತ್ರವಲ್ಲದೆ ಬೇರೆ ಕಡೆಯಿಂದಲೂ ಜನ ಇಲ್ಲಿಗೆ ಬಂದು ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗೆ ಕಸ ಎಸೆಯುತ್ತಿದ್ದಾರೆ. 

Advertisement

ಗುಜ್ಜಾಡಿ ಗ್ರಾ.ಪಂ.ನಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲೋನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್‌ ಹಾಗೂ ಬೆಣಗೇರಿ ಹೀಗೆ ಒಟ್ಟು 5 ವಾರ್ಡ್‌ಗಳಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 6,042 ಜನರಿದ್ದು, 1,200 ಮನೆಗಳು, ವಾಣಿಜ್ಯ ಮನೆಗಳೆಲ್ಲ ಸೇರಿ ಒಟ್ಟು ಸುಮಾರು 1,300 ಕ್ಕೂ ಹೆಚ್ಚು ಮನೆ- ಮಳಿಗೆಗಳಿವೆ. 

ರಸ್ತೆ ಬದಿ ಕಸ ರಾಶಿ
ಮುಳ್ಳಿಕಟ್ಟೆಯಿಂದ ನಾಯಕ ವಾಡಿಯವರೆಗೆ ತೆರಳುವ ಮುಖ್ಯ ರಸ್ತೆ ಹಾಗೂ ನಾಯಕವಾಡಿಯಿಂದ ತ್ರಾಸಿಗೆ ತೆರಳುವ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಯುದ್ದಕ್ಕೂ ಕಸದ ರಾಶಿಯೇ ಕಂಡು ಬರುತ್ತಿದೆ. ಕೇವಲ ಗುಜ್ಜಾಡಿ ಗ್ರಾಮದ ಜನರು ಮಾತ್ರವಲ್ಲದೆ ಗಂಗೊಳ್ಳಿ ಹಾಗೂ ಇನ್ನಿತರ ಕಡೆಗಳಿಂದ ವಾಹನಗಳಲ್ಲಿ ರಾತ್ರಿ ವೇಳೆ ಬಂದು ಕಸ ಎಸೆದು ಹೋಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. 

ವಿಲೇವಾರಿ ಘಟಕಕ್ಕೆ ಆಗ್ರಹ
ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅನೇಕ ಗ್ರಾ.ಪಂ.ಗಳು, ಜಿಲ್ಲಾ ಪಂಚಾಯತ್‌ ಅನುದಾನದ ನೆರವಿನಿಂದ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಿದೆ. ಕುಂದಾಪುರ ತಾಲೂಕಿನಲ್ಲಿ ವಂಡ್ಸೆ, ಸಮೀಪದ ಗಂಗೊಳ್ಳಿಯಲ್ಲಿ ಕೂಡ ಎಸ್‌ಎಲ್‌ಆರ್‌ಎಂ ಘಟಕ  ಆರಂಭಿಸಲಾಗಿದೆ. ಕಸ ವಿಲೇವಾರಿ  ಜತೆಗೆ, ಅದನ್ನು ಗೊಬ್ಬರವಾಗಿ ಪರಿವರ್ತಿಸಿದರೆ ಪಂಚಾಯತ್‌ಗೂ ಆದಾಯ ಬರುತ್ತದೆ. ಗುಜ್ಜಾಡಿಯಲ್ಲಿಯೂ ಆರಂಭಿಸಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ. 

ಜಾಗದ ಸಮಸ್ಯೆ
ಘನತ್ಯಾಜ್ಯ ವಿಲೇವಾರಿ ಘಟಕ ಬೇಕು ಎಂದು ಈಗಾಗಲೇ ಗ್ರಾ.ಪಂ.ನಿಂದ ನಿರ್ಣಯ ಮಾಡಿ ಉಡುಪಿ ಜಿಲ್ಲಾ ಪಂಚಾಯತ್‌, ಜಿಲ್ಲಾಧಿಕಾರಿ, ಕುಂದಾಪುರದ ಉಪ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ. ಅವರು ಘಟಕ ಮಂಜೂರು ಮಾಡಿದರೂ ಪಂಚಾಯತ್‌ ವ್ಯಾಪ್ತಿಯಲ್ಲಿ ಜಾಗದ ಕೊರತೆಯಿದೆ. ಘಟಕಕ್ಕೆ ಕನಿಷ್ಠ ಒಂದು ಎಕರೆ ಜಾಗ ಬೇಕಾಗಿದೆ. ಜಾಗದ ಸಮಸ್ಯೆ ಇರುವುದರಿಂದ ತೊಡಕಾಗಿದೆ.
– ತಮ್ಮಯ್ಯ ದೇವಾಡಿಗ,ಅಧ್ಯಕ್ಷರು,ಗುಜ್ಜಾಡಿ ಗ್ರಾ.ಪಂ. 

Advertisement
Advertisement

Udayavani is now on Telegram. Click here to join our channel and stay updated with the latest news.

Next