Advertisement

ಉಸಿರ ಗಾಳಿ ಬಂದಾಗ ಮಕ್ಕಳ ಉಸಿರೇ ಇರಲಿಲ್ಲ

06:00 AM Aug 14, 2017 | Team Udayavani |

ಗೋರಖ್‌ಪುರ: ಆಗಸ್ಟ್‌ 10ರ ಗುರುವಾರ ರಾತ್ರಿ ಗೋರಖ್‌ಪುರದ ಮಕ್ಕಳ ಪಾಲಿಗೆ ಘೋರ ರಾತ್ರಿ! ಅಲ್ಲಿ ಅಂದು ಹಾಗಾಗುತ್ತದೆಂದು ಯಾರೂ ಊಹಿಸಿರಲಿಲ್ಲ. 

Advertisement

ಆದರೆ ಉಸಿರಾಟದ ಮೂಲವಾಗಿರುವ ಆಮ್ಲಜನಕವೇ ಇಲ್ಲದಿದ್ದರೆ ಮಕ್ಕಳ ಉಸಿರು ನಿಲ್ಲದಿರು ವುದೇ? ಅಂದು ಗೋರಖ್‌ಪುರದ ಬಾಬಾ ರಾಘವ್‌ ದಾಸ್‌ ಮೆಡಿಕಲ್‌ ಕಾಲೇಜಿನ ವಾರ್ಡ್‌ ನಂ.100ರಲ್ಲಿ ಮಕ್ಕಳು ಉಸಿರು ತೆಗೆದುಕೊಳ್ಳಲು ಏದುಸಿರು ಬಿಡುವಾಗ ವ್ಯಕ್ತಿಯೊಬ್ಬರು ಸಾಧ್ಯವಾದಷ್ಟು ಮಕ್ಕಳನ್ನು ರಕ್ಷಿಸಲು ತಮ್ಮ ಶಕ್ತಿ ಮೀರಿ ಯತ್ನಿಸಿದ್ದರು. ಆದರೆ ಕೊನೆಗೂ ವಿಧಿಯ ಕೈ ಮೇಲಾದಾಗ ಮಗುವಿನಂತೆ ಕಣ್ಣೀರಿಟ್ಟಿದ್ದರು.ಬಿಆರ್‌ಡಿ ವೈದ್ಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಕಫೀಲ್‌ ಅಹ್ಮದ್‌ ಆ.10ರ ರಾತ್ರಿ ಮನೆಗೆ ಹೋಗಿ ಹೆಚ್ಚು ಹೊತ್ತೇನೂ ಆಗಿರಲಿಲ್ಲ. ಇನ್ನೇನು ನಿದ್ದೆಗೆ ಜಾರಬೇಕು ಅನ್ನುವಷ್ಟರಲ್ಲಿ ಆಸ್ಪತ್ರೆಯಲ್ಲಿ ಮೆದುಳಿನ ಉರಿಯೂತದಿಂದ ಬಳಲುತ್ತಿರುವ ಮಕ್ಕಳಿದ್ದ ವಾರ್ಡ್‌ ನಿಂದ ಅವರಿಗೆ ಕರೆ ಬಂದಿತ್ತು. ಆಸ್ಪತ್ರೆಯಿಂದ ಕರೆ ಮಾಡಿದ ವ್ಯಕ್ತಿ ಆಮ್ಲಜನಕ ಪೂರೈಕೆ ನಿಂತಿರುವುದಾಗಿಯೂ ಮಕ್ಕಳ ಸ್ಥಿತಿ ಗಂಭೀರವಿರುವುದಾಗಿಯೂ ತಿಳಿಸಿದ. ವಿಷಯ ಕೇಳಿ ಗಾಬರಿಗೊಂಡ ಕಫೀಲ್‌ ಅಹ್ಮದ್‌ ಕೂಡಲೇ ತಮ್ಮ ಪರಿಚಯದ ಆಸ್ಪತ್ರೆ, ನರ್ಸಿಂಗ್‌ ಹೋಮ್‌, ವೈದ್ಯ ಸ್ನೇಹಿತರಿಗೆಲ್ಲ ಕರೆ ಮಾಡಿ ಆಕ್ಸಿಜನ್‌ ಸಿಲಿಂಡರ್‌ ಹೊಂದಿಸಲು ಶತಪ್ರಯತ್ನ ಮಾಡಿದ್ದರು. ಇಷ್ಟು ಪ್ರಯತ್ನದ ಫ‌ಲವಾಗಿ ತನಗೆ ದೊರೆತ ಮೂರು ಜಂಬೋ ಸಿಲಿಂಡರ್‌ಗಳಿಗೆ ಸ್ವತಃ ಹಣ ಪಾವತಿಸಿ, ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ತಂದಾಗ ಮುಂಜಾವ 3 ಗಂಟೆ. 

