ಲಕ್ಷ್ಮೇಶ್ವರ: ಮಾಜಿ ಶಾಸಕ ದಿ|ಗೂಳಪ್ಪ ಉಪನಾಳ ಈ ಭಾಗದ ಜನರು ಎಂದೂ ಮರೆಯದ ಕೊಡುಗೆ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಹಿತ್ಯ, ಶಿಕ್ಷಣ, ಕ್ರೀಡೆ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲೂ ಉಪನಾಳ ಅವರು ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದರು ಎಂದು ಹಿರಿಯ ಮುಖಂಡ ಸೋಮಣ್ಣ ಮುಳಗುಂದ ಹೇಳಿದರು.
ಪಟ್ಟಣದ ಜಿ.ಎಫ್.ಉಪನಾಳ ಪ್ರತಿಷ್ಠಾನದ ಶಾಂತಿಧಾಮ ವೃದ್ಧಾಶ್ರಮದ ಆವರಣದಲ್ಲಿ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ಗೂಳಪ್ಪ ಫಕ್ಕೀರಪ್ಪ ಉಪನಾಳ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಬೆಳೆದು ನಿಲ್ಲಬೇಕಾದರೆ ಆತನಲ್ಲಿರುವ ಆತ್ಮಸ್ಥೈರ್ಯ, ಪರೋಪಕಾರಿ ಗುಣ, ಸಮಾಜಮುಖೀ ಸೇವೆಗಳು ಮುಖ್ಯ ಕಾರಣವಾಗಿರುತ್ತವೆ. ಇವೆಲ್ಲ ಗುಣಗಳು ದಿ.ಗೂಳಪ್ಪನವರಲ್ಲಿದ್ದವು. ಆದ್ದರಿಂದ ಅವರು ಈ ಭಾಗದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ ಎಂದು ಹೇಳಿದರು.
ಸಾವಕ್ಕ ಫಕ್ಕೀರಪ್ಪ ಉಪನಾಳ ಅವರ ಹೆಸರಿನಲ್ಲಿ ದಿ.ಗೂಳಪ್ಪ ಉಪನಾಳ ಅವರು ನೀಡಿದ ದತ್ತಿ ನಿಮಿತ್ತ ಜಾನಪದ ಸಾಹಿತ್ಯ ಕುರಿತು ಜಾನಪದ ಲೋಕದ ಗಾರುಡಿಗ ಹರ್ಲಾಪೂರದ ಸಾಂಬಯ್ಯ ಹಿರೇಮಠ ಮಾತನಾಡಿ, ಜಾಣರ ಪದವೇ ಜಾನಪದ. ಜನ ಸಾಮಾನ್ಯರ ಬದುಕಿನೊಂದಿಗೆ ಮೇಳೈಸಿಕೊಂಡು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ. ಗ್ರಾಮೀಣ ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಒಗಟು, ಲಾವಣಿ, ಸೋಭಾನೆ ಹಾಡು, ಕುಟ್ಟುವ ಪದ, ಹಂತಿ ಹಾಡು, ಡೊಳ್ಳಿನ ಹಾಡು, ಬೀಸುವ ಪದ, ಮದುವೆ ಹಾಡು ಹೀಗೆ ಇನ್ನೂ ಹಲವಾರು ಪ್ರಕಾರಗಳಲ್ಲಿ ಜಾನಪದ ಸಾಹಿತ್ಯ ತುಂಬಿಕೊಂಡಿದೆ. ಎಲ್ಲ ವರ್ಗದ ಜನರ ದುಃಖ-ದುಮ್ಮಾನಗಳಿಗೆ, ಕಷ್ಟ-ಸುಖಗಳಿಗೆ, ವಿರಹಕ್ಕೆ, ಸಂತೋಷಕ್ಕೆ, ಒಲುಮೆಗೆ ಹರಡಿಕೊಂಡಿದ್ದು, ಬದುಕನ್ನು ನಿರಾಯಾಸವಾಗಿ ನಡೆಸಿಕೊಂಡು ಹೋಗಲು ಕಂಡುಕೊಂಡ ಮಾರ್ಗವೇ ಜಾನಪದ ಎಂದು ಹೇಳಿದರು.
ಪುಲಕೇಶಿ ಉಪನಾಳ ಅವರು ದಿ|ಜಿ. ಎಫ್.ಉಪನಾಳ ಮಾತನಾಡಿದರು. ಬಡವರ ಬಂಧು ಗೂಳಪ್ಪ ಉಪನಾಳ ಅವರ ಕುರಿತು ಬಸವರಾಜ ಬಾಳೇಶ್ವರಮಠ ಮಾತನಾಡಿ, ವಿಶಿಷ್ಟ ವೇಷಭೂಷಣ, ಬಡವರ ನೋವಿಗೆ ಸ್ಪಂದಿಸುವ ಮೂಲಕ ಕ್ಷೇತ್ರವ್ಯಾಪ್ತಿಯಲ್ಲಿ ಹತ್ತಾರು ಸಮಾಜಮುಖೀ ಕಾರ್ಯಕ್ರಮ ಹಾಕಿಕೊಂಡು ಸದಾ ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ದಿ.ಗೂಳಪ್ಪನವರು ಮಾಡಿದ್ದರು. ಹೀಗಾಗಿ, ಅವರನ್ನು ಜನರು ಬಡವರ ಬಂಧು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇಂತಹ ಶಾಸಕರು ನಮ್ಮ ಕ್ಷೇತ್ರದಲ್ಲಿ ಆಗಿಹೋಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ, ಪ್ರವೀಣ ಬಾಳಿಕಾಯಿ, ಶರಣಪ್ಪ ಗುಳಗಣ್ಣವರ, ಚಂದ್ರಪ್ಪ ಕಾರಡಗಿ, ಸೋಮೇಶ ಉಪನಾಳ, ಪೂರ್ಣಾಜಿ ಕರಾಟೆ, ನಿರ್ಮಲಾ ಅರಳಿ, ವೃದ್ಧಾಶ್ರಮದ ಹಿರಿಯ ಜೀವಿಗಳು ಉಪಸ್ಥಿತರಿದ್ದರು. ಸೋಮೇಶ ಉಪನಾಳ ಸ್ವಾಗತಿಸಿ, ಮಂಜುನಾಥ ಚಾಕಲಬ್ಬಿ ನಿರೂಪಿಸಿ, ಈರಣ್ಣ ಗಾಣಿಗೇರ ವಂದಿಸಿದರು.