Advertisement

ಕರಾವಳಿಯಾದ್ಯಂತ ಭಕ್ತಿ ಸಂಭ್ರಮದ ಗೋಪೂಜೆ

02:19 AM Nov 07, 2021 | Team Udayavani |

ಉಡುಪಿ/ ಮಂಗಳೂರು: ಶ್ರೀಕೃಷ್ಣಮಠ ಸಹಿತ ವಿವಿಧ ಮಠಗಳು, ಧಾರ್ಮಿಕ ದತ್ತಿ ಇಲಾಖೆಯ ಅಧೀನದ ನೂರಾರು ದೇವಸ್ಥಾನಗಳು ಮತ್ತು ಖಾಸಗಿ ಆಡಳಿತದ ದೇವಸ್ಥಾನಗಳಲ್ಲಿ ಶುಕ್ರವಾರ ಗೋಪೂಜೆಯನ್ನು ನಡೆಸಲಾಯಿತು.

Advertisement

ಶ್ರೀಕೃಷ್ಣಮಠದ ಕನಕನ ಕಿಂಡಿ ಎದುರು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಉಭಯ ಶ್ರೀಗಳು, ಪೇಜಾವರ ಶ್ರೀಗಳು ಗೋಪೂಜೆ ನಡೆಸಿದರು.

ಕೊಲ್ಲೂರು, ಮಂದಾರ್ತಿ ಸಹಿತ ಜಿಲ್ಲೆಯ ಎ ಶ್ರೇಣಿಯ 23 ದೇವಸ್ಥಾನಗಳು, ಬಿ ಶ್ರೇಣಿಯ 19 ಮತ್ತು 866 ಸಿ ಶ್ರೇಣಿಯ ದೇವಸ್ಥಾನ ಗಳಲ್ಲಿ ಗೋಪೂಜೆ ನಡೆಸಬೇಕೆಂದು ಜಿಲ್ಲಾಡಳಿತ ನೀಡಿದ ಸೂಚನೆ ಮೇರೆಗೆ ವಿವಿಧ ದೇವಸ್ಥಾನಗಳಲ್ಲಿ ಗೋಪೂಜೆ ನಡೆಯಿತು. ಅಧಿಸೂ ಚಿತ ವಲ್ಲದ ಖಾಸಗಿ ಆಡಳಿತದ ಆನೆಗುಡ್ಡೆ, ಸಾಲಿಗ್ರಾಮ, ವಿವಿಧೆಡೆ ಗಳಲ್ಲಿರುವ ವೆಂಕಟರಮಣ ದೇವಸ್ಥಾನ ಗಳಲ್ಲಿಯೂ ಗೋಪೂಜೆ ಸಂಪನ್ನ ಗೊಂಡಿತು. ಮನೆಗಳಲ್ಲಿಯೂ ಗೋಪೂಜೆ ನಡೆಯಿತು.

ಗುರುವಾರ ರಾತ್ರಿ ವಿವಿಧೆಡೆ ಬಲೀಂದ್ರ ಪೂಜೆ ನಡೆಯಿತು. ಕೃಷಿಕರು ಗದ್ದೆಗಳಲ್ಲಿ ದೀಪಗಳನ್ನಿರಿಸಿ ಬಲೀಂದ್ರನನ್ನು ಗ್ರಾಮೀಣ ಶೈಲಿಯಲ್ಲಿ ಕರೆದು ಪೂಜೆ ಸಲ್ಲಿಸಿದರು.

ತುಳಸೀ ಸಂಕೀರ್ತನೆ
ಶ್ರೀಕೃಷ್ಣಮಠದಲ್ಲಿ ಉತ್ಥಾನ ದ್ವಾದಶಿಯವರೆಗೆ (ನ. 16) ನಡೆಯುವ ತುಳಸೀ ಪೂಜೆ, ಸಂಕೀರ್ತನೆ ಶುಕ್ರವಾರ ಆರಂಭ ಗೊಂಡಿತು. ಪ್ರತಿನಿತ್ಯ ರಾತ್ರಿ ಪೂಜೆ ಬಳಿಕ ವಾದಿರಾಜಸ್ವಾಮಿಗಳ ಸಂಕೀರ್ತನೆಗಳನ್ನು ಹಾಡಿ ತುಳಸೀ ಪೂಜೆಯನ್ನು ನಡೆಸಲಾಗುತ್ತದೆ.

