Advertisement
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಬಗೆ ಬಗೆಯ ದೇವಾಲಯಗಳು ಕಾಣಸಿಗುತ್ತವೆ. ಇದೇ ಸಾಲಿನಲ್ಲಿ ನಿಲ್ಲುವುದು ಹೊನ್ನಾವರದ ಹೂವಿನ ಚೌಕದಲ್ಲಿರುವ ಶ್ರೀಗೋಪಾಲಕೃಷ್ಣ ದೇವಾಲಯ. ಇದು ಅತ್ಯಂತ ಆಕರ್ಷಕವಾಗಿದೆ. ಇಲ್ಲಿಗೆ ಬಂದರೆ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸದಾ ಭಕ್ತರ ಜಂಗುಳಿಯಿಂದ ಕೂಡಿರುತ್ತದೆ. ಈ ದೇವಾಲಯ ಪೂರ್ವಾಭಿಮುಖವಾಗಿದೆ. ಗರ್ಭ ಗೃಹ, ಮುಖ ಮಂಟಪದಲ್ಲಿ ಶಿಲಾಕಲ್ಲಿನ ರಚನೆ ಹಾಗೂ ಕೆತ್ತನೆಗಳಿರುವುದರಿಂದ ಇಡೀ ದೇವಾಲಯದ ಸೌಂದರ್ಯ ಹೆಚ್ಚಿದೆ.
ದೇವಾಲಯಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ಬೆಂಗಳೂರಿನ ಇನ್‌ಫೋಸಿಸ್ ಸಂಸ್ಥೆಯ ಆಡಳಿತ ವಿಭಾಗದ ಪ್ರಮುಖ ನಿರ್ದೇಶಕರಾಗಿರುವ ನಂದನ್ ನಿಲೇಕಣಿಯವರ ಪೂರ್ವಜರು ಈ ದೇಗುಲದ ಸಂಸ್ಥಾಪಕರಾಗಿದ್ದರು. ನಿಲೇಕಣಿಯವರ ಕುಟುಂಬ ಮೊದಲು ಹೊನ್ನಾವರ-ಕುಮಟಾ ಹೆದ್ದಾರಿಯಲ್ಲಿರುವ ಕರ್ಕಿ ಗ್ರಾಮದಲ್ಲಿತ್ತು. ಇವರ ಪೂರ್ವಜರಾದ ಅನಂತ ತಿಮ್ಮಪ್ಪಯ್ಯ ಸ್ಥಳೇಕರ್ ಅವರು ಹಿತ್ತಲಲ್ಲಿದ್ದ ಬಾವಿಯಲ್ಲಿ ನೀರು ಸೇದುತ್ತಿದ್ದರು. ಆಗ ಕೊಡಕ್ಕೆ ಏನೋ ತಾಗಿದಂತಾಯಿತು. ಬಾವಿ ಒಳಗೆ ಇಣುಕಿದಾಗ ಈ ವಿಗ್ರಹ ಗೋಚರಿಸಿತು. ಶುಭ ಮುಹೂರ್ತ ನೋಡಿ ಬಾವಿಯೊಳಗಿಂದ ವಿಗ್ರಹ ಮೇಲಕ್ಕೆತ್ತಿ ತಂದು ಮನೆಯ ಆವರಣದಲ್ಲಿಟ್ಟು ಪೂಜಿಸಲಾರಂಭಿಸಿದರು. ಆನಂತರ ಈ ಕುಟುಂಬದವರು ಹೊನ್ನಾವರ ಪಟ್ಟಣಕ್ಕೆ ವಲಸೆ ಬಂದರು. ನಂತರ ಭಟ್ಕಳ ಸಮೀಪದ ಚಿತ್ರಾಪುರದ ಸಾರಸ್ವತ ಮಠದ ಪೀಠಾಧಿಪತಿಗಳಾಗಿದ್ದ ಶ್ರೀಕೃಷ್ಣಾಶ್ರಮ ಸ್ವಾಮೀಜಿಗಳ ಮಾರ್ಗದರ್ಶನದಂತೆ ಬಜಾರ್ ಚೌಕದ ಸ್ಥಳದಲ್ಲಿ ಚಿಕ್ಕ ಗುಡಿ ಕಟ್ಟಿ ಗೋಪಾಲಕೃಷ್ಣ ದೇವರ ವಿಗ್ರಹ ಸ್ಥಾಪಿಸಿದರು ಎನ್ನುತ್ತದೆ ಇತಿಹಾಸ. ಗೋಪಾಲಕೃಷ್ಣ ವಿಗ್ರಹ 2 ಅಡಿ ಎತ್ತರವಿದೆ. ಪೂರ್ತಿ ಕೃಷ್ಣಶಿಲೆಯಿಂದಲೇ ಕೂಡಿದೆ. ಆಕಳಿನೊಂದಿಗೆ ನಿಂತ ಗೋಪಾಲಕೃಷ್ಣ ವಿಗ್ರಹ ತ್ರಿಭಂಗಿಯಲ್ಲಿದೆ. ಕೊರಳಿನಲ್ಲಿ ವೈಜಯಂತಿಮಾಲೆ, ಬಲಗೈಯಲ್ಲಿ ಬೆಣ್ಣೆ ಮುದ್ದೆ, ಎಡಗೈನಲ್ಲಿ ಕೊಳಲು ಹೊಂದಿರುವ ಈ ಗ್ರಹ ಭಕ್ತರಲ್ಲಿ ಭಕ್ತಿಯಭಾವ ಸ್ಪುರಿಸುವಂತೆ ಮಾಡುತ್ತದೆ. ವಿಗ್ರಹದ ಕೆಳಭಾಗದಲ್ಲಿ ನಿಂತ
ಭಂಗಿಯಲ್ಲಿರುವ ಆಕಳು ತನ್ನ ನಾಲಿಗೆಯಿಂದ ಕೃಷ್ಣನ ಬಲಗಾಲನ್ನು ನೆಕ್ಕುತ್ತಿದೆ. ಹಾಲುಣ್ಣುತ್ತಿರುವ ಕರುವನ್ನು ಹೊಂದಿರುವ ಆಕಳು ಧಾರ್ಮಿಕ ಮತ್ತು ಆಧ್ಯಾತ್ಮವಾಗಿ ಹಲವು ಸಾಂಕೇತಿಕ ಅರ್ಥ ಸಾರುತ್ತದೆ ಎಂದು ಅರ್ಚಕ ಕುಟುಂಬಸ್ಥ ಅನಿರುದ್ಧ ಭಟ್ ವಿವರಿಸುತ್ತಾರೆ.
