Advertisement

ಪೌಷ್ಟಿ ಕತೆಗೆ ಕೋವಿಡ್‌ ಸಹಯೋಗದ ಬುತ್ತಿ

06:13 PM Jun 09, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ ಸಂಕಷ್ಟ ಸಂದರ್ಭದಲ್ಲಿ ಮಕ್ಕಳ ಪೌಷ್ಟಿಕತೆ ಕಾಳಜಿ ತೋರಿದ ದೇಶಪಾಂಡೆ ಫೌಂಡೇಶನ್‌ ಅರ್ಲಿಸ್ಪಾರ್ಕ್‌ ಪ್ರೇರಣೆಯೊಂದಿಗೆ ಫೌಂಡೇಶನ್‌ ಕಾರ್ಯಪಡೆಯ ಕೋವಿಡ್‌ ಸಹಯೋಗ ಕಾರ್ಯಕ್ರಮದಡಿ ಮಕ್ಕಳನ್ನು ಗುರುತಿಸಿ, ಅಂತಹ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್‌ ವಿತರಿಸುತ್ತಿದೆ.

ಆಹಾರ ಕಿಟ್‌ ಗಳ ನೀಡಿಕೆ ಮೊದಲು ಸಮೀಕ್ಷೆ ನಡೆಸಿ ಅಗತ್ಯತೆ ಮನಗಂಡ ನಂತರವೇ ಕಿಟ್‌ಗಳನ್ನು ನೀಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದ ಮಕ್ಕಳ ಪೌಷ್ಟಿಕತೆಯನ್ನು ಗಮನದಲ್ಲಿರಿಸಿಕೊಂಡು, ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಮಕ್ಕಳ ಊಟ-ಪೌಷ್ಟಿಕತೆಗೆ ಕೊರತೆ ಆಗದಂತೆ, ಶಾಲೆ ಆರಂಭ ವೇಳೆ ಮಕ್ಕಳು ಶಿಕ್ಷಣಕ್ಕೆ ಸನ್ನದ್ಧರಾಗುವಂತೆ ನೋಡಿಕೊಳ್ಳಬೇಕೆಂಬ ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ|ಗುರುರಾಜ ದೇಶಪಾಂಡೆ ಅವರ ಸೊಸೆ ಸ್ಮಿತಾ ದೇಶಪಾಂಡೆ ಅಮೆರಿಕದಲ್ಲಿದ್ದು, ಮಕ್ಕಳಲ್ಲಿ ಕಲಿಕಾ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ಅಮೆರಿಕದಲ್ಲಿ ನೀಡುವ ಶಿಕ್ಷಣ ಹಾಗೂ ಕಲಿಕಾ ಮಾದರಿಯನ್ನು ಭಾರತದಲ್ಲಿ ಅಳವಡಿಸಲು ಮುಂದಾಗಿದ್ದಾರೆ.

ಅರ್ಲಿಸ್ಪಾರ್ಕ್‌ ಯೋಜನೆ ಅಡಿಯಲ್ಲಿ ಈಗಾಗಲೇ ಹುಬ್ಬಳ್ಳಿ ಸೇರಿದಂತೆ ವಿವಿಧ ಶಾಲೆಗಳಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಶಾಲೆಯಲ್ಲಿರುವ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಹಾಗೂ ಅರ್ಲಿಸ್ಪಾರ್ಕ್‌ನಿಂದ ತರಬೇತಿದಾರರನ್ನು ಶಾಲೆಗೆ ಕಳುಹಿಸುವ ಮೂಲಕ ಪ್ರಾಥಮಿಕ ಪೂರ್ವ ಶಾಲೆ ಮಕ್ಕಳಲ್ಲಿಯೇ ಭಾಷೆ, ವಿವಿಧ ಕಲಿಕಾ ಕೌಶಲ ವೃದ್ಧಿಸುವ ಕಾರ್ಯ ಮಾಡುತ್ತಿದೆ. ಇದೀಗ ಲಾಕ್‌ ಡೌನ್‌ ಸಂಕಷ್ಟದಲ್ಲಿ ಮಕ್ಕಳ ಪೌಷ್ಟಿಕತೆಗೆ ತೊಂದರೆ ಆಗಬಾರದೆಂದು ಆಹಾರಧಾನ್ಯಗಳ ಕಿಟ್‌ ನೀಡುವ ಕಾರ್ಯಕ್ಕೆ ಸ್ಮಿತಾ ದೇಶಪಾಂಡೆ ಪ್ರೇರಣೆ ನೀಡಿದ್ದಾರೆ.

