Advertisement
ಒಂದು ವಿಷಯ ನೆನಪಿರಲಿ; ನೀವು ಸೇವ್ ಮಾಡಿದ ನಂಬರುಗಳು ನಿಮ್ಮ ಫೋನ್‌ನ ಆಂತರಿಕ ಸಂಗ್ರಹದಲ್ಲಿದ್ದರೆ, ಆ ಫೋನ್ ನಿಮ್ಮ ಬಳಿ ಇರುವವರೆಗೆ ಮಾತ್ರ ನಂಬರ್‌ಗಳು ಇರುತ್ತವೆ. ಫೋನು ಕಳುವಾದರೆ ಅಥವಾ ಕೆಟ್ಟು ಹೋದರೆ ಆಗ ನಿಮ್ಮ ಕಾಂಟಾಕ್ಟ್ ಗಳೆಲ್ಲ ಹಾಳಾದಂತೆಯೇ. ಅದಕ್ಕೆ ಏನ್ಮಾಡಿ ಅಂದ್ರೆ- ಫೋನ್ ನಂಬರ್‌ಗಳನ್ನು ಗೂಗಲ್ ನಲ್ಲಿ ಸೇವ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಒಂದು ವೇಳೆ ನಿಮ್ಮ ಫೋನ್ ಹಾಳಾದರೂ, ನೀವು ಇನ್ನೊಂದು ಫೋನ್ ಬಳಸುವಾಗ ಗೂಗಲ್ ಅಕೌಂಟ್ ಮೂಲಕ ಆ ಫೋನ್‌ಗೆ ಲಾಗಿನ್ ಆದರೆ ಸಾಕು, ನಿಮ್ಮ ಸಂಗ್ರಹದಲ್ಲಿದ್ದ ಹಳೆಯ ಮೊಬೈಲ್ ನಂಬರ್‌ಗಳು ಮ್ಯಾಜಿಕ್ ನಂತೆ ಆ ಫೋನ್ ನಲ್ಲಿ ಬಂದು ಕುಳಿತುಕೊಳ್ಳುತ್ತವೆ.
ನೀವು ಹೊಸ ಅಂಡ್ರಾಯ್ಡ ಫೋನ್ ತೆಗೆದುಕೊಂಡಿರಿ ಎಂದಿಟ್ಟುಕೊಳ್ಳಿ. ಅದನ್ನು ಆನ್ ಮಾಡಿ ಮುಂದಕ್ಕೆ ಹೋದಂತೆಲ್ಲ ಆದು ನಿಮ್ಮ ಜಿಮೇಲ್ ಅಕೌಂಟ್ ಗೆ ಲಾಗಿನ್ ಆಗಲು ಕೇಳುತ್ತದೆ. ಜಿಮೇಲ್ ಅಕೌಂಟ್ ಇಲ್ಲವಾದರೆ, ಹೊಸದಾಗಿ ಸೃಷ್ಟಿಸಲು ಹೇಳುತ್ತದೆ. ನಿಮ್ಮ ಫೋನ್‌ನಲ್ಲಿ, ಅಂಡ್ರಾಯ್ಡನ ಆ್ಯಪ್‌ಗ್ಳು ದೊರಕುವ ಜಾಗ ಗೂಗಲ್ ಪ್ಲೇ ಸ್ಟೋರ್. ಅದು ನಿಮಗೆ ದೊರಕಬೇಕಾದರೆ ಜಿಮೇಲ್ ಮೂಲಕ ಲಾಗಿನ್ ಆಗಲೇಬೇಕು. ಆದ್ದರಿಂದ,ಯಾವ ಫೋನ್‌ಗೆ ನೀವು ಜಿಮೇಲ್ ಅಕೌಂಟ್‌ನಿಂದ ಲಾಗಿನ್ ಆಗುತ್ತೀರೋ, ಆ ಜಿಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಇಲ್ಲವಾದರೆ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅದು ಹೊರಗಿನವರಿಗೆ ಗೊತ್ತಾಗದಂತೆ ಎಚ್ಚರವಹಿಸಿ. ಎಷ್ಟೋ ಜನರು, ಹಳೆಯ ಫೋನ್‌ನಲ್ಲಿ ಒಂದು ಜಿಮೇಲ್ ಅಕೌಂಟ್ ಇಟ್ಟುಕೊಂಡು, ಹೊಸ ಫೋನ್ ಕೊಂಡಾಗ, ಹಳೆಯ ಅಕೌಂಟಿನ ಐಡಿ, ಪಾಸ್ವರ್ಡ್ ಎಲ್ಲ ಮರೆತಿರುತ್ತಾರೆ! ಆಗ ಗೂಗಲ್‌ನಲ್ಲಿ ನಿಮ್ಮ ನಂಬರ್‌ಗಳಿದ್ದರೂ ಪ್ರಯೋಜನವಾಗುವುದಿಲ್ಲ.
