ಹುಬ್ಬಳ್ಳಿ: ಪೆಟ್ರೋಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ ನಾಲ್ಕು ವ್ಯಾಗನ್‌ಗಳು ಹಳಿ ತಪ್ಪಿದ ಘಟನೆ ಇಲ್ಲಿನ ರೈಲ್ವೆ ಯಾರ್ಡ್ ಬಳಿ ಮಂಗಳವಾರ ನಡೆದಿದ್ದು, ಇದರಿಂದ ಅನೇಕ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿ, ಪ್ರಯಾಣಿಕರು ಪರದಾಡಬೇಕಾಯಿತು.
ಹಾಸನದಿಂದ ಧಾರವಾಡ ಬಳಿಯ ನವಲೂರದ ಬಿಟಿಪಿಎನ್ ಗೆ ಪೆಟ್ರೋಲ್ ಸಾಗಿಸುತ್ತಿದ್ದ ಸರಕು ಸಾಗಣೆ ರೈಲಿನ ವ್ಯಾಗನ್‌ಗಳು ಬೆಳಗ್ಗೆ 11:10 ಗಂಟೆ ಸುಮಾರಿಗೆ ಇಲ್ಲಿನ ರೈಲ್ವೆ ನಿಲ್ದಾಣದ ದಕ್ಷಿಣ ಯಾರ್ಡ್ ಬಳಿ ಹಳಿ ತಪ್ಪಿವೆ. ಇದರಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ಸಮೀಪದ ರೈಲ್ವೆ ನಿಲ್ದಾಣಗಳಿಂದ ಪ್ರಯಾಣಿಕರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ವ್ಯಾಗನ್‌ಗಳು ಹಳಿ ತಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ತಂಡದವರು ತಕ್ಷಣ ತೆರವು ಕಾರ್ಯಾಚರಣೆಯ ಉಪಕರಣಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಹಳಿ ತಪ್ಪಿ ಬಿದ್ದಿದ್ದ ವ್ಯಾಗನ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಈ ಮಾರ್ಗವಾಗಿ ಸಂಚರಿಸುತ್ತಿದ್ದ ರೈಲುಗಳನ್ನೆಲ್ಲ ಕುಂದಗೋಳ, ಅಣ್ಣಿಗೇರಿ ಹಾಗೂ ಕುಸುಗಲ್ಲ ಬಳಿ ತಡೆಹಿಡಿಯಲಾಯಿತು. ಪ್ರಯಾಣಿಕರನ್ನು ಸುಮಾರು 25 ಬಸ್ ಗಳಲ್ಲಿ ಕುಂದಗೋಳ, ಅಣ್ಣಿಗೇರಿ, ಕುಸುಗಲ್ಲನಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಕುಂದಗೋಳ, ಅಣ್ಣಿಗೇರಿ, ಕುಸುಗಲ್ಲಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿತು.
ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿ.ಬಿ. ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ ಮೋಹನ, ಪ್ರಧಾನ ಮುಖ್ಯ ಕಾರ್ಯನಿರ್ವಹಣಾ ವ್ಯವಸ್ಥಾಪಕ ಜಿ.ಜೆ. ಪ್ರಸಾದ, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಕೆ. ಶಿವ ಪ್ರಸಾದ, ಮುಖ್ಯ ರೋಲಿಂಗ್ ಸ್ಟಾಕ್ ಇಂಜನಿಯರ್ ಟಿ. ಸುಬ್ಟಾ ರಾವ್ ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿಕೊಟ್ಟರು. ಗೂಡ್ಸ್ ರೈಲಿನ ವ್ಯಾಗನ್‌ಗಳು ಹಳಿ ತಪ್ಪಲು ಕಾರಣ ಏನೆಂಬುದರ ಕುರಿತು ತನಿಖೆಗೆ ವಿಚಾರಣಾ ಸಮಿತಿ ರಚಿಸಲಾಗಿದೆ.
ಮಾರ್ಗ ಬದಲು
ವಾಸ್ಕೋ ಡ ಗಾಮಾ-ಹೌರಾ (18048) ರೈಲನ್ನು ಹುಬ್ಬಳ್ಳಿ-ಕುಸುಗಲ್ಲ ಮಾರ್ಗ ಬದಲಿಸಿ, ಹುಬ್ಬಳ್ಳಿ ದಕ್ಷಿಣ ಬೈಪಾಸ್ ಕುಸುಗಲ್ಲದಿಂದ ಗದಗ ಕಡೆಗೆ ಹಾಗೂ ಮನುಗುರು-ಛತ್ರಪತಿ ಸಾಹು ಮಹಾರಾಜ ಟರ್ಮಿನಲ್ ಎಕ್ಸ್‌ಪ್ರೆಸ್ (11303) ರೈಲನ್ನು ಕುಸುಗಲ್ಲ-ಹುಬ್ಬಳ್ಳಿ ಬದಲು ವಾಯಾ ಕುಸುಗಲ್ಲ-ಹುಬ್ಬಳ್ಳಿ ದಕ್ಷಿಣ ಮುಖಾಂತರ ಸಂಚಾರಕ್ಕೆ ಅನುವು ಮಾಡಲಾಯಿತು.
ಸಹಾಯವಾಣಿ ಕೌಂಟರ್ ಸ್ಥಾಪನೆ
ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ನಡೆಯುತ್ತಿದ್ದಂತೆ ಪ್ರಯಾಣಿಕರಿಗೆ ರೈಲುಗಳ ಕುರಿತು ಮಾಹಿತಿ ತಿಳಿಸುವ ಸಲುವಾಗಿ, ವಿಚಾರಣೆಗಾಗಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಹಾಯವಾಣಿ ಡೆಸ್ಕ್ಗಳನ್ನು ತೆರೆದು ಅನುಕೂಲ ಕಲ್ಪಿಸಲಾಯಿತು. ಜೊತೆಗೆ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.