ಇಂಡಿ: ನರೇಗಾ ಯೋಜನೆ ಅಡಿಯಲ್ಲಿ ಹಲವು ವೈಯಕ್ತಿಕ ಮತ್ತು ಸಮುದಾಯಿಕ ಕಾಮಗಾರಿ ಕೈಗೊಂಡು ದುಡಿಯುವ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡುವುದರ ಮೂಲಕ ಗ್ರಾಪಂಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ ಎಂದು ಜಿಪಂ ಸಿಇಒ ಗೋವಿಂದರೆಡ್ಡಿ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ನರೇಗಾ ಯೋಜನೆಯ ಅಡಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ನೂರು ದಿನಗಳ ಉದ್ಯೋಗ ನೀಡಲಾಗುತ್ತಿದ್ದು, ಪುರುಷ ಮತ್ತು ಮಹಿಳೆಗೆ ಸಮಾನ ವೇತನರೂ 299 ನೀಡಲಾಗುತ್ತದೆ ಎಂದರು. ಕೂಲಿಕಾರರೊಂದಿಗೆ ನೇರ ಸಂವಾದ ನಡೆಸಿ ಕೊರೊನಾ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಕೆಲಸ ನಿರ್ವಹಿಸಲು ಸೂಚಿಸಿದರು.
ಕೂಲಿ ಹಣವನ್ನು ಬ್ಯಾಂಕ್ ಮಿತ್ರರ ಸಹಾಯದಿಂದ ಗ್ರಾಮದಲ್ಲಿಯೇ ಪಡೆದುಕೊಳ್ಳುವ ವ್ಯವಸ್ಥೆ ಒದಗಿಸಿಕೊಟ್ಟು ಕೂಲಿಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಿಡಿಒ ಅವರಿಗೆ ಹೇಳಿದರು. ಪಿಡಿಒ ಕಾರ್ಯವೈಖರಿಗೆ ಮೆಚ್ಚುಗೆ: ಮಳೆ ನೀರನ್ನು ಹಿಡಿದಿಟ್ಟು ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳಾದ ಕೃಷಿ ಹೊಂಡ ನಿರ್ಮಾಣ, ಕಂದಕ ಬದು ನಿರ್ಮಾಣ, ಕಾಲುವೆ ಮತ್ತು ಹಳ್ಳದ ಬಾಂದಾರ ಹೂಳೆತ್ತುವ ಕಾಮಗಾರಿ ಕೈಗೊಂಡು, ಬಡ ಕೂಲಿ ಕಾರ್ಮಿಕರಿಗೆ ಕೊರೊನಾ ಸಂದರ್ಭದಲ್ಲಿ ನಿರಂತರ ಕೆಲಸ ನೀಡಿ ನರೇಗಾ ಯೋಜನೆಯನ್ನು ಪಿಡಿಒ ಅವರು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದರು.
ಮಳೆಯಲ್ಲಿ ನೆನೆದ ಅಧಿ ಕಾರಿಗಳು: ಕಾಮಗಾರಿ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯ ತೊಡಗಿತು. ಕೂಲಿ ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿದ ಟೆಂಟ್ ಆಶ್ರಯ ಪಡೆದು ಕೂಲಿ ಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಿ ಕೂಲಿಕಾರರ ಅನಿಸಿಕೆ ಪಡೆದುಕೊಂಡರು. ತಾಲೂಕಿನ ಐಇಸಿ ಸಂಯೋಜಕಿ ಜ್ಞಾನಜ್ಯೋತಿ ಚಾಂದಕವಠೆ ನರೇಗಾ ಯೋಜನೆಯ ಉದ್ದೇಶ ಕುರಿತು ಮಾಹಿತಿ ನೀಡಿ ನರೇಗಾ ಕಾರ್ಮಿಕರಿಗೆ ಕೆಲಸದ ಕಾಲಾವ ಧಿ, ಸರಕಾರ ನೀಡಿರುವ ಅವಕಾಶಗಳು ಅನುಕೂಲತೆಗಳ ಕುರಿತು ಚರ್ಚಿಸಿದರು.
ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ಮಾತನಾಡಿ, ಕೂಲಿ ಕಾರ್ಮಿಕರಿಗೆ ಕೆಲಸದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಕಾಮಗಾರಿಗಳ ಅನುಮೋದನೆ ಪಡೆದು ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಿ ಕೂಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಬೆನಕನಹಳ್ಳಿ ಪಿಡಿಒ ಪಿ.ಎಲ್.ರಾಠೊಡ ಮಾತನಾಡಿ, ಮೇಲಾ ಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಮತ್ತು ಕಾಯಕ ಮಿತ್ರರನ್ನು ಬಳಸಿಕೊಂಡು ಮಹಾತ್ಮಾ ಗಾಂ ಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು. ಜಿಪಂ ತಾಂತ್ರಿಕ ಅಭಿಯಂತರ ಎಸ್.ಎಲ್. ರಾಠೊಡ, ಜಿಪಂ ಅಭಿಯಂತರ ಎಸ್.ಆರ್.ರುದ್ರವಾಡಿ, ಪಿಡಿಒ ಪಿ.ಎಲ್. ರಾಠೊಡ, ತಾಂತ್ರಿಕ ಸಹಾಯಕ ಸುನೀಲ ರಾಠೊಡ, ಬೇರ್ ಫುಟ್ ಟೆಕ್ನಿಷಿಯನ್ ಶಿವಾನಂದ ವರವಂಟಿ, ಗ್ರಾ.ಪಂ ಅಧ್ಯಕ್ಷ ಕಾಶೀನಾಥ ಹಚಡದ, ರಾಯಗೊಂಡ ಅಂಕಲಗಿ ಉಪಸ್ಥಿತರಿದ್ದರು.