ಲಕ್ನೋ: ಆಮ್ಲಜನಕದ ಕೊರತೆಯಿಂದ 70ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿರುವ ಗೋರಖ್ ಪುರ ಆಸ್ಪತ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋರಖ್ ಪುರ್ ಅನ್ನು ಪಿಕ್ ನಿಕ್ ಸ್ಥಳವನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಶನಿವಾರ ತಿರುಗೇಟು ನೀಡಿದ್ದಾರೆ.
ದಿಲ್ಲಿಯಲ್ಲಿ ಕುಳಿತಿರುವ ಯುವರಾಜನಿಗೆ ಸ್ವಚ್ಛ ಅಭಿಯಾನದ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ. ಇಂತಹವರಿಗೆ ಗೋರಖ್ ಪುರ ಪ್ರದೇಶವನ್ನು ಪ್ರವಾಸಿತಾಣವನ್ನಾಗಿ ಮಾಡಿಕೊಳ್ಲಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನವನ್ನು ಟೀಕಿಸಿದ್ದ ರಾಹುಲ್ ಗಾಂಧಿ, ನಮಗೆ ಬೇಕಾಗಿರುವುದು ಸ್ವಚ್ಛ ಭಾರತ್ ಅಲ್ಲ, ಸಚ್ ಭಾರತ್. ಹಾಗಾಗಿ ಈಗ ಸ್ವಚ್ಛ ಉತ್ತರ ಪ್ರದೇಶ, ಸ್ವಸ್ಥ ಉತ್ತರ ಪ್ರದೇಶ ಬೇಕಾಗಿದೆ ಎಂಬ ಅಭಿಯಾನಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ 70 ಮಕ್ಕಳ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ನೇತೃತ್ವದ ಸರ್ಕಾರದ ವಿರುದ್ಧ ಕಟು ಟೀಕಾಪ್ರಹಾರ ನಡೆಸಿದರು. ಸುಮಾರು 12ರಿಂದ 15 ವರ್ಷಗಳ ಕಾಲ ಅಧಿಕಾರಿ ನಡೆಸಿರುವ ಈ ಸರ್ಕಾರಗಳು ಬಿಆರ್ ಡಿ ಆಸ್ಪತ್ರೆಯನ್ನು ಸ್ವ ಹಿತಾಸಕ್ತಿಗಾಗಿ ಬಳಸಿಕೊಂಡು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಜನರಿಗೆ ಸೌಲಭ್ಯ ವಂಚಿತರನ್ನಾಗಿ ಮಾಡಿಸಿವೆ ಎಂದು ಕಿಡಿಕಾರಿದರು.