Advertisement

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ

11:01 PM Jun 03, 2020 | Sriram |

ಉಡುಪಿ: ಮುಂಗಾರು ವಿನಲ್ಲಿ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರು ವೈಜ್ಞಾನಿಕ ಉತ್ತಮ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ. ರೈತರು ಯಾವ ತಂತ್ರಜ್ಞಾನದ ಶಿಫಾರಸನ್ನು ಆಯ್ಕೆ ಮಾಡಬೇಕು ಮತ್ತು ಯಾವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಯ್ಕೆಯಿಂದ ಹೆಚ್ಚಿನ ಇಳುವರಿ ಗಳಿಸಬಹುದು ಎನ್ನುವ ಪ್ರಶ್ನೆಗಳಿಗೆ ಕೃಷಿ ವಿಜ್ಞಾನಿಗಳು ಕೆಲ ಸಲಹೆ ನೀಡಿದ್ದಾರೆ.

Advertisement

ಬೆಳೆ ಪದ್ಧತಿ ಪರಿಗಣನೆ
ನಿರಂತರವಾಗಿ ಏಕ ಬೆಳೆ ಪದ್ಧತಿಯಲ್ಲಿ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಫ‌ಲವತ್ತತೆ ನಾಶವಾಗುತ್ತದೆ ಬೆಳೆ ಅನುಕ್ರಮ (ಏಕದಳ-ದ್ವಿದಳ ಎಣ್ಣೆಕಾಳು ಈ ರೀತಿ) ಅನುಸರಿಸುವುದರಿಂದ ನೀರು ಮತ್ತು ಪೋಷಕಾಂಶಗಳ ಬಳಕೆಯನ್ನು ಉತ್ತಮಗೊಳಿಸಿ, ರೋಗ ಮತ್ತು ಕಳೆ ಸಮಸ್ಯೆ ಕಡಿಮೆ ಮಾಡಿ, ಪ್ರತಿ ಎಕ್ರೆಗೆ ಹೆಚ್ಚು ಲಾಭವನ್ನು ಪಡೆಯಬಹುದು. ಅತ್ಯುತ್ತಮ ಬೆಳೆ ಅನುಕ್ರಮ ಪದ್ಧತಿಯು, ಲಭ್ಯವಿರುವ ತೇವಾಂಶ ಮತ್ತು ಪೋಷಕಾಂಶಗಳು, ಕೀಟಗಳ ಭಾದೆ, ರೋಗಗಳು, ಕಳೆ ಪ್ರಮಾಣ, ಸಸ್ಯ ಬೆಳವಣಿಗೆಯ ದಾಖಲೆ, ಸಲಕರಣೆಗಳ ಲಭ್ಯತೆ, ಸರಕುಗಳ ಬೆಲೆಗಳು ಇವೆ ಲ್ಲವನ್ನು ಗಮನದಲ್ಲಿರಿಸಿಕೊಂಡು ಬೆಳೆ ಪದ್ಧತಿ ಪರಿಗಣನೆ ಮಾಡಬೇಕು.

ಮಾಗಿ ಉಳುಮೆ
ಮಾಡುವುದು
ಬೇಸಗೆಯಲ್ಲಿ ಭೂಮಿಯನ್ನು ಉಳುಮೆ ಮಾಡುವುದರಿಂದ ಮೇಲಿನ ಮಣ್ಣು ಕೆಳಗೆ ಹಾಗೂ ಕೆಳಗಿನ ಮಣ್ಣು ಮೇಲೆ ಬಂದು ಮಣ್ಣಿನಲ್ಲಿರುವ ರೋಗಾಣುಗಳು ಕೀಟನಾಶಕಗಳು ಮತ್ತು ಕಳೆಯ ಬೀಜಗಳು ಬಿಸಿಲಿನ ತಾಪಕ್ಕೆ ಸತ್ತು ಮುಂಬರುವ ಬೆಳೆಗೆ ರೋಗ ಮತ್ತು ಕೀಟ ನಿರ್ವಹಣೆ ಮಾಡುತ್ತದೆ. ಅಕಾಲಿಕವಾಗಿ ಬಿದ್ದ ಮಳೆಯನ್ನು ಭೂಮಿಯಲ್ಲಿ ಸಂಗ್ರಹಿಸಿಡುತ್ತದೆ.

