Advertisement

ಅನ್ನದಾತರ ಸ್ನೇಹಿಯಾದ ವಜ್ರದ ವ್ಯಾಪಾರಿ !

07:22 PM Apr 17, 2021 | Team Udayavani |

ಹುಬ್ಬಳ್ಳಿ: “ಗೋ ಆಧಾರಿತ ಸುವರ್ಣ ಭಾರತ ನಿರ್ಮಾಣವಾಗಬೇಕು. ಇದು ಆಗಬೇಕಾದರೆ ಪ್ರತಿ ರೈತನ ಮನೆಯಲ್ಲೂ ದೇಸಿ ಗೋವುಗಳ ಧ್ವನಿ ಮೊಳಗಬೇಕು. ರಸಗೊಬ್ಬರ, ಕ್ರಿಮಿನಾಶಕ ಬಳಕೆ ಶೂನ್ಯಕ್ಕಿಳಿಯಬೇಕು. ಗೋಕೃಪಾಮೃತ ಬಳಕೆ ಹೆಚ್ಚಬೇಕು. ವಿಷಮುಕ್ತ ಕೃಷಿ ಪ್ರೇರಣೆಗೆ ಗ್ರಾಮ ಗ್ರಾಮದಲ್ಲಿ ಸ್ವಯಂಸೇವಕರ ತಂಡ ಕಂಕಣತೊಡಗಬೇಕು. ಆಗ ಭೂಮಿ ತಾಯಿ ಆರೋಗ್ಯವೂ ಉಳಿಯಲಿದೆ. ನಮ್ಮ ಸ್ವಾಸ್ಥಕ್ಕೂ ಸಹಕಾರಿ ಆಗಲಿದೆ’ –

Advertisement

ಇದು ನನ್ನ ಆಶಯ. ಇದಕ್ಕಾಗಿಯೇ ಗೋಕೃಪಾಮೃತ ತಯಾರಿಸಿದ್ದರೂ ಅದರ ಮೇಲೆ ಯಾವುದೇ ಬೌದ್ಧಿಕ ಆಸ್ತಿ ಹಕ್ಕು(ಪೇಟೆಂಟ್‌)ಪಡೆಯದೆ, ಹಣಕ್ಕೆ ಮಾರಾಟ ಮಾಡದೆ, ದೇಶಾದ್ಯಂತ ರೈತರಿಗೆ ಉಚಿತವಾಗಿ ನೀಡುವ ಕಾರ್ಯಕ್ಕೆ ಮುಂದಾಗಿದ್ದೇನೆ. ಮಠಾ ಧೀಶರು, ಅನೇಕ ಹಿರಿಯರ ಸಲಹೆಯಂತೆ ಇಂತಹ ಕಾರ್ಯಕ್ಕೆ ಮುಂದಾಗಿದ್ದೇನೆ. ನನಗೆ ವಿಶ್ವಾಸವಿದೆ. ಮುಂದೊಂದು ದಿನ ನನ್ನ ಆಶಯ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿದೆ. ರೈತರ ಬದುಕು ಸುಧಾರಿಸಲಿದೆ. ಅನ್ನ ನೀಡುವ ಮಣ್ಣಿನ ಫಲವತ್ತತೆ ಹೆಚ್ಚಲಿದೆ ಎಂಬುದು ಗುಜರಾತ್‌ನ ಬನ್ಸಿ ಗೋಶಾಲೆ ಸಂಸ್ಥಾಪಕ, ಗೋಕೃಪಾಮೃತವೆಂಬ ಕೃಷಿ ಪಾಲಿನ ಸಂಜೀವಿನಿ ಸಂಶೋಧಕ ಗೋಪಾಲಭಾಯಿ ಸುತಾರಿಯಾ ಅವರ ಅನಿಸಿಕೆ. ಗೋಕೃಪಾಮೃತದ ಉದ್ದೇಶ, ಅದರಲ್ಲಿನ ಮಹತ್ವದ ಅಂಶಗಳು, ವಿಷಮುಕ್ತ ಕೃಷಿ ಇನ್ನಿತರ ವಿಷಯಗಳ ಕುರಿತಾಗಿ ಅವರು “ಉದಯವಾಣಿ’ಯೊಂದಿಗೆ ಮನದಾಳದ ಅನಿಸಿಕೆ ಹಂಚಿಕೊಂಡರು.

