Advertisement
ಐಎಸ್ ಚುಂಬಿಸುವ ಮುನ್ನವಿಜಯಪುರದ ಈ ಟೆಕ್ಕಿ, ಕೆಲ ವರ್ಷಗಳ ಹಿಂದೆ ಸಾಫ್ಟ್ವೇರ್ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅವನನ್ನು ವಿಚಿತ್ರವಾಗಿ ನೋಡಿದವರು ಹಲವರು. ರಾಜಿನಾಮೆ ಪತ್ರದಲ್ಲಿ ನೀಡಿದ್ದ ಕಾರಣ ನೋಡಿ ಆತನನ್ನು ಹುಂಬನೆಂದುಕೊಂಡವರೂ ಇದ್ದರು. ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ನಾಲ್ಕನೇ ಬಾರಿ 307ನೇ ರ್‍ಯಾಂಕು ಪಡೆದ ಆ ಟೆಕ್ಕಿ, ಗಿರೀಶ್ ಕಲಗೊಂಡ್. ಉನ್ನತ ಗುರಿಗಾಗಿ ಐಟಿ ಕೆಲಸ ಬಿಡುವಾಗ ಬರೆದ ರಾಜಿನಾಮೆ ಪತ್ರ ಎಂಥವರಿಗೂ ಸ್ಫೂರ್ತಿ…
ಮಾಹಿತಿ ತಂತ್ರಜ್ಞಾನ ಜಗತ್ತಿನ ಒಳ ಹೊರಗನ್ನು ನನಗೆ ಅರ್ಥ ಮಾಡಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ. ತುಂಬಾ ಸಮಯದ ಹಿಂದೆ ನನ್ನದೊಂದು ಕನಸಿತ್ತು. ಅದರಿಂದ ತಾತ್ಕಾಲಿಕವಾಗಿ ದೂರವಿದ್ದೆ. ಈಗ ಆ ಕನಸನ್ನು ಬೆನ್ನಟ್ಟುವ ಸಮಯ ಬಂದಿದೆ. ನನ್ನ 2 ವರ್ಷಗಳ ಐಟಿ ಕ್ಷೇತ್ರದ ಅನುಭವ, ತಾಂತ್ರಿಕ ವಿಷಯಗಳನ್ನಷ್ಟೇ ಅಲ್ಲ, ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನೂ ಕಲಿಸಿದೆ. ಮುಂಬರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅವು ಸಹಕಾರಿಯಾಗಲಿವೆ. ಪತ್ರಿಕೆಗಳಲ್ಲಿ ಯುವಭಾರತದ ಸಾಮರ್ಥ್ಯದ ಕುರಿತೆಲ್ಲಾ ಓದುವಾಗ ನನ್ನಲ್ಲಿ, ನನಗೆ ನಂಬಿಕೆ ಹೆಚ್ಚುತ್ತಿತ್ತು. ಕನಸನ್ನು ತಲುಪಿಯೇ ತೀರುತ್ತೇನೆ ಎನ್ನುವ ಉತ್ಸಾಹ ಇಮ್ಮಡಿಸುತ್ತಿತ್ತು. ಆಧುನಿಕ ಭಾರತದ ಗತಿಯನ್ನು ಬದಲಾಯಿಸಿದ ಶ್ರೇಯ ಮನಮೋಹನ್ ಸಿಂಗ್ ಮತ್ತು ಪಿ.ವಿ. ನರಸಿಂಹರಾವ್ ಅವರುಗಳಿಗೆ ಸಲ್ಲುತ್ತದೆ. ಅದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು. 