Advertisement

ಸಮೀಕ್ಷೆ ನಂತರ ಹಂಚಿಕೆ: ಕೋವಿಡ್‌, ಲಾಕ್‌ಡೌನ್‌ ಸಂಕಷ್ಟ ಎಂಬ ಹೆಸರಲ್ಲಿನ ಎಲ್ಲಿ ಬೇಕೋ ಅಲ್ಲಿ ಆಹಾರಧಾನ್ಯಗಳ ಕಿಟ್‌ಗಳನ್ನು ಹಂಚುವ ಕಾರ್ಯ ಮಾಡುತ್ತಿಲ್ಲ. ಕೋವಿಡ್‌ ಸಹಯೋಗ ತಂಡಗಳು ಆಯಾ ಪ್ರದೇಶಕ್ಕೆ ತೆರಳಿ ಮಕ್ಕಳ ಸ್ಥಿತಿಗತಿ, ಕುಟುಂಬದ ಸ್ಥಿತಿ ಕುರಿತಾಗಿ ಅಗತ್ಯ ಮಾಹಿತಿ ಸಂಗ್ರಹಿಸುತ್ತದೆ. ನೀಡಿದ ಆಹಾರಧಾನ್ಯಗಳ ಕಿಟ್‌ ಸಮರ್ಪಕ ಬಳಕೆ ಆಗುತ್ತದೆಯೋ, ಇದರಿಂದ ಮಕ್ಕಳಿಗೆ ಸಹಾಯವಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವೇ ಆಹಾರಧಾನ್ಯ ಕಿಟ್‌ ನೀಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದ ವಿವಿಧ ಕಡೆಗಳಲ್ಲಿ ಸಮೀಕ್ಷೆ ಕೈಗೊಂಡ ತಂಡ ಸುಮಾರು 1,000ಕ್ಕೂ ಅಧಿ ಕ ಕುಟುಂಬಗಳನ್ನು ಗುರುತಿಸಿದೆ. ವಿಶೇಷವಾಗಿ ಕಟ್ಟಡ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ದಿನಗೂಲಿಗಳು, ಹಮಾಲರು, ಬೀದಿಬದಿ ವ್ಯಾಪಾರಿಗಳು ಹೀಗೆ ವಿವಿಧ ವರ್ಗಗಳನ್ನು ಗುರುತಿಸಲಾಗುತ್ತಿದೆ. ಈಗಾಗಲೇ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಪೂರ್ವ ಪ್ರಾಥಮಿಕ ಶಾಲೆ ಹಂತದಲ್ಲೇ ವಿಶೇಷವಾಗಿ ಬಡ ಕುಟುಂಬಗಳ ಮಕ್ಕಳಿಗೆ ಆಂಗ್ಲಭಾಷೆ ಪರಿಚಯ, ಆಟಗಳ ಮೂಲಕ ಕಲಿಕೆ, ಸಾಮಾನ್ಯ ಜ್ಞಾನ, ಮುಖ್ಯವಾಗಿ ಆರೋಗ್ಯ ಹಾಗೂ ಶುಚಿತ್ವದ ಕುರಿತಾಗಿ ವಿವಿಧ ಮಾಹಿತಿ ಮೂಲಕ ಮಕ್ಕಳ ಮನದಲ್ಲಿ ಅನೇಕ ಬದಲಾವಣೆಗೆ ಕಾರಣವಾಗಿರುವ ಅರ್ಲಿಸ್ಪಾರ್ಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಸ್ಮಿತಾ ದೇಶಪಾಂಡೆ ಅವರು, ಅಮೆರಿಕದಲ್ಲಿದ್ದುಕೊಂಡೆ, ಅಲ್ಲಿನ ತಜ್ಞರ ತಂಡದ ಸಲಹೆಯೊಂದಿಗೆ ಕಲಿಕಾ ವಿಧಾನ, ತರಬೇತಿ ಮಾದರಿಯನ್ನು ರವಾನಿಸುತ್ತಿದ್ದಾರೆ.