ಬಿತ್ತನೆ ಕ್ಷೇತ್ರವನ್ನು ಸ್ವಚ್ಛವಾಗಿಡುವುದು
ಬಿತ್ತನೆ ಮಾಡುವ ಹೊಲದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆಗಳನ್ನು ನಾಶಪಡಿಸಬೇಕು. ಈ ಕಳೆಗಳು ಮಳೆ ಬಿದ್ದ ತತ್‌ಕ್ಷಣ ತೇವಾಂಶವನ್ನು ಮತ್ತು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಂಡು ಜೀಜಗಳನ್ನು ಉತ್ಪತ್ತಿಸಿ, ಸುಮಾರು ಶೇ. 30 ರಿಂದ 40ರಷ್ಟು ಇಳುವರಿಯನ್ನು ಕಡಿಮೆ ಮಾಡುತ್ತದೆ.

ಉತ್ತಮ ಗುಣಮಟ್ಟದ ಬೀಜ
ರೈತರು ಬೀಜಗಳನ್ನು ಸಾಧಾರಣವಾಗಿ ಮಾರುಕಟ್ಟೆಯಿಂದ ಖರೀದಿ ಮಾಡುವುದು ರೂಢಿಯಾಗಿಸಿಕೊಂಡಿದ್ದಾರೆ. ಬೀಜಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು-ಪ್ರಮಾಣಿಕೃತ ಮತ್ತು ಗುಟ್ಟಮಟ್ಟದ ಬೀಜವೆ ಎಂದು ಮೊದಲು ಸ್ಪಷ್ಟ ಪಡಿಸಿ ಕೊಳ್ಳಬೇಕು. ಇದರಿಂದ ಬೀಜದ ಮೊಳಕೆ ಪ್ರಮಾಣವನ್ನು ಖಾತರಿಪಡಿಸುವುದರ ಜತೆಗೆ ರೋಗ ಮತ್ತು ಕೀಟ ಬಾಧೆಗಳನ್ನು ತಡೆಗಟ್ಟಬಹುದು.

Advertisement

ಮಣ್ಣಿನ ಫ‌ಲವತ್ತತೆ
ಕಾಪಾಡುವುದು
ಭೂಮಿಯಲ್ಲಿ ಬಿತ್ತನೆ ಪೂರ್ವ ಹಸುರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಡಯಾಂಚ, ಹೆಸರು ಇತರ ಬೆಳೆಗಳನ್ನು ಬೆಳೆಯುವುದರಿಂದ ಮತ್ತು ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫ‌ಲವತ್ತತೆ ಹೆಚ್ಚಾಗಿ ಉಪಯೋಗಕಾರಿ ಸೂಕ್ಷ್ಮ ಜೀವಿಗಳ ವೃದ್ಧಿ ಹೆಚ್ಚಾಗಿ ರೋಗಾಣು ಮತ್ತು ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ.

ಮಿಶ್ರ ಬೆಳೆ
ಏಕ ಬೆಳೆ ಪದ್ಧತಿಯಿಂದ ರೋಗ ಮತ್ತು ಕೀಟದ ಭಾದೆ ಹೆಚ್ಚಾಗುತ್ತದೆ. ಅದ್ದರಿಂದ ಮಿಶ್ರಬೆಳೆ ಬೆಳೆಯುವುದು ಉತ್ತಮ ಉದಾ: ಭತ್ತ, ದ್ವೀದಳ ಧಾನ್ಯ ಇತ್ಯಾದಿ ಬೆಳೆಯಬಹುದಾಗಿದೆ.

ರೋಗ ನಿರೋಧಕ ತಳಿಗಳ ಬಳಕೆ
ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಹೆಸರಾಂತ ಖಾಸಗಿ ಕಂಪೆನಿಗಳು ಬಿಡುಗಡೆ ಮಾಡಿರುವ ವಿವಿಧ ಬೆಳೆಗಳ ರೋಗ ನಿರೋಧಕ ತಳಿಗಳನ್ನು ಬಿತ್ತನೆ ಮಾಡುವುದರಿಂದ ರೋಗದ ಹತೋಟಿ ಮಾಡಬಹುದು.

ಬೀಜೋಪಚಾರ ಮಾಡುವುದು
ಯಾವುದೇ ಬೆಳೆಗಳನ್ನು ಬೆಳೆಯುವುದಕ್ಕಿಂತ ಮುಂಚೆ ಕೀಟನಾಶಕ ಅಥವಾ ರೋಗನಾಶಕ ಅಥವಾ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೀಜ ಮತ್ತು ಮಣ್ಣಿನಿಂದ ಹರಡುವ ರೋಗ ಗಳನ್ನು ಮತ್ತು ಕೀಟಗಳನ್ನು ಕಡಿಮೆ ಮಾಡಬಹುದು.

ನೀರು ನಿರ್ವಹಣೆ ಮಾಡುವುದು
ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಕೊಡುವುದರಿಂದ ಉತ್ತಮ ಇಳುವರಿ ಪಡೆಯುವುದಲ್ಲದೆ ರೋಗ ಭಾದೆ ಕಡಿಮೆ ಮಾಡಬಹುದು.

