ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ “ಕಾಲಾಪತ್ಥರ್’ ಚಿತ್ರದ “ಗೋರುಕನ ಹಾಡು’ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್‌ರಾಜ್‌ಕುಮಾರ್ ಹಾಗೂ ನಟಿ ತಾರಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ಭುವನ್ ಮೂವೀಸ್ ನಡಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿರುವ “ಗೋರುಕನ’ ಹಾಡನ್ನು ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಶಿವಾನಿ ಹಾಡಿದ್ದಾರೆ.
“ಈ ಹಾಡಿನ ಮೂಲಕ ಮಂಗಳಮುಖೀಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿರುವು ದರಿಂದ ಈಗ ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಮಾಡಿದ್ದೇವೆ’ ಎನ್ನುವುದು ನಾಯಕ ವಿಕ್ಕಿ ವರುಣ್ ಮಾತು.
“2.0 ಹೊಸ ವರ್ಷನ್ ನಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಇದು. ನಾಗೇಂದ್ರ ಪ್ರಸಾದ್ ಅದ್ಭುತವಾಗಿ ಗೀತರಚನೆ ಮಾಡಿದ್ದಾರೆ. ಹದಿನಾರು ವರ್ಷದ ಶಿವಾನಿ ಅವರ ಗಾಯನ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದರು ಸಂಗೀತ ನಿರ್ದೇಶಕ ಅನೂಪ್ ಸೀಳಿನ್.
ವಿ.ನಾಗೇಂದ್ರ ಪ್ರಸಾದ್ ಕೂಡಾ ಹಾಡಿನ ಬಗ್ಗೆ ಮಾತನಾಡಿದರು. “ದೇಸಿ ಶೈಲಿಯಲ್ಲಿ ಸಂಗೀತ ಸಂಯೋಜಿಸುವುದರಲ್ಲಿ ಅನೂಪ್ ಸೀಳಿನ್ ಸಹ ಪ್ರಮುಖರು. ಗೋರುಕನ ಎಂದರೆ ಸುವ್ವಿ ಎಂಬ ಅರ್ಥ ಬರುತ್ತದೆ. ಹೆಚ್ಚಾಗಿ ಸೋಲಿಗರು ಈ ಪದವನ್ನು ಬಳಸುತ್ತಾರೆ’ ಎಂದು ವಿವರಣೆ ನೀಡಿದರು.
ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕಿ. ಗಂಗಾ ಎಂಬ ಪಾತ್ರ ನಿರ್ವಹಿಸಿರುವುದಾಗಿ ಹೇಳಿದರು.