ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಸದಾನಂದ ಸುವರ್ಣ ದತ್ತಿನಿಧಿ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಆಚರಣೆಯು ನ. 1 ರಂದು ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರ ಹೆಮ್ಮೆಯ ದಿನ, ರಾಜ್ಯದ ಉತ್ಸವವಾಗಿ ಕರ್ನಾಟಕದಲ್ಲಿ ಆಚರಿಸಿದರೆ ಹೊರನಾಡ ಕನ್ನಡಿಗರು ಅಷ್ಟೇ ಸಂಭ್ರಮದಿಂದ ರಾಜ್ಯೋತ್ಸವವನ್ನು ಆಚರಿಸಿರುವುದು ವಿಶೇಷತೆಯಾಗಿತ್ತು. ಪ್ರತೀ ವರ್ಷದಂತೆ ರಾಜ್ಯೋತ್ಸವದಂದು ಮೇರು ರಂಗಕಲಾವಿದ, ನಿರ್ದೇಶಕ, ಹಲವು ಪ್ರಶಸ್ತಿಗಳಿಗೆ ಭಾಜನರಾದ ಸದಾನಂದ ಸುವರ್ಣರ ದತ್ತಿ ನಿಧಿ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಮತ್ತು ರಂಗ ಕಲಾವಿದ ವಾಸುದೇವ ಪಿ. ಶೆಟ್ಟಿ ಮಾರ್ನಾಡ್ ಅವರ ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗಸ್ಥಳದ ಸಂಚಾಲಕಿ ಸುಜಾತಾ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಸ್ಥಳದ ನಿರ್ದೇಶಕ ಸುರೇಶ್ ಪೂಜಾರಿ ಅವರು ಈ ವರ್ಷ ರಂಗಸ್ಥಳ ಸಮಿತಿಯ ವತಿಯಿಂದ ನಡೆದ ಪ್ರಯೋಗಗಳು ಸಾಧನೆ, ಯಶಸ್ಸುಗಳ ಬಗ್ಗೆ ಮಾತನಾಡಿದರು.
ಅನಂತರ ಸಂಘದ ವಿವಿಧ ಸಮಿತಿಯ ಸದಸ್ಯರು ಕನ್ನಡ ಜನಪದ ಗೀತೆ, ಭಾವ ಗೀತೆ, ಕನ್ನಡ ರಾಜ್ಯೋತ್ಸವದ ಕುರಿತು ಬಹಳ ಸುಂದರವಾಗಿ ಹಾಡಿದರು. ಉಪನ್ಯಾಸಕರನ್ನು ಸುಮನ್ ಶೆಡ್ವೆ ಅವರು ಪರಿಚಯಿಸಿದರು. ಅಧ್ಯಕ್ಷರು ಹಾಗೂ ರಂಗಸ್ಥಳದ ನಿರ್ದೇಶಕ ಸುರೇಶ್ ಪೂಜಾರಿ ಅವರಿಗೆ ಉಪನ್ಯಾಸಕರಿಗೆ ಪುಷ್ಪಗುಚ್ಚ, ನೆನಪಿನ ಕಾಣಿಕೆಯನ್ನಿತ್ತು ಸತ್ಕರಿಸಿದರು.
ಉಪನ್ಯಾಸಕ ವಾಸುದೇವ ಪಿ. ಶೆಟ್ಟಿ ಮಾರ್ನಾಡ್ ಅವರು ದತ್ತಿ ನಿಧಿಯ ಪ್ರಾಯೋಜಕರಾದ ಸದಾನಂದ ಸುವರ್ಣರ ರಂಗ ಭೂಮಿಯ ಬಗೆಗಿನ ಕಾಳಜಿ, ಪ್ರೀತಿಯ ಬಗ್ಗೆ ವಿವರಿಸಿದರು. ಸದಾನಂದ ಸುವರ್ಣರು ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ಧಾರಾವಾಹಿ ಇನ್ನಿತರ ಕಾರ್ಯಕ್ರಮಗಳ ನಿರ್ದೇಶನ ಮಾಡಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಎಂದು ನುಡಿದು, ಯಕ್ಷಗಾನ, ತಾಳಮದ್ದಳೆ ಕಲಾವಿದರ ನೋವು, ನಲಿವು-ಗೆಲವುಗಳ ಬಗ್ಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರು ಕರ್ನಾಟಕ ರಾಜ್ಯೋತ್ಸವ ಹಾಗೂ ರಂಗಕಲಾವಿದರ ಬಗ್ಗೆ ಮಾತನಾಡಿದರು. ಸಂಚಾಲಕಿ ಸುಜಾತಾ ಉಮೇಶ್ ಶೆಟ್ಟಿಯವರು ವಂದಿಸಿದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷ ರುಗಳು, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.