ಹುಮನಾಬಾದ: ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ರಾಜ್ಯದ ವಿವಿಧ ಜಿಲ್ಲೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರು ರಥೋತ್ಸವದ ವೈಭವ ಕಣ್ತುಂಬಿಕೊಂಡರು. ರಥೋತ್ಸವದ ನಿಮಿತ್ತ ಶುಕ್ರವಾರ ರಾತ್ರಿ ದೇವಸ್ಥಾನದಿಂದ ಹೊರಟ ಉತ್ಸವ ಮೂರ್ತಿಯ ಮೆರವಣಿಗೆ ಒಂದು ಕಿ.ಮೀ. ಕ್ರಮಿಸಲು 18 ಗಂಟೆಗಳ ತೆಗೆದುಕೊಂಡಿತ್ತು. ನಂತರ ತೇರು ಮೈದಾನಕ್ಕೆ ಆಗಮಿಸಿದ ಮೆರವಣಿಗೆ ಉದ್ದಕ್ಕೂ ಲಕ್ಷಾಂತರ ಭಕ್ತರು ದೇವರಿಗೆ ಶಾಲು ಹೊದಿಸಿ ನಮಿಸಿದರು. ಮಧ್ಯಾಹ್ನ 2:40 ಗಂಟೆಗೆ ಪ್ರಾರಂಭಗೊಂಡ ರಥೋತ್ಸವ ಒಂದುಗಂಟೆ ಕಾಲ ನಡೆಯಿತು.
ಪಟ್ಟಣದ ಹಿರೇಮಠದ ಶ್ರೀ ರೇಣುಕ ಗಂಗಾಧರ ಮಹಾ ಸ್ವಾಮಿಗಳನ್ನು ತೇರಿನಲ್ಲಿ ಕೂರಿಸಿ, ಶಾಸಕ ರಾಜಶೇಖರ ಪಾಟೀಲ, ಮಾಜಿ ಜಿಪಂ ಸದಸ್ಯ ವೀರಣ್ಣಾ ಪಾಟೀಲ, ತಹಶೀಲ್ದಾರ ದೇವೆಂದ್ರಪ್ಪ ಪಾಣಿ, ಡಿಸಿಸಿ ಬ್ಯಾಂಕ್ ನಿದೇರ್ಶಕ ಭೀಮರಾವ್ ಪಾಟೀಲ ಸೇರಿದಂತೆ ಇತರ ಗಣ್ಯರು ರಥತೋತ್ಸಕ್ಕೆ ಚಾಲನೆ ನೀಡಿದರು. ರಥೋತ್ಸವ ನಂತರ ಸತತವಾಗಿ 8 ಗಂಟೆಗಳ ಕಾಲ ಮೆರವಣಿಗೆ ಸಂಚರಿಸಿ ದೇವಸ್ಥಾನಕ್ಕೆ ತಲುಪಿತು. ಸತತ 26 ಗಂಟೆಗಳ ಕಾಲ ನಿರಂತರ ನಡೆದ ಮೆರವಣಿಗೆ ಹೊಸ ಇತಿಹಾಸ ಸೃಷ್ಟಿಸಿತು.
ಮೆರವಣಿಗೆಯಲ್ಲಿ ಅನೇಕ ಕಲಾ ತಂಡಗಳು ನೋಡುಗರ ಗಮನ ಸೆಳೆದವು. ದೊಣ್ಣೆವರೆಸೆ, ಜಾನಪಥಕ್, ಜಗಲಿಗೆ ಮೇಳ, ವೀರಗಾಸೆ ಆಕರ್ಷಸಿದವು. ತಮಟೆ, ನಗಾರಿ, ಮ್ಯೂಸಿಕ್ ಡ್ರಂ ಸಂಗೀತ, ಪಟಾಕಿ ಸದ್ದಿನ ಅಬ್ಬರ ಮುಗಿಲು ಮುಟ್ಟಿತ್ತು. ಗಾರುಡಿ ಗೊಂಬೆಗಳ
ಕುಣಿತ ಕಂಡು ಮಕ್ಕಳು ಸಂಭ್ರಮಿಸಿದರು. 20ಕ್ಕೂ ಅಧಿಕ ತಂಡಗಳು ಜನಪದ ಸೊಬಗು ಪ್ರದರ್ಶಿಸಿದವು.
ಶುಕ್ರವಾರ ರಾತ್ರಿ ದೇವಸ್ಥಾನದ ಸಮೀಪದಲ್ಲಿ ವಿವಿಧ ಬಗ್ಗೆಯ ಪಟಾಕಿಗಳನ್ನು ಬಾಣಗಳಕ್ಕೆ ಹಾರಿಸಿದ್ದನ್ನು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತೇರು ಮೈದಾನದಲ್ಲಿ ಕೂಡ ರಾತ್ರಿ ನಿದ್ದೆಗೆ ಜಾರಿದ ಭಕ್ತಾದಿಗಳನ್ನು ಪಟ್ಟಾಕಿಯ ಸದ್ದು ಎಚ್ಚರಗೊಳಿಸಿತು. ಕೊರೆಯುವ ಚಳಿಯಲ್ಲೂ ಸಾವಿರಾರು ಜನರು ಪಟಾಕಿ ಸುಡುವ ಕಾರ್ಯಕ್ರಮ ವೀಕ್ಷಿಸಿದರು.