ಸಸ್ಯ ಜನ್ಯ ಪೀಡೆ ನಾಶಕಗಳ ಬಳಕೆ
ಬೇವಿನ ಎಣ್ಣೆ, ಹೊಂಗೆ ಎಣ್ಣೆ, ಬೇವಿನ ಬೀಜದ ಕಷಾಯ, ಮೆಣಸಿನಕಾಯಿ ಬೆಳ್ಳುಳ್ಳಿ ಕಷಾಯ ಮತ್ತು ವಿವಿಧ ಸಸ್ಯ ಮೂಲಗಳಿಂದ ತಯಾರಿಸಲ್ಪಟ್ಟ ಔಷಧ ಸಿಂಪರಣೆಯಿಂದ ರೋಗ ಮತ್ತು ಕೀಟಗಳನ್ನು ತಡೆಗಟ್ಟಬಹುದು.

ಕೀಟಗಳ ಹತೋಟಿ
ಟ್ರೈಕೋಗ್ರಾಮಾ, ಗುಲಗಂಜಿ ಹುಳ, ಹೇನು ಸಿಂಹ ಇತ್ಯಾದಿ ಬಳಕೆಯಿಂದ ಬೆಳೆಗಳಿಗೆ ಬರುವ ಹಾನಿಕಾರಕ ಕೀಟಗಳನ್ನು ನಿಯಂತ್ರಿಸಬಹುದು. ಸಾಂಪ್ರದಾಯಕವಾಗಿ ಆಳವಡಿಸಿಕೊಂಡಿರುವ ಗೋಮೂತ್ರ ಮತ್ತು ಪಂಚಗವ್ಯ ಸಿಂಪಡಣೆಯಿಂದ ಬೆಳೆಗಳ ರೋಗ ಹಾಗೂ ಕೀಟಗಳ ಹತೋಟಿ ಮಾಡುವುದಲ್ಲದೆ ಉತ್ತಮ ಬೆಳೆವಣಿಗೆ ಸಾಧ್ಯ.

ಹತೋಟಿ ಮಾಡಬಹುದು
ಮುಂಗಾರು ಪೂರ್ವದಲ್ಲಿ ಉತ್ತಮ ಇಳುವರಿ ತೆಗೆಯಲು ಪರಿಣಾಮಕಾರಿ ಕೆಲ ಸೂತ್ರಗಳನ್ನು ರೈತರು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಿದೆ. ಬೆಳೆಗಳಿಗೆ ತಕ್ಕಂತೆ ಸೂಕ್ತ ಸಮಯದಲ್ಲಿ ಬಿತ್ತನೆ ಮಾಡುವುದರಿಂದ ರೋಗ ಮತ್ತು ಕೀಟಗಳ ಹತೋಟಿ ಮಾಡಬಹುದು.
-ಡಾ| ಎನ್‌. ನವೀನ,
ವಿಜ್ಞಾನಿ(ಬೇಸಾಯಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ.

ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಮಾಡಬೇಕಾದ ಸುಧಾರಿತ ಬೇಸಾಯ ಕ್ರಮಗಳು ಈ ರೀತಿ ಇದೆ.
1. ಬೆಳೆ ಪದ್ಧತಿ ಪರಿಗಣನೆ. 2. ಭೂಮಿ ಸಿದ್ದತೆ ಮತ್ತು ಉಳುಮೆ. 3. ಬಿತ್ತನೆ ಕ್ಷೇತ್ರವನ್ನು ಸ್ವತ್ಛವಾಗಿಡುವುದು. 4.ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸುವುದು. 5. ಮಣ್ಣಿನ ಫ‌ಲವತ್ತತೆ ಕಾಪಾಡುವುದು. 6. ಮಿಶ್ರ ಬೆಳೆ ಬೆಳೆಯುವುದು. 7. ರೋಗ ನಿರೋಧಕ ತಳಿಗಳ ಬಳಕೆ. 8. ಬೀಜೋಪಚಾರ ಮಾಡುವುದು. 9. ನೀರು ನಿರ್ವಹಣೆ ಮಾಡುವುದು. 10. ಸಸ್ಯಜನ್ಯ ಪೀಡೆನಾಶಕಗಳ ಬಳಕೆ. 11. ನೈಸರ್ಗಿಕ ಶತ್ರುಗಳ ಬಳಕೆಯಿಂದ ಕೀಟಗಳ ಹತೋಟಿ.

Advertisement

Udayavani is now on Telegram. Click here to join our channel and stay updated with the latest news.

Next