ನವದೆಹಲಿ: ಮಹಿಳೆಯರು ನಾಲ್ಕು ಗೋಡೆಯ ಮಧ್ಯೆದಿಂದ ಹೊರ ಹೋಗಬಾರದೆಂಬ ನಂಬಿಕೆ ಉಚ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿಯೇ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಭಾರತದ ಮೊಟ್ಟ ಮೊದಲ ಆಲೋಪಥಿ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಆನಂದಿಬಾಯಿ ಜೋಶಿ.
ಇಂದು ಆನಂದಿಬಾಯಿ ಜೋಶಿ ಅವರ 153ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವವನ್ನು ಅರ್ಪಿಸಿದೆ.
ಭಾರತೀಯ ಮೂಲದ ಆನಂದಿ ಗೋಪಾಲ್ ಜೋಶಿ ಅಮೆರಿಕದ ನೆಲದಲ್ಲಿ 2 ವರ್ಷಗಳ ವಿದ್ಯಾಭ್ಯಾಸ (ಡಿಪ್ಲೊಮಾ ಮೆಡಿಸಿನ್ ತರಬೇತಿ) ಪಡೆದ ಭಾರತದ ಪ್ರಥಮ ಮಹಿಳೆಯಾಗಿದ್ದರು.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಲ್ಲಿ 1865ರಂದು ಆನಂದಿ ಜನಿಸಿದ್ದರು. ಇವರ ಹುಟ್ಟು ಹೆಸರು ಯಮುನಾ. ಈಕೆಯ ಪೋಷಕರು ಕಲ್ಯಾಣ್ ನಲ್ಲಿ ಭೂಮಾಲೀಕರಾಗಿದ್ದರು. ಆದರೆ ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗಿದ್ದರು.
ಯಮುನಾ(ಆನಂದಿ) ಅವರು 9ನೇ ವಯಸ್ಸಿಗೆ ಗೋಪಾಲ್ ರಾವ್ ಜೋಶಿ ಅವರ ಜತೆ ಹಸೆಮಣೆ ಏರಿದ್ದರು. ರಾವ್ ವಯಸ್ಸಿನಲ್ಲಿ ಆನಂದಿಗಿಂತ 20 ವರ್ಷ ಹಿರಿಯವರಾಗಿದ್ದರು. ಮದುವೆ ಬಳಿಕ ಪತಿ, ಯಮುನಾ ಹೆಸರನ್ನು ಆನಂದಿ ಎಂಬುದಾಗಿ ಬದಲಾಯಿಸಿದ್ದರು. ಗೋಪಾಲ್ ರಾವ್ ಕಲ್ಯಾಣ್ ಅಂಚೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದಿಬಾಯಿ 14ನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಸಮರ್ಪಕ ಚಿಕಿತ್ಸೆಯ ಕೊರತೆಯಿಂದಾಗಿ ಮಗು 10 ದಿನಗಳ ಕಾಲ ಮಾತ್ರ ಬದುಕಿತ್ತು.
ಈ ಘಟನೆಯೇ ಆನಂದಿಬಾಯಿ ಜೀನವದ ಪ್ರಮುಖ ತಿರುವಿಗೆ ಕಾರಣವಾಗುತ್ತದೆ. ತಾನು ವೈದ್ಯಳಾಗಬೇಕೆಂಬ ಕನಸು ಕಾಣುತ್ತಾರೆ. ಈ ಹಿನ್ನೆಲೆಯಲ್ಲಿ 1880ರಲ್ಲಿ ವೈದ್ಯ ಶಿಕ್ಷಣಕ್ಕಾಗಿ ಪತ್ನಿಗೆ ಗೋಪಾಲ್ ರಾವ್ ಪ್ರೋತ್ಸಾಹ ನೀಡುತ್ತಾರೆ.
ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಿದರು. ಆಗ ಆಕೆಗೆ 19ವರ್ಷ, ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೃತ್ತಿ ಪ್ರಾರಂಭಿಸಿದ್ದರು. ವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿ ಕ್ಷಯರೋಗಕ್ಕೆ ತುತ್ತಾಗಿ 22ನೇ ವಯಸ್ಸಿನಲ್ಲಿ ಆನಂದಿಬಾಯಿ 1887ರಲ್ಲಿ ಸಾವನ್ನಪ್ಪಿದ್ದರು.