ಜಿಮೇಲ್ ಅಕೌಂಟ್ ಮೂಲಕ ಲಾಗಿನ್ ಆದ ಮೇಲೆ, ನಿಮ್ಮ ಮೊಬೈಲ್‌ನಲ್ಲಿ ಫೋನ್ ಬುಕ್ ಅಥವಾ ಕಾಂಟ್ಯಾಕ್ಟ್ ಆ್ಯಪ್ ಕ್ಲಿಕ್ ಮಾಡಿ, ಸಾಮಾನ್ಯವಾಗಿ ಇದು, ನಿಮ್ಮ ಫೋನಿನ ಕೆಳಗಿನ ಸಾಲಲ್ಲಿ ಇರುತ್ತದೆ. ನೀವು ಫೋನ್ ಕಾಲ್ ಮಾಡುವ ಆ್ಯಪ್ ಪಕ್ಕದಲ್ಲೇ ಇರುತ್ತದೆ. ಇನ್ನು ಕೆಲವು ಫೋನ್‌ಗಳಲ್ಲಿ ಫೋನ್ ಕಾಲ್ ಆ್ಯಪ್‌ನಲ್ಲೇ ಕಾಂಟ್ಯಾಕ್ಟ್ ಕೂಡ ಇರುತ್ತದೆ. ಹೀಗೆ ಕಾಂಟ್ಯಾಕ್ಟ್ (ಫೋನ್‌ಬುಕ್) ಆ್ಯಪ್ ಓಪನ್ ಆದ ನಂತರ, ಅದರಲ್ಲಿ ನ್ಯೂ ಕಾಂಟ್ಯಾಕ್ಟ್, ಅಥವಾ ಆಡ್ ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಸೇವ್ ಟು ಫೋನ್, ಗೂಗಲ್, ಸಿಮ್ 1, ಸಿಮ್ 2 ಅನ್ನುವ ಆಯ್ಕೆಗಳು ಸಿಗುತ್ತವೆ. ಅದರಲ್ಲಿ ಗೂಗಲ್ ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಆನಂತರ ಫೋನ್ ನಂಬರ್ ಸೇವೆ ಮಾಡಿ. ಒಮ್ಮೆ ಹೀಗೆ ಮಾಡಿದರೆ ಸಾಕು, ನಂತರದ ಎಲ್ಲ ಫೋನ್ ನಂಬರ್‌ಗಳೂ ಗೂಗಲ್ ಕಾಂಟಾಕ್ಟ್‌ನಲ್ಲೇ ಸೇವ್ ಆಗುತ್ತವೆ. ನೀವು ಡಾಟಾ ಆಫ್ ಮಾಡಿದಾಗ ಗೂಗಲ್ ಸೆಲೆಕ್ಟ್ ಮಾಡಿಕೊಂಡು ಸೇವ್ ಮಾಡಿದರೂ, ಡಾಟಾ ಆನ್ ಆದ ತಕ್ಷಣ ಆ ನಂಬರ್‌ಗಳೆಲ್ಲ ನೀವು ಲಾಗಿನ್ ಆಗಿರುವ ಗೂಗಲ್ (ಜಿಮೇಲ್) ಅಕೌಂಟ್‌ಗೆ ಸಿಂಕ್ರನೈಸ್ ಆಗುತ್ತವೆ. ಹೀಗೆ ಗೂಗಲ್ ಕಾಂಟಾಕ್ಟ್‌ನಲ್ಲಿ ಸೇವ್ ಆದ ನಂಬರುಗಳು ಸುರಕ್ಷಿತವಾಗಿ ಗೂಗಲ್ ಅಕೌಂಟ್‌ನಲ್ಲಿರುತ್ತವೆ. ಇದು ಕೌÉಡ್ ಸ್ಟೋರೇಜ್ ಆದ್ದರಿಂದ ಭೌತಿಕವಾಗಿ ಹಾಳಾಗುವ ಚಿಂತೆಯಿಲ್ಲ. ನೀವು ಯಾವುದೇ ಬೇರೆ ಫೋನ್‌ಗೆ ಹೋಗಿ ನಿಮ್ಮ ಅದೇ ಗೂಗಲ್ ಅಕೌಂಟ್ ಗೆ ಲಾಗಿನ್ ಆದರೆ ಆ ಮೊಬೈಲ್‌ನಲ್ಲಿ ನೀವು ಸೇವ್ ಮಾಡಿದ ನಂಬರುಗಳು ಬರುತ್ತವೆ. ಪರ್ಸನಲ್ ಕಂಪ್ಯೂಟರ್ ನಲ್ಲಿ ನಿಮ್ಮ ಜಿಮೇಲ್ ಓಪನ್ ಮಾಡಿದರೆ ಈ ಎಲ್ಲ ನಂಬರ್‌ಗಳೂ ಸಿಗುತ್ತವೆ. ಜಿಮೇಲ್‌ನ ಬಲತುದಿಯಲ್ಲಿ ಚಪ್ಪಟೆಯಾಕಾರದ 9 ಸಣ್ಣ ಚುಕ್ಕಿಗಳಿರುವೆಡೆ ಕ್ಲಿಕ್ ಮಾಡಿದರೆ ಗೂಗಲ್ ನ ಎಲ್ಲ ಆ್ಯಪ್‌ಗ್ಳು ಕಾಣಸಿಗುತ್ತವೆ. ಅಲ್ಲಿ ಕಾಂಟ್ಯಾಕ್ಟ್ಗೆ ಹೋಗಿ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್‌ನಲ್ಲಿರುವ ನಂಬರ್‌ಗಳು ಕಾಣಸಿಗುತ್ತವೆ.
Related Articles
– ಕೆ.ಎಸ್. ಬನಶಂಕರ ಆರಾಧ್ಯ
Advertisement