ಶಾಶ್ವತ ವಿಕಾಸ ಚಿಂತನೆ:

ದೇಶದ ಕೃಷಿ ಸಂಕಷ್ಟಕ್ಕೆ ಸಿಲುಕಿದೆ. ತಾತ್ಕಾಲಿಕ ಲಾಭ, ಹೆಚ್ಚು ಬೆಳೆಯ ಬೆನ್ನು ಬಿದ್ದು ನಾವೇನು ಕಳೆದುಕೊಂಡಿದ್ದೇವೆ, ಭವಿಷ್ಯದಲ್ಲಿ ಯಾವ ಗಂಡಾಂತರ ಎದುರಾಗಲಿದೆ, ನಮ್ಮ ಮುಂದಿನ ಪೀಳಿಗೆಗೆ ಏನನ್ನು ಬಳುವಳಿಯಾಗಿ ನೀಡಲಿದ್ದೇವೆ ಎಂಬ ಚಿಂತನೆಗೂ ಅವಕಾಶ ಇಲ್ಲದ ರೀತಿಯಲ್ಲಿ ಶರವೇಗದಲ್ಲಿ ಮಾಯೆ ನಮ್ಮನ್ನು ಆವರಿಸಿದೆ. ಪೂರ್ವಜರ ಜೀವನ ಪದ್ಧತಿ, ಕೃಷಿ ಸಂಸ್ಕೃತಿ ಮರೆತಿದ್ದೇವೆ. ಮುಖ್ಯವಾಗಿ ದೇಸಿ ಗೋವುಗಳನ್ನು ನಿರ್ಲಕ್ಷಿಸಿದ್ದೇವೆ. ದೇಶಕ್ಕೆ ಶಾಶ್ವತ ವಿಕಾಸ ಅಗತ್ಯವಿದೆ ಎಂಬುದನ್ನು ನಾವು ಅರಿಯಬೇಕಾಗಿದೆ. ಕೃಷಿಯಲ್ಲಿ ಶಾಶ್ವತ ವಿಕಾಸದ ನೆಲೆಗಟ್ಟಿನಲ್ಲಿಯೇ ನಾನು ಪಂಚಗವ್ಯವನ್ನು ಬಳಸಿಕೊಂಡು ಗೋಕೃಪಾಮೃತ ತಯಾರಿಸಲು ಮುಂದಾಗಿದ್ದೆ. ಗೋಕೃಪಾಮೃತ ಹೆಸರೇ ಹೇಳುವಂತೆ ಕೃಷಿ ಪಾಲಿಗೆ ಅಮೃತವೇ ಆಗಿದೆ. ಪಂಚಗವ್ಯಕ್ಕೆ ಒಂದಿಷ್ಟು ವನಸ್ಪತಿ ಸೇರಿಸಿ ಗೋಕೃಪಾಮೃತ ತಯಾರಿಸಲಾಗಿದೆ. ಇದಕ್ಕಾಗಿಯೇ ನಾನು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು (ಆರ್‌ ಆ್ಯಂಡ್‌ ಡಿ)ಆರಂಭಿಸಿದೆ.

ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದೇನೆ. ಸುಮಾರು 10 ವರ್ಷಗಳ ಪರಿಶ್ರಮ ಇದೀಗ ಫಲ ನೀಡುತ್ತಿದೆ. ಗೋಕೃಪಾಮೃತದಲ್ಲಿನ ಬ್ಯಾಕ್ಟೀರಿಯಾಗಳ ವಿಶೇಷತೆ ಎಂದರೆ ಬಳಕೆಯಾದಂತೆ ಇವು ವೃದ್ಧಿಯಾಗುತ್ತಲೇ ಸಾಗುತ್ತವೆ. ರೈತರು ಒಂದು ಲೀಟರ್‌ ಗೋಕೃಪಾಮೃತ ಕಲ್ಚರ್‌ ತೆಗೆದುಕೊಂಡು ಹೋಗಿ ಸುಮಾರು 200 ಲೀಟರ್‌ನಷ್ಟು ಗೋಕೃಪಾಮೃತವನ್ನು ಸುಲಭವಾಗಿ ತಯಾರಿಸಬಹುದು. ಮುಂದೆ ಅದನ್ನೇ ಬಳಸಿಕೊಂಡು ಎಷ್ಟು ಲೀಟರ್‌ನಷ್ಟಾದರೂ ಗೋಕೃಪಾಮೃತ ತಯಾರಿಸಬಹುದಾಗಿದೆ.