Advertisement

ಇದನ್ನೂ ಓದಿ:2026ರಲ್ಲಿ ಚಂದ್ರನಲ್ಲಿ ರೋವರ್‌; ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ, ನಾಸಾದಿಂದ ಹೊಸ ಯೋಜನೆ

ಪಟಾಕಿ: ಕಣ್ಣಿಗೆ ಗಾಯ
ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿದು ಮೂವರು ಮಕ್ಕಳು ಸೇರಿದಂತೆ ಐದು ಮಂದಿಯ ಕಣ್ಣಿಗೆ ಗಾಯವಾಗಿರುವ ಬಗ್ಗೆ ವರದಿಯಾಗಿದೆ.

3 ಸೆಂಟ್ಸ್‌ನಲ್ಲಿ 60 ದೇಸೀ ಗೋವು
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್‌ ಅವರು ದೊಡ್ಡಣಗುಡ್ಡೆಯ ಕಮಲಮ್ಮನವರು ಕೇವಲ 3 ಸೆಂಟ್ಸ್‌ ಜಾಗದಲ್ಲಿ ಸಾಕುತ್ತಿರುವ 60 ದನಗಳ ದೇಸೀ ಗೋಶಾಲೆಯಲ್ಲಿ ಪೂಜೆ ಸಲ್ಲಿಸಿದರು.

ಮಂಗಳೂರು: ದೀಪಾವಳಿ ಹಬ್ಬದ ಮೂರನೇ ದಿನವಾದ ಶುಕ್ರವಾರ ಕರಾವಳಿಯಾದ್ಯಂತ ಗೋಪೂಜೆಯನ್ನು ಭಕ್ತಿ ಸಂಭ್ರಮದಿಂದ ನೆರವೇರಿಸಲಾಯಿತು.

ಮುಜರಾಯಿ ಇಲಾಖೆಯ ಎಲ್ಲ ದೇವಾಲಯಗಳಲ್ಲಿ ಈ ಬಾರಿ ಗೋಪೂಜೆ ನಡೆಸುವಂತೆ ರಾಜ್ಯ ಸರಕಾರ ಸೂಚನೆ ಹೊರಡಿಸಿದ್ದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರಮುಖ ದೇವಾಲಯಗಳು ಸೇರಿದಂತೆ ಎಲ್ಲ ಮುಜರಾಯಿ ದೇವಸ್ಥಾನಗಳು ಹಾಗೂ ಇತರ ಪ್ರಮುಖ ಕ್ಷೇತ್ರಗಳಲ್ಲಿ ಗೋಪೂಜೆ ನೆರವೇರಿತು. ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಚಿವ ಎಸ್‌. ಅಂಗಾರ ಅವರು ಗೋಪೂಜೆ ನೆರವೇರಿಸಿದರು.

ಜಿಲ್ಲೆಯಲ್ಲಿರುವ ಗೋಶಾಲೆಗಳಲ್ಲಿ ಗೋಪೂಜೆಯು ಭಕ್ತಿ ಸಡಗರದಿಂದ ನಡೆಯಿತು. ವಿವಿಧ ಸಂಘಟನೆಗಳಿಂದಲೂ ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಗೋಪೂಜೆ ನೆರವೆೇರಿತು. ಮನೆಗಳಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಶೃಂಗರಿಸಿ ಹೂವಿನ ಹಾರಹಾಕಿ ಆರತಿ ಬೆಳಗಿ ನಮಿಸಿದರು.

ಶುಕ್ರವಾರ ಬಲಿಪಾಡ್ಯ ಆಚರಣೆ ಜರಗಿತು. ಕೆಲವು ಕಡೆಗಳಲ್ಲಿ ಲಕ್ಷ್ಮಿ ಪೂಜೆ ನಡೆಯಿತು. ದೀಪಾವಳಿ ಸಂದರ್ಭದಲ್ಲೂ ವಾಹನ ಪೂಜೆ ಮಾಡುವ ಸಂಪ್ರದಾಯ ಅನುಸರಿಸಿಕೊಂಡು ಬರುತ್ತಿರುವವರು ವಾಹನಗಳಿಗೆ ಪೂಜೆ ಮಾಡಿಸಿದರು.

ಈ ಬಾರಿ ಕೊರೊನಾ ನಿರ್ಬಂಧಗಳು ಬಹುತೇಕ ಸಡಿಲಗೊಂಡಿರುವ ಹಿನ್ನಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಂಭ್ರಮ ಜೋರಾಗಿತ್ತು. ಮನೆಮಂದಿ ಮಕ್ಕಳ ಜತೆಗೆ. ಪಟಾಕಿ ಸಿಡಿಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next