ಬೆಂಗಳೂರು : ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ ಎಂದು ಶಾಸಕ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಬರಹಳ್ಳಿಯ ಆತ್ರೇಯ ವಿದ್ಯಾನಿಕೇತನ ಶಾಲೆಯಲ್ಲಿ ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿಂದು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ನೀವಷ್ಟೇ ಅಲ್ಲದೆ ದೂರದ ಊರಿನಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರು, ಹಿತೈಷಿಗಳಿಗೂ ಇಂಥಹ ಶಿಬಿರಗಳ ಬಗ್ಗೆ ತಿಳಿಸಿ ಅವರು ಕೂಡ ಇದರ ಉಪಯೋಗಪಡೆಯಲು ಸಹಕಾರ ನೀಡಿ ಎಂದರು.
ಕಣ್ಣು, ಹೃದಯ, ಶ್ವಾಸಕೋಶ, ಗರ್ಭಕೋಶ, ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಕಣ್ಣಿನ ತೊಂದರೆ ಇರುವವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕಗಳನ್ನೂ ಕೂಡ ನೀಡಲಾಗುವುದು ಎಂದರು.
ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಉಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ.ನಾರಾಯಣ ಸ್ವಾಮಿ, ಡಾ.ಅನುರಾಧ,ಡಾ.ಪುನೀತ್,ವಿಜಯ ಲಕ್ಷ್ಮೀ ಭಂಡಾರಿ,ಡಾ.ನಾಗೇಂದ್ರ,ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ,ನಿಸರ್ಗ ಜಗದೀಶ್,ವೆಂಕಟೇಶ್ ಮೂರ್ತಿ, ವೆಂಕಟೇಶ್ ಮಾಮ,ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.