ಕೋವಿಡ್‌ ಲಾಕ್‌ ಡೌನ್‌ ಘೋಷಣೆ ಕಂಡು, ಮಕ್ಕಳ ಮೇಲೆ ಇದರ ಪರಿಣಾಮ ಬೀರಲಿದೆ. ನಿತ್ಯದ ಆದಾಯ ನಂಬಿ ಬದುಕುವವರಿಗೆ ಆಹಾರ ಸಮಸ್ಯೆ ಎದುರಾಗಿ, ಮಕ್ಕಳ ಪೌಷ್ಟಿಕತೆಗೆ ತೊಂದರೆ ಆಗಲಿದೆ ಎಂದರಿತು, ಮಕ್ಕಳಿಗೆ ತೊಂದರೆ ಆಗದಂತೆ ಆಹಾರಧಾನ್ಯಗಳ ಕಿಟ್‌ ವಿತರಣೆ ಇನ್ನಿತರೆ ವ್ಯವಸ್ಥೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿಯಲ್ಲಿನ ದೇಶಪಾಂಡೆ ಫೌಂಡೇಶನ್‌ ಕಾರ್ಯಪಡೆಯೊಂದಿಗೆ ಚರ್ಚಿಸಿ, ನೆರವು ಕಾರ್ಯದ ಬಗ್ಗೆ ತಿಳಿಸಿದ್ದರು. ಅದರಂತೆ ಕೋವಿಡ್‌ ಸಹಯೋಗದ ಕಾರ್ಯಕ್ರಮದಡಿಯಲ್ಲಿ ಮಕ್ಕಳ ಸ್ಥಿತಿಗತಿ ಗುರುತಿಸುವ, ಆ ಕುಟುಂಬದ ಸಂಕಷ್ಟ ಗಮನಿಸಿ ಅತ್ಯವಶ್ಯ ಇರುವವರಿಗೆ ಆಹಾರಧಾನ್ಯಗಳ ಕಿಟ್‌ ವಿತರಣೆ ಕಾರ್ಯ ಆರಂಭಿಸಿತ್ತು. ಇದೀಗ ನಿತ್ಯ 100-200 ಜನರಿಗೆ ಕಿಟ್‌ ವಿತರಿಸುತ್ತಿದೆ.

ಅಕ್ಕಿ ಇಲ್ಲದ ಕಿಟ್‌: ಮಕ್ಕಳ ಪೌಷ್ಟಿಕತೆಗೆ ತೊಂದರೆ ಆಗದ ರೀತಿಯಲ್ಲಿ ಆಹಾರಧಾನ್ಯಗಳ ಕಿಟ್‌ಗೆ ಮುಂದಾಗಿರುವ ದೇಶಪಾಂಡೆ ಫೌಂಡೇಶನ್‌ ಕೋವಿಡ್‌ ಸಹಯೋಗ ಪಡೆ, ಆಹಾರಧಾನ್ಯಗಳ ಕಿಟ್‌ನಲ್ಲಿ ಅಕ್ಕಿ ಹೊರತು ಪಡಿಸಿ ಇತರೆ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ರಾಜ್ಯ ಸರಕಾರ ಪಡಿತರ ಚೀಟಿ ಹೊಂದಿದವರು, ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿರುವುದರಿಂದ ಮತ್ತೆ ಅಕ್ಕಿ ನೀಡಿದರೆ ಅದರ ಪ್ರಯೋಜವಾಗದು ಎಂದರಿತು. ಅದರ ಬದಲು ಒಂದು ತಿಂಗಳಿಗೆ ಆಗುಷ್ಟು ಗೋಧಿಹಿಟ್ಟು, ರವಾ, ಸಕ್ಕರೆ, ಅಡುಗೆ ಎಣ್ಣೆ, ಒಣಮೆಣಸಿನಕಾಯಿ ಪುಡಿ, ಅರಿಶಿಣಪುಡಿ, ಸಾಸಿವೆ-ಜೀರಿಗೆ, ಉಪ್ಪು, ಬೇಳೆ ಇನ್ನಿತರೆ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಪಡಿತರ ಚೀಟಿ ಇದ್ದವರು ಹಾಗೂ ಇಲ್ಲದ ಕುಟುಂಬಗಳಿಗೆ ಅವರ ಅವಶ್ಯಕತೆಯನ್ನು ಪರಿಗಣಿಸಿ ಆಹಾರಧಾನ್ಯಗಳ ಕಿಟ್‌ ನೀಡಲಾಗುತ್ತಿದೆ. ಈ ಸಾರ್ಥಕ ಕಾರ್ಯಕ್ಕೆ ದೇಶಪಾಂಡೆ ಫೌಂಡೇಶನ್‌ ಸಿಬ್ಬಂದಿ, ಫೌಂಡೇಶನ್‌ ಸಿಬ್ಬಂದಿ, ಕೌಶಲಾಭಿವೃದ್ಧಿ ಕೇಂದ್ರದ ಹಳೇ ವಿದ್ಯಾರ್ಥಿಗಳು, ಸಾಮಾಜಿಕ ಜಾಲತಾಣದಿಂದಲೂ ನೆರವು ದೊರಕಿದೆ. ಕೋವಿಡ್‌ ಸಂಕಷ್ಟದಲ್ಲಿ ಮಕ್ಕಳ ಪೌಷ್ಟಿಕತೆ ಸಂರಕ್ಷಣೆ ಕುರಿತಾಗಿ ಚಿಂತಿಸುವ ಮಹತ್ವದ ಕಾರ್ಯ ಇದಾಗಿದೆ.

ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲೂ ಈ ಕಾರ್ಯ ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next