ಆ ಮೂರು ಸಿಲಿಂಡರ್‌ಗಳು ಗರಿಷ್ಠ 30 ನಿಮಿಷವಷ್ಟೇ ಮಕ್ಕಳ ಉಸಿರಾಟಕ್ಕೆ ನೆರವಾಗಬಲ್ಲವು. ಮಕ್ಕಳ ಪ್ರಾಣ ಹೋಗುವುದಂತೂ ನಿಶ್ಚಿತವಾಗಿತ್ತು. ಆದರೆ ಹತ್ತರಲ್ಲಿ ಒಬ್ಬರಾದರೂ ಉಳಿಯಲಿ ಎಂದು ಅಹ್ಮದ್‌, ಕಿರಿಯ ವೈದ್ಯರ ನೆರವಿನಿಂದ ಆಮ್ಲಜನಕ ಪಂಪ್‌ ಮಾಡುವ ಅಂಬು ಬ್ಯಾಗ್‌ಗಳನ್ನು ಬಳಸಿ ಬೆಳಗಿನವರೆಗೂ ಹೇಗೋ ಪರಿಸ್ಥಿತಿ ನಿಭಾಯಿಸಿದರು. ಬೆಳಗಾಗುತ್ತಲೇ ಆಮ್ಲಜನಕ ಪೂರೈಕೆದಾರರಿಗೆ ಕರೆ ಮಾಡಿದರೆ, ಆತ “ಆಸ್ಪತ್ರೆಯವರು ಹಣ ಪಾವತಿಸಿಲ್ಲದ ಕಾರಣ ಆಮ್ಲಜನಕ ಸರಬರಾಜು ಮಾಡುವುದಿಲ್ಲ’ ಎಂದು ಕಡ್ಡಿ ತುಂಡರಿಸಿದಂತೆ ಹೇಳಿದ.

ತತ್‌ಕ್ಷಣ ಮತ್ತೂಮ್ಮೆ ಪ್ರಯತ್ನಶೀಲರಾದ ಡಾ| ಕಫೀಲ್‌, 12 ಸಿಲಿಂಡರ್‌ಗಳನ್ನು ಹೊಂದಿಸುವಲ್ಲಿ ಯಶಸ್ವಿಯಾದರು. ಮಕ್ಕಳ ಪ್ರಾಣ ಮುಖ್ಯವಾಗಿದ್ದರಿಂದ ಈ ಸಿಲಿಂಡರ್‌ಗಳಿಗೂ ತಾವೇ ಹಣ ಪಾವತಿಸಿದರು. ಇದು ಕಫೀಲ್‌ ಅಹ್ಮದ್‌ರ ಕಡೆಯ ಪ್ರಯತ್ನವಾಗಿತ್ತು. ಈ ಸಿಲಿಂಡರ್‌ಗಳು ಮುಗಿದ ಅನಂತರ ಮತ್ತೆಲ್ಲೂ ಒಂದೇ ಒಂದು  ಆಮ್ಲಜನಕದ ಸಿಲಿಂಡರ್‌ ಹುಟ್ಟಲಿಲ್ಲ. ಈ ಪ್ರಯತ್ನದ ನಡುವೆಯೂ ಗುರುವಾರ ರಾತ್ರಿ 23 ಮಕ್ಕಳು, ಶುಕ್ರವಾರ ರಾತ್ರಿ 9 ಮಕ್ಕಳು ಅವರ ಕಣ್ಣೆದುರೇ ಕೊನೆಯುಸಿರೆಳೆದದ್ದನ್ನು ಕಂಡು ಕಫೀಲ್‌ ಕುಸಿದು ಬಿದ್ದರು.

“ಒಬ್ಬರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದಾದರೆ ನಾವು ಗಳಿಸಿದ ವಿದ್ಯೆ, ಸಂಪಾದಿಸಿದ ಹಣದ ಪ್ರಯೋಜನವಾದರೂ ಏನು? ಜೀವ ಉಳಿಸಲು ಉಪ ಯೋಗವಾಗಲಿಲ್ಲ ಎಂದರೆ ಹಣಕ್ಕೆ ಅರ್ಥವೇ ಇಲ್ಲ. ನನ್ನ ಕಣ್ಣೆದುರೇ ಎಷ್ಟೊಂದು ಮಕ್ಕಳು ಜೀವ ಬಿಟ್ಟರು. ನನ್ನಲ್ಲಿ ಎಷ್ಟೇ ಹಣವಿದ್ದರೂ ಅವರನ್ನು ಬದುಕಿಸಲಾಗಲಿಲ್ಲ’ ಎನ್ನುತ್ತಾ ಡಾ| ಕಫೀಲ್‌ ಅಹ್ಮದ್‌ ಕಣ್ಣೀರಾದರು!