Related Articles
1851 ರಲ್ಲಿ ಈ ದೇವಾಲಯ ಪ್ರದೇಶವನ್ನು ವಿಸ್ತರಿಸಿ, ದೊಡ್ಡ ದೇಗುಲವಾಗಿ ಅಭಿವೃದ್ಧಿ ಪಡಿಸಲಾಯಿತು. ಆ ವರ್ಷ ಅಕ್ಷಯ ತೃತೀಯ ದಿನದಂದು ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ಜೊತೆಗೆ ಅಂದೇ ದೇವಾಲಯದಲ್ಲಿ ರಥೋತ್ಸವ ನಡೆಸುವ ಪದ್ಧತಿ ಆರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ಈಗಲೂ ಸಹ ಪ್ರತಿ ವರ್ಷ ಅಕ್ಷಯ ತೃತೀಯದಂದು ಮಹಾರಥೋತ್ಸವ ಜರುಗುತ್ತದೆ. 1850 ರಲ್ಲಿ ಗೇರುಸೊಪ್ಪ ಸಮೀಪದ ಉಪ್ಪೋಣಿಯ ಶೇಷ ಕೃಷ್ಣ ಭಟ್ ಕುಟುಂಬಸ್ಥರು ಪೂಜೆಯನ್ನು ಆರಂಭಿಸಿದರು. ಈಗಲೂ ಸಹ ಈ ಕುಟುಂಬದ ಸದಸ್ಯರೇ ದೇಗುಲವನ್ನು ಮತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಡಾ.ಭವಾನಿ ಶಂಕರ ಕಾರ್ಕಳ್ ಅವರ ಮುಂದಾಳತ್ವದಲ್ಲಿ ಚಂದ್ರಶಾಲೆ ಸಹಿತ ದೇವಾಲಯ ಅಭಿವೃದ್ಧಿ, ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಗಿದೆ.
Advertisement
ಹೊನ್ನಾವರ ಪಟ್ಟಣದಲ್ಲಿ ಗಣಪತಿ, ಶಾರದೆ, ರಾಮೇಶ್ವರ ಹಾಗೂ ಗೋಪಾಲಕೃಷ್ಣ ಹೀಗೆ 4 ದೇವಾಲಯಗಳು ಸಾರಸ್ವತ ಸಮಾಜದ ದೇಗುಲಗಳಾಗಿದೆ. ಗೋಪಾಲಕೃಷ್ಣ ದೇವಾಲಯದ ಹೊರ ಗೋಡೆ, ಮುಖ ಮಂಟಪ ಹಾಗೂ ಚಂದ್ರಶಾಲೆಯ ಶಿಲಾ ಕಂಬಗಳ ಮೇಲೆ ಶಿಷ್ಟ ಕೆತ್ತನೆಗಳಿವೆ. ಜಿನಬಿಂಬ, ಸೊಂಡಿಲು ಮತ್ತು ನವಿಲು ಗರಿಗಳನ್ನು ಹೊಂದಿರುವ ಆನೆ, ದರ್ಪಣ ಸುಂದರಿ, ಸಂನ್ಯಾಸಿ ಮುಖದ ಮಾನವ, ಮೇಷಾದಿ ದ್ವಾದಶ ರಾಶಿ ದೇವತೆಗಳ ಚಿತ್ರಗಳು ಇಲ್ಲಿವೆ. ದೇವಾಲಯದಲ್ಲಿ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಗಣೇಶ ಚತುರ್ಥಿ, ಚತುರ್ದಶಿ, ವಿಜಯ ದಶಮಿ,ದೀಪಾವಳಿ,ಯುಗಾದಿ,ರಾಮನವಮಿ ಹೀಗೆ ವಿವಿಧ ಹಬ್ಬಗಳಂದು ವಿಶೇಷ ಪೂಜೆ, ಶ್ರಾವಣ ಮಾಸವಿಡೀ ನಿತ್ಯ ಬೆಳಗ್ಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಪೂಜೆ, ಕಾರ್ತೀಕ ಮಾಸದಲ್ಲಿ ದೀಪೋತ್ಸವ ಇತ್ಯಾದಿ ವೈಭವದಿಂದ ನಡೆಯುತ್ತದೆ. ಬಹು ಮುಖ್ಯವಾಗಿ ಸಂತಾನ ಪ್ರಾಪ್ತಿಗಾಗಿ, ವಾಕ್ ದೋಷ ಪರಿಹಾರಕ್ಕಾಗಿ ಭಕ್ತರು ಬಗೆ ಬಗೆಯ ಹರಕೆ ಹೊತ್ತು ಇಲ್ಲಿಗೆ ಬರುವುದು ವಿಶೇಷ.
ಎನ್.ಡಿ.ಹೆಗಡೆ ಆನಂದಪುರಂ