Advertisement

ಕೊಂಡಿ ಕಳಚಿ ಹಳಿಯಲ್ಲೇ ಬಾಕಿಯಾದ ಗೂಡ್ಸ್‌ ರೈಲು 

12:05 PM May 26, 2017 | Team Udayavani |

ಪಡುಬಿದ್ರಿ: ಎರ್ಮಾಳು-ಅದಮಾರು ರೈಲ್ವೇ ಕ್ರಾಸಿಂಗ್‌ ಬಳಿ ಮುಂಬಯಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಗೂಡ್ಸ್‌ ರೈಲಿನ ಕೊಂಡಿ ಕಳಚಿಕೊಂಡಿದ್ದರಿಂದ ಗುರುವಾರ ರಾತ್ರಿ ಕೊಂಕಣ ರೈಲು ಮಾರ್ಗದಲ್ಲಿ ಸುಮಾರು ಎರಡು ಗಂಟೆ ಸಮಯ ರೈಲು ಸಂಚಾರಗಳಲ್ಲಿ ವ್ಯತ್ಯಯ ಉಂಟಾಯಿತು.

Advertisement

ಮೇ 25ರ ರಾತ್ರಿ 8.15ರ ವೇಳೆಗೆ ಸಾಗುತ್ತಿದ್ದ ಗೂಡ್ಸ್‌ ರೈಲಿನ ಕೊಂಡಿ ಕಳಚಿಕೊಂಡು ಕೆಲವು ಬೋಗಿಗಳು ಅದಮಾರು ರೈಲ್ವೇ ಕ್ರಾಸಿಂಗ್‌ ದಾಟಿ ಹೋದವು. ಸುಮಾರು 40 ಬೋಗಿಗಳಲ್ಲಿ 7 ಬೋಗಿಗಳು ಮಾತ್ರ ಮುಂದಕ್ಕೆ ಹೋಗಿದ್ದವು. ಉಳಿದವು ಅಲ್ಲಿಯೇ ಬಾಕಿ ಆದವು. 

ರೈಲಿನ ಬೋಗಿ ಕಳಚಿಕೊಂಡಿದ್ದು ಕೂಡಲೇ ರೈಲಿನ ಸಿಬಂದಿಗೆ ಗೊತ್ತಾಗಿದ್ದು ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ರೈಲುಗಳ ಸಂಚಾರವನ್ನು ನಿಲ್ಲಿಸಿದರು. ಅನಂತರ ಮಂಗಳೂರಿನಿಂದ ರೈಲು ಎಂಜಿನ್‌ ತರಿಸಿ ಅದಕ್ಕೆ ಉಳಿದ ಬೋಗಿಗಳನ್ನು ಜೋಡಿಸಿ ರಾತ್ರಿ 10.20ರ ವೇಳೆ ಸಂಚಾರ ಮುಂದುವರಿಸಿತು.

ಗೂಡ್ಸ್‌ ರೈಲು ಸಂಚರಿಸಿದ ಬಳಿಕ ಅಲ್ಲಿದ್ದ ಸಿಬಂದಿ ರೈಲು ಹಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ದೃಢಪಡಿಸಿ ಮೇಲಿನ ಅಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ನೀಡಿದರು.

ಸಂಚಾರ ಪುನರಾರಂಭ
ಗೂಡ್ಸ್‌ ರೈಲಿನ ಬಾಕಿಯಾಗಿದ್ದ ಬೋಗಿಗಳನ್ನು ಸಾಗಿಸಿದ ಬಳಿಕ ರಾತ್ರಿ 10.30ಕ್ಕೆ ರೈಲು ಸಂಚಾರ ಪುನರಾರಂಭಗೊಂಡಿತು. ಮಡಗಾಂವ್‌-ಮಂಗಳೂರು ನಡುವಿನ ಇಂಟರ್‌ಸಿಟಿ ರೈಲನ್ನು ಪಡುಬಿದ್ರಿ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಅಲ್ಲಿಂದ ಸಂಚಾರ ಪುನರಾರಂಭಿಸಿತು. ಅನಂತರ ಇತರ ರೈಲುಗಳ ಓಡಾಟಕ್ಕೂ ಅನುವು ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಹಳಿ ದ್ವಿಗುಣಕ್ಕೆ ಆಗ್ರಹ
ಕೊಂಕಣ ರೈಲ್ವೇಯ ಹೆಚ್ಚಿನ ಭಾಗಗಳಲ್ಲಿ ಸಿಂಗಲ್‌ ಲೈನ್‌ ಮಾತ್ರ ಇದ್ದು, ಪ್ರಸ್ತುತ ಹೆಚ್ಚಿನ ಸಂಖ್ಯೆಯ ರೈಲುಗಳು ಓಡಾಡುತ್ತಿರುವುದರಿಂದ ಹಳಿಯನ್ನು ದ್ವಿಗುಣಗೊಳಿಸಬೇಕು. ಕೈಗಾರಿಕೆಗಳು ಇರುವುದರಿಂದ ನಂದಿಕೂರು-ಪಡುಬಿದ್ರಿ ನಡುವೆ ದ್ವಿಪಥ ತುರ್ತು ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೈಲೂ ಬಂದ್‌, ರೋಡೂ ಬಂದ್‌
ರೈಲ್ವೇ ಕ್ರಾಸಿಂಗ್‌ ಬಳಿಯೇ ಗೂಡ್ಸ್‌ ರೈಲಿನ ಕೊಂಡಿ ಕಳಚಿಕೊಂಡಿದ್ದರಿಂದ ಒಮ್ಮೆ ಬಂದ್‌ ಆದ ಗೇಟ್‌ ಮತ್ತೆ ತೆರವು ಆಗಲೇ ಇಲ್ಲ. ಗೇಟ್‌ ಬೀಳುವುದು ಮತ್ತು ತೆರೆಯುವುದು ಸ್ವಯಂ ಚಾಲಿತ ಆಗಿದ್ದರಿಂದ ಎಲ್ಲ ಬೋಗಿಗಳು ಸಾಗದೆ ಮತ್ತೆ ಗೇಟ್‌ ಓಪನ್‌ ಆಗುವುದಿಲ್ಲ. ಇದಕ್ಕೆ ನಾವು ಏನೂ ಮಾಡುವಂತಿಲ್ಲ ಎಂದು ರೈಲ್ವೇ ಸಿಬಂದಿ ತಮ್ಮ ಅಸಹಾಯಕತೆ ತೋರಿದರು. ಇದರಿಂದಾಗಿ ಸುಮಾರು ಎರಡು ಗಂಟೆ ಸಮಯ ಒಂದೆಡೆ ರೈಲು ಸಂಚಾರ ಬಂದ್‌ ಆದರೆ ಇನ್ನೊಂದೆಡೆ ಇಲ್ಲಿ ವಾಹನ ಸಂಚಾರ ಕೂಡ ಬಂದ್‌ ಆಯಿತು. ರಾತ್ರಿಯಾದುದರಿಂದ ಬಸ್‌ ಸಂಚಾರ ಇರಲಿಲ್ಲ. ಬದಲಾಗಿ ಹಲವು ಖಾಸಗಿ ವಾಹನಗಳು ಸಾಲುಗಟ್ಟಿ ನಿಂತವು.
 

Advertisement

Udayavani is now on Telegram. Click here to join our channel and stay updated with the latest news.

Next