Advertisement

ಮಕ್ಕಳ ಜೀವ ಉಳಿಸಲು ಹೋರಾಡಿದ ವೈದ್ಯ ವಜಾ !
ನಡುರಾತ್ರಿ ಬಂದ ಕರೆಗೆ ಓಗೊಟ್ಟು ಆ ಹೊತ್ತಲ್ಲೇ ಕರ್ತವ್ಯಕ್ಕೆ ಹಾಜರಾಗಿ ಮಕ್ಕಳನ್ನು ಉಳಿಸಲು ಇನ್ನಿಲ್ಲದಂತೆ ಯತ್ನಿಸಿದ ಡಾ| ಕಫೀಲ್‌ ಅಹ್ಮದ್‌ ಅವರನ್ನು ಉತ್ತರ ಪ್ರದೇಶ ಸರಕಾರ ರವಿವಾರ ಸೇವೆಯಿಂದ ವಜಾ ಮಾಡಿದೆ. ಕಫೀಲ್‌ ಅಹ್ಮದ್‌ ಅವರು ಸ್ವತಃ ಹಣ ಪಾವತಿಸಿ ಸಿಲಿಂಡರ್‌ಗಳನ್ನು ಹೊಂದಿಸಿ, ಕೈಲಾದಷ್ಟು ಮಕ್ಕಳನ್ನು ಬದುಕಿಸಿದ ಎರಡು ದಿನಗಳ ಅನಂತರ ಸರಕಾರ ಈ ಆದೇಶ ಹೊರಡಿಸಿದೆ. ಆದರೆ ಅವರನ್ನು ವಜಾ ಮಾಡಲು ಕಾರಣವೇನು ಎಂಬುದನ್ನು ಸರಕಾರ ಬಾಯಿಬಿಟ್ಟಿಲ್ಲ. ಆಮ್ಲಜನಕ ಪೂರೈಕೆದಾರರಿಗೆ ಹಣ ಪಾವತಿಸದೆ ತಪ್ಪೆಸಗಿರುವ ಸರಕಾರ, ತನ್ನ ತಪ್ಪು ಮುಚ್ಚಿಕೊಳ್ಳಲು ವೈದ್ಯರ ತಲೆದಂಡ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

ಸಾವಿನ ಸಂಖ್ಯೆ 79: 
ಸಿಎಂ ಯೋಗಿ ಭೇಟಿ

ಬಿಆರ್‌ಡಿ ವೈದ್ಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು “ಟೈಮ್ಸ್‌ ನೌ’ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ  ಜತೆ ಆಸ್ಪತ್ರೆಗೆ ಭೇಟಿ ನೀಡಿದ  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೊಂದ ಹೆತ್ತವರಿಗೆ ಸಾಂತ್ವನ ಹೇಳಿದರು. “ಸಮಸ್ಯೆ ನಿವಾರಣೆಗೆ ಸರಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಇದರೊಂದಿಗೆ ಪ್ರಧಾನಿಗೂ ಕರೆ ಮಾಡಿ ನೆರವು ಕೋರಲಾಗಿದೆ. ಅವರು ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ. ಹಾಗೇ ಪ್ರಕರಣದ ತನಿಖೆ ನಡೆ ಯುತ್ತಿದ್ದು “ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷಿಸದೆ ಬಿಡುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಮಕ್ಕಳ ಅನಾರೋಗ್ಯ ಹಾಗೂ ಕಾಯಿಲೆಗಳಿಗೆ ಸಂಬಂಧಿಸಿ ಆಳವಾದ ಅಧ್ಯಯನ, ಸಂಶೋಧನೆ ನಡೆಸಲು ಗೋರಖ್‌ಪುರದಲ್ಲಿ  85 ಕೋಟಿ ರೂ. ವೆಚ್ಚದ ಸ್ಥಳೀಯ ವೈದ್ಯಕೀಯ ಕೇಂದ್ರ ತೆರೆಯಲು ಕೇಂದ್ರ ಅನುಮತಿ ನೀಡಿದೆ’ ಎಂದು ಆರೋಗ್ಯ ಸಚಿವ ನಡ್ಡಾ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next