92ರಲ್ಲಿ ಅವರು ಬಿತ್ತಿದ ಬಂಡವಾಳಶಾಹಿ ಆರ್ಥಿಕ ಸುಧಾರಣಾ ನೀತಿಗಳ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ನಮ್ಮ ದೇಶದ ಆರ್ಥಿಕತೆ ಮತ್ತು ಕೈಗಾರಿಕಾ ಕ್ಷೇತ್ರ ಎರಡೂ ಒಂದಕ್ಕೊಂದು ಪೂರಕ ಎಂದು ನಾನು ನಂಬುತ್ತೇನೆ. ಕೈಗಾರಿಕೆಗಳು ಬೆಳವಣಿಗೆ ಹೊಂದಿದರೆ ನಮ್ಮ ಆರ್ಥಿಕತೆ ಬಲಗೊಳ್ಳುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನನ್ನೆಲ್ಲಾ ವಿಚಾರಧಾರೆಗಳ ಕೇಂದ್ರಬಿಂದು ಅದೇ. ಅವ್ಯಾವುದನ್ನೂ ವಿದ್ಯಾರ್ಥಿ ಜೀವನ ಕಲಿಸಲಿಲ್ಲ. ನಾವೆಲ್ಲರೂ ಮೆಕಾಲೆ ಶಿಕ್ಷಣ ಪದ್ಧತಿಯ ಬಲಿಪಶುಗಳಾಗಿದ್ದೇವೆ. ಅದರಿಂದ ಹೊರಬಂದು ನನ್ನ ಮುಂದಿನ ಭವಿಷ್ಯಕ್ಕೆ ಭದ್ರ ತಳಪಾಯವನ್ನು ನಾನೀಗಾಗಲೇ ಹಾಕಿಕೊಳ್ಳುತ್ತಿದ್ದೇನೆ.
Related Articles
Advertisement
ಎಲ್ಲಿ ಭಯ ಇರುವುದಿಲ್ಲವೋ, ತಲೆ ಎತ್ತಿ ನಡೆಯುವೆವೋಎಲ್ಲಿ ಜ್ಞಾನ ಉಚಿತವೋ
ಎಲ್ಲಿ ಪ್ರಪಂಚ ಗೋಡೆಗಳಿಂದ ತುಂಡುಗಳಾಗಿ ಹಂಚಿಹೋಗಿಲ್ಲವೋ
ಎಲ್ಲಿ ಮಾತುಗಳು ಸತ್ಯದ ಗರ್ಭದಿಂದ ಹೊರಬರುವುದೋ
ಎಲ್ಲಿ ನಿಮಿತ್ತವೆಂಬ ತೊರೆ ದಾರಿತಪ್ಪದೆ ಮರುಭೂಮಿಯನ್ನು ಹಾಯುವುದೋ
ಎಲ್ಲಿ ಮನ ನಮ್ಮ ಕೈ ಹಿಡಿದು ಮುನ್ನಡೆಸುವುದೋ
ಆ ವಿಶಾಲ ಚಿಂತನೆಯತ್ತ
ಆ ಬಿಡುಗಡೆಯೆಂಬ ಸಗ್ಗದತ್ತ, ಓ ತಂದೆಯೇ ,ನನ್ನ ದೇಶ ಜಾಗೃತವಾಗಲಿ ರವೀಂದ್ರನಾಥ ಟಾಗೋರರು ತಮ್ಮ ಮೇಲಿನ ಪದ್ಯದಲ್ಲಿ ಕಟ್ಟಿರುವ ದೇಶದ ಕುರಿತ “ಭವ್ಯ ಕನಸು’ ಮತ್ತು “ಉದಾತ್ತ ಚಿಂತನೆ’ ಮೇಲೆ ನಂಬಿಕೆ ಇಟ್ಟು, ಎಲ್ಲರೂ ತಂತಮ್ಮ ಗಮ್ಯ ಸೇರುವಂತಾಗಲಿ ಎಂದು ಹಾರೈಸುತ್ತಾ ಈ ಪತ್ರವನ್ನು ಕೊನೆಗೊಳಿಸುತ್ತಿದ್ದೇನೆ. ನೀವೆಲ್ಲರೂ ವೃತ್ತಿಬದುಕಿನಲ್ಲಿ ಕೀರ್ತಿ ಶಿಖರವನ್ನು ಏರುವಂತಾಗಲಿ. ಶಿವ ನಮ್ಮೆಲ್ಲರನ್ನೂ ಹರಸಲಿ.
ಜೈ ಹಿಂದ್!
ನಿಮ್ಮವ
ಗಿರೀಶ್ ಕಲಗೊಂಡ್ ಆ್ಯಪಲ್ ಭವಿಷ್ಯ ಉಜ್ವಲವಾಗಿದೆ
ಆ್ಯಪಲ್ ಎಂಬ ಜಗತ್ಪ್ರಸಿದ್ಧ ಸಂಸ್ಥೆಯನ್ನು ಸ್ಥಾಪಿಸಿದ ಸ್ಟೀವ್ ಜಾಬ್ಸ್ ಅನ್ನು 1985ರಲ್ಲಿ ಆಡಳಿತ ಮಂಡಳಿ ಕೆಲಸದಿಂದ ಹೊರಹಾಕಿತ್ತು. ಆದರೆ, ಹೊರಹಾಕಿದವರೇ ಆರತಿ ಎತ್ತಿ ಸ್ವಾಗತಿಸುವ ಪರಿಸ್ಥಿತಿ ಬಂದಿತ್ತು. ಇಲ್ಲಿರುವುದು ಅನಾರೋಗ್ಯದ ಕಾರಣದಿಂದ ನಿವೃತ್ತಿ ಪಡೆಯಬೇಕಾಗಿ ಬಂದಾಗ ಸ್ಟೀವ್ ಜಾಬ್ಸ್, ಸಂಸ್ಥೆಗೆ ಬರೆದ ಎರಡನೇ ರಾಜೀನಾಮೆ ಪತ್ರ… ನಿರ್ದೇಶಕ ಮಂಡಳಿ ಮತ್ತು ಆ್ಯಪಲ್ ಸಮುದಾಯದವರಿಗೆ ನಮಸ್ಕಾರ,
ನಾನು ಯಾವತ್ತಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಆ್ಯಪಲ್ ಸಂಸ್ಥೆಯ ಸಿಇಓ ಆಗಿ ಕರ್ತವ್ಯಗಳನ್ನು, ನಿರೀಕ್ಷೆಗಳನ್ನು ನಿರ್ವಹಿಸಲು ಸಾಧ್ಯವಾಗದ ದಿನ ಯಾವಾಗ ಬರುತ್ತದೆಯೋ, ಆವತ್ತು ಖುದ್ದು ನಾನೇ ನಿಮ್ಮಲ್ಲಿ ಅದನ್ನು ಹೇಳಿಬಿಡುತ್ತೇನೆಂದು. ದುರಾದೃಷ್ಟವೆಂದರೆ ಆ ದಿನ ಬಂದಿದೆ.
ನಿಮ್ಮವ
ಸ್ಟೀವ್ ಜಾಬ್ಸ್ ಪಾಠ ಮತ್ತು ಆಟಕ್ಕಾಗಿ
ಮೈಕ್ರೋಸಾಫ್ಟ್ ಸಂಸ್ಥೆಯನ್ನು ಬಿಲ್ ಗೇಟ್ಸ್ ಜೊತೆ ಸೇರಿ ಹುಟ್ಟುಹಾಕಿದ, ಗೇಟ್ಸ್ ನಂತರ ಸಿಇಓ ಪದವಿ ವಹಿಸಿಕೊಂಡ, ಒಟ್ಟು 34 ವರ್ಷಗಳನ್ನು ಅಲ್ಲಿ ಸವೆಸಿದ ಸ್ಟೀವ್ ಬಾಲ್ಮರ್ ಬಾಸ್ಕೆಟ್‌ಬಾಲ್ ತಂಡವನ್ನು ಪೋಷಿಸಲು ಮತ್ತು ಶಿಕ್ಷಕನಾಗಲು ಹೊರಟಾಗ ಬರೆದ ವಿದಾಯ ಪತ್ರ ಇಲ್ಲಿದೆ… ಇದು ಸಂಸ್ಥೆಯ ಹಾಲಿ ಸಿಇಓ, ಭಾರತೀಯ ಸತ್ಯ ನಾದೆಲ್ಲಾ ಅವರಿಗೆ ಬರೆದದ್ದು… ಡಿಯರ್ ಸತ್ಯ,
ನನ್ನ ಬದುಕಿನ ಪುಟಗಳನ್ನು ತಿರುವಿ ನೋಡುವ ಸಮಯ ಸನ್ನಿಹಿತವಾಗಿದೆ.. ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿರುವ ನನ್ನ ಶೇರುಗಳು, ಸಂಸ್ಥೆ ಜೊತೆಗಿನ ಭಾಗಿದಾರಿಕೆ ಮತ್ತಿತರ ಸಂಗತಿಗಳತ್ತ ನಾನು ಗಮನ ಹರಿಸಬೇಕಾಗಿ ಬಂದಿದೆ. ಈ ಕುರಿತಾಗಿ ನಾನು ನಿರ್ಧಾರವೊಂದಕ್ಕೆ ಬಂದಿದ್ದೇನೆ. ಅದನ್ನು ನಿನ್ನಲ್ಲಿ ಹಂಚಿಕೊಳ್ಳಬಯಸುತ್ತೇನೆ. ಆಗಸ್ಟ್ ತಿಂಗಳು ಕಂಪನಿಗೆ ಬಹಳ ತುರ್ತು ಸಮಯ. ಆಡಳಿತ ಮಂಡಳಿ ಬಹಳ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವ ತಿಂಗಳಿದು. ನಾನು ಹೇಳಬೇಕೆಂದಿರುವ ವಿಚಾರವನ್ನು ಹಂಚಿಕೊಳ್ಳಲು ಇದೇ ಪ್ರಶಸ್ತವಾದ ಸಮಯ ಎನ್ನುವುದು ನನ್ನ ಭಾವನೆ.
ಸ್ಟೀವ್ ಬಾಲ್ಮರ್ ಸವಿ ಸವಿ ನೆನಪು
ತನಗೆ ಸಿಹಿ ನೆನಪುಗಳನ್ನೇ ಕೊಟ್ಟ ಸಂಸ್ಥೆಗೆ ವಿದಾಯ ಹೇಳುವಾಗ ನೀಲ್ ಬೆರೆಟ್ ಎಂಬ ಆಸಾಮಿ ಸಿಹಿ ಸಿಹಿ ಕೇಕಿನಲ್ಲಿ ವಿದಾಯ ಪತ್ರವನ್ನು ಬರೆದ… ಪ್ರೀತಿಯ ಬೋವರ್,
ಕಳೆದ ಮೂರು ವರ್ಷಗಳಿಂದ ನಿಮ್ಮ ಜೊತೆ ಹಂಟರ್ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿ ಬಹಳ ಆನಂದದಾಯಕವಾಗಿತ್ತು ಎಂದು ಹೇಳಲು ನಾನು ಇಚ್ಛಿಸುತ್ತೇನೆ. ಈಗ ನಾನು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಜೊತೆಗೆ ಅನಾರೋಗ್ಯ ಎದುರಾಗಿರುವುದರಿಂದ ದೀರ್ಘ ಕಾಲ ಚಿಕಿತ್ಸೆ ಪಡೆದುಕೊಳ್ಳಬೇಕೆಂದುಕೊಂಡಿದ್ದೇನೆ. ಒಂದು ಉತ್ತಮ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ನನಗಿಲ್ಲಿ ಸಿಕ್ಕಿದೆ. ನಿಮ್ಮ ನಾಳೆಗಳು ಉಜ್ವಲವಾಗಿರಲಿವೆ ಎಂಬ ನಂಬಿಕೆ ನನಗಿದೆ.
ನೀಲ್ ಬೆರೆಟ್ – ಹರ್ಷವರ್ಧನ್ ಸುಳ್ಯ