Advertisement

65 ಬೆಳೆಗಳ ಮೇಲೆ ಪ್ರಯೋಗ: ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು 2 ಕೋಟಿಯಷ್ಟು ಬ್ಯಾಕ್ಟೀರಿಯಾಗಳು ಇರುತ್ತಿದ್ದವು. ಆದರೆ, ಮಿತಿಮೀರಿದ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದಾಗಿ ಬ್ಯಾಕ್ಟೀರಿಯಾಗಳು ಬಹುತೇಕವಾಗಿ ನಾಶವಾಗಿವೆ. ಗೋಕೃಪಾಮೃತ ಮೂಲಕ ಬ್ಯಾಕ್ಟೀರಿಯಾ ವೃದ್ಧಿಸಬಹುದಾಗಿದೆ. ಜತೆಗೆ ಬೆಳೆಗಳ ಬೆಳವಣಿಗೆ, ರೋಗ-ಬೆಳೆನಾಶ ಕೀಟಗಳ ತಡೆಗೆ ಪರಿಣಾಮಕಾರಿಯಾಗಿದೆ. ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಸುಮಾರು 3.50 ಲಕ್ಷಕ್ಕೂ ಅಧಿ ಕ ರೈತರು ಗೋಕೃಪಾಮೃತ ಬಳಕೆ ಮಾಡುತ್ತಿದ್ದಾರೆ. ಸುಮಾರು 65 ವಿವಿಧ ಬೆಳೆಗಳಿಗೆ ಗೋಕೃಪಾಮೃತ ಬಳಕೆ ಮಾಡಲಾಗಿದ್ದು, ಉತ್ತಮ ಫಸಲು ಬಂದಿದೆ. ದೇಶದಲ್ಲಿ ವಾರ್ಷಿಕವಾಗಿ ಸುಮಾರು 14 ಲಕ್ಷ ಕೋಟಿ ರೂ. ಕ್ರಿಮಿನಾಶಕ, ರಸಗೊಬ್ಬರ ವಹಿವಾಟು ನಡೆಯುತ್ತಿದೆ. ಇದು ಶೂನ್ಯಕ್ಕೆ ಬರಬೇಕಾಗಿದೆ. ಗೋಕೃಪಾಮೃತದ ಮಹದಾಸೆಯೂ ಅದೇ ಆಗಿದೆ ಎಂಬುದು ಸುತಾರಿಯಾ ಅವರ ಅನಿಸಿಕೆ.

ಅನದಾತರ ಸ್ನೇಹಿಯಾದ ವಜ್ರದ ವ್ಯಾಪಾರಿ

ಗೋಪಾಲಭಾಯಿ ಸುತಾರಿಯಾ ಮುಂಬೈನಲ್ಲಿ ವಜ್ರದ ವ್ಯಾಪಾರಿಯಾಗಿದ್ದವರು. ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡವರು. ಅವರ ಗುರುಗಳಾದ ಹಿಮಾಲಯದ ಹಂಸರಾಜ ಮಹಾರಾಜರು ದೇಸಿ ಗೋವುಗಳ ಸಂರಕ್ಷಣೆ-ಸಂವರ್ಧನೆಗೆ ಮುಂದಾಗುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಮುಂಬೈ ತೊರೆದು, ಉದ್ಯಮಕ್ಕೆ ಶರಣು ಹೇಳಿ ಗುಜರಾತ್‌ನ ಅಹ್ಮದಾಬಾದ್‌ಗೆ ಬಂದರು. ಅಲ್ಲಿ ಬನ್ಸಿ ಗೋಶಾಲೆ ಆರಂಭಿಸಿದರು. ಗಿರ್‌ ಹಸುಗಳ ದೇಶದ ಅತಿದೊಡ್ಡ ಗೋಶಾಲೆ ಇದಾಗಿದೆ. ಗೋಶಾಲೆಗಳ ಅತ್ಯುತ್ತಮ ನಿರ್ವಹಣೆಯಲ್ಲಿ ಕೇಂದ್ರ ಸರಕಾರದಿಂದ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 700 ದೇಸಿ ಹಸುಗಳನ್ನು ಸಾಕುತ್ತಿದ್ದು, ಗೋ ಉತ್ಪನ್ನಗಳನ್ನು ಬಳಸಿ ಸುಮಾರು 40 ಔಷಧಗಳನ್ನು ತಯಾರಿಸುತ್ತಿದ್ದಾರೆ. ಇದಲ್ಲದೆ ಗೋಕೃಪಾಮೃತ ಮೂಲಕ ಅನ್ನದಾತರ ಮನೆ-ಮನಗಳಲ್ಲಿ ಸ್ಥಾನ ಪಡೆದಿದ್ದಾರೆ.

ಆಮರೇಗೌಡ ಗೋನವಾರ

 

 

Advertisement

Udayavani is now on Telegram. Click here to join our channel and stay updated